ಪ್ರೀತಿ ತುಂಬಿದ ಕಣ್ಣಲ್ಲಿ ಕಾಣುವ ಈ ತಾಯಂದಿರು ಅದೆಷ್ಟು ಸುಂದರ..
ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುತ್ತ ಇದ್ದೆ. ಆ
ದಾರಿಯಲ್ಲೊಂದು ಅoತರಾಷ್ಟ್ರೀಯ ಶಾಲೆ
ಹಾಗಾಗಿ ಮಕ್ಕಳನ್ನು ಬಿಡಲು - ಕರೆದೊಯ್ಯಲು ಬರುವ ದೈತ್ಯ ಕಾರುಗಳು ಅರ್ಧ ಮಾರ್ಗವನ್ನು ಕಬಳಿಸಿ
ಅಟ್ಟಹಾಸ ಮೆರೆಯವುದು ಸಾಮಾನ್ಯ ದೃಶ್ಯವಾಗಿತ್ತು. ಅಂದು ಅಲ್ಲಿದ್ದ ಪೋಷಕರ ಮಾತುಗಳು ಕಿವಿಗೆ
ಅಪ್ಪಳಿಸುತ್ತಿತ್ತು. "ನಮ್ ಚಿನ್ನುಗೆ ನಾನೇ ಊಟಾ ಮಾಡ್ಸ್ಬೇಕು ಗೊತ್ತಾ, ಆ ಕೆಲಸದವಳಿಗೆ ಕೆಲಸ ಅಸೈನ್ ಮಾಡಿ ಇವ್ನಿಗೆ ಊಟ ಮಾಡಿಸಿ ಆಗುವಾಗ ಐ
ವಿಲ್ ಬಿ ಯೆಗ್ಸ್ಹಾಸ್ಟೆಡ್!!" "ಪಿಂಕಿಗೆ ನಾನೇ ಅಡುಗೆ ಮಾಡ್ಬೇಕಪ್ಪ ಅದರ್ವೈಸ್
ಅವ್ಳು ಊಟಾನೆ ಮಾಡಲ್ಲ!" "ಕೂಕಿ ಏನು ಕಮ್ಮಿ ಇಲ್ಲ ಅವ್ಳು ಅಜ್ಜ ಅಜ್ಜಿ ಜೊತೆ ಇರೋಕೆ
ಒಪ್ಪಲ್ಲ ಗೊತ್ತಾ! ಶಿ ಆಲ್ವೇಸ್ ವಾಂಟ್ಸ್ ಮಿ ಟು ಬಿ ಬಿಸೈಡ್ ಹರ್!!"
ಬಿರುಸಾಗಿ ನಡೆದು
ಮನೆ ತಲುಪಿ ಒಂದು ಲೋಟ ಕಾಫಿ ಮಾಡಿಕೊಂಡು ಕಿಡುಕಿ ಬುಡದಲ್ಲಿ ಕೂತೆ. ಮೃದುವಾಗಿ ಬೀಸುತ್ತಿದ್ದ
ಗಾಳಿ ಹಾಯ್ ಅನ್ನಿಸಿತ್ತು.ಕಿವಿಗೆ ಬಿದ್ದ ಮಾತುಗಳು ಮತ್ತೆ ಮತ್ತೆ ಬುಗಿಲೇಳುತಿತ್ತು. ಮನಸ್ಸು
ಅಂದು ನಡೆದ ಕೆಲ ಘಟನೆಗಳ ನೆನಪಿಸಿತು...
*****************************************
ಪರೀಕ್ಷೆಗೆ
ಓದಲೆಂದು ರಜೆ ಇತ್ತು. ನೀರು ತುಂಬಿಸಿಕೊಳ್ಳಲು ಅಡುಗೆ ಮನೆಗೆ ಹೋದೆ. ಅಡುಗೆ ಅಕ್ಕ ಬೆಣ್ಣೆ
ತೊಳೆಯುತ್ತಿದ್ದರು. ನನಗೋ ಬೆಣ್ಣೆ ಎಂದರೆ ಪ್ರಾಣ. ಕೇಳೋಣ ಎಂದು ಅಂದುಕೊಂಡೆ ಅದೇಕೊ ಮುಜುಗರ.
ನೀರು ತುಂಬಿಕೊಂಡು ಹೋಗುವಾಗ ಕೇಳಿ ಬಿಡಲೇ ಎಂದು ಅನಿಸುತಿತ್ತು. ಆದರೂ ಸುಮ್ಮನಾದೆ. ಅಷ್ಟರಲ್ಲಿ
ಅಕ್ಕ ಕೂಗು ಹಾಕಿದರು "ನೀರು ಸರಿಯಾಗಿ ನಿಲ್ಸ್ಬೇಕು,ನೋಡಿಲ್ಲಿ ಎಷ್ಟು ಚೆಲ್ಲಿದೆ ..." ಅಯ್ಯೋ ಎಂದುಕೊಂಡು ಹೋದೆ.
ಅಕ್ಕ "ಇಲ್ಲಿ ಬಾ ಬಟ್ಟೆ ತಗೋ" ಎಂದರು. ಒಳ ಹೋದರೆ ಬೆಣ್ಣೆ ಕೊಟ್ಟು , ತುಟಿ ಮೇಲೆ ಬೆರಳಿಟ್ಟು "ಯಾರಿಗೂ ಹೇಳ್ಬೇಡ" ಎಂದು
ಕೆನ್ನೆ ಚಿವುಟಿ ನಕ್ಕರು.ಅವರಿಗೆ ಮಕ್ಕಳಿರಲಿಲ್ಲ ಆದರೆ ಅವರ ಕಣ್ಣಲ್ಲಿ ಇದ್ದ ಪ್ರೀತಿ
ಕಡಲಿನಷ್ಟು!ನೀರು ಚೆಲ್ಲಿದ ನೆಪ ಮಾಡಿ ಬೆಣ್ಣೆ ಕೊಟ್ಟ ಅಕ್ಕ...
******************************************
ವಿದ್ಯಾರ್ಥಿ ನಿಲಯದಲ್ಲಿ ಸಂಜೆ ಏಳರವರೆಗೆ ಮಾತ್ರ ಅನುಮತಿ ಇತ್ತು.
ತಡವಾದರೆ ಸ್ನೇಹಿತರ/ನೆಂಟರ ಮನೆಗೆ ಹೋಗಬೇಕಿತ್ತು. ಅಂದು ಕಾರ್ಯಕ್ರಮವೊಂದಕ್ಕೆ ಹೋಗಬೇಕಿತ್ತು. ಏಳುವರೆಗೆ ಮುಗಿಯಬೇಕಿದ್ದದ್ದು ಎಂಟುವರೆ ಆದರೂ ಮುಗಿದಿರಲಿಲ್ಲ. ಏನು
ಮಾಡಲು ತೋಚದೆ ಲಕ್ಷ್ಮೀ ಟೀಚರ್ ಅವರಲ್ಲಿ ಉಳಿದುಕೊಳ್ಳಲು ಕೇಳಿಕೊಂಡೆ. ಬಸ್ ನಿಲ್ದಾಣದಲ್ಲಿ
ಎಷ್ಟು ಹೊತ್ತು ಕಾದರು ಬಸ್ ಬರದೆ ಇದ್ದಾಗ ಆಟೋ ಹತ್ತಿ ಹೋಗುವ ಧೈರ್ಯ ಮಾಡಿದೆ. ರಾತ್ರಿ
ಒಂಬತ್ತುವರೆ ಕಳಿದಿತ್ತು ಟೀಚರ್ ಅದಾಗಲೇ ಮುನ್ನೂರು ಮೀಟರ್ ಮುಂದೆ ಬಂದು ನಿಂತು
ಚಡಪಡಿಸುತ್ತಿದ್ದರು. ರಕ್ತ ಸಂಬಂಧವಿರದ, ಮತ್ತರದ್ದೋ ಮಕ್ಕಳ ಬಗ್ಗೆ ಇಷ್ಟೊಂದು ಕಾಳಜಿ ತೋರಿಸಿದ್ದರು. ತಮ್ಮ
ಸ್ವಂತ ಮಕ್ಕಳ ಆರೈಕೆ ಮಾಡಿದ್ದರ ಬಗ್ಗೆ ಬೀಗುವವರ ನೋಡಿದಾಗ ಟೀಚರ್ ನೆನಪಾಗಿ ಕಣ್ಣು ತುಂಬಿದ್ದು
ಉಂಟು.
ಮತ್ತೊಬ್ಬರು ನನ್ನ
ಬಾಲ್ಯ ಸ್ನೇಹಿತೆ ಗೌರಿಯ ತಾಯಿ. ಪ್ರತಿ ನಿತ್ಯ ಗೌರಿಯ ಮನೆಗೆ ಹೋಗಿ ನಂತರ ಒಟ್ಟಿಗೆ ಶಾಲೆಗೆ
ಹೋಗುತ್ತಿದ್ದೆವು. ಆಕೆಯ ತಾಯಿ ಪ್ರತಿ ಬಾರಿ ಹೋದಾಗಲೂ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ ಆಗುವ
ಅದೆಷ್ಟೋ ಅದ್ಭುತ ವಿಷಯಗಳನ್ನು ಹೇಳಿ ಕೊಡುತ್ತಿದ್ದರು. ಮತ್ತೊಬ್ಬರಲ್ಲಿರುವ ಒಳ್ಳೆಯ ಗುಣಗಳನ್ನು
ಮಾತ್ರ ಹೆಕ್ಕಿ ಸಕಾರಾತ್ಮವಾಗಿರುವ ಕಲೆಯನ್ನು ಬೆಳೆಸಿಕೊಳ್ಳಲು ವಿವೇಕಾನಂದರ ಕಥೆಗಳನ್ನು
ಹೇಳಿದ್ದು ಈಗಲೂ ಕಣ್ಣು ಕಟ್ಟಿದಂತಿದೆ.ಸ್ವಂತ ಮಕ್ಕಳೊಂದಿಗೆ ಕಾಲ ಕಳೆದು ಅದನ್ನೇ ಸಾಧನೆ ಎಂದು
ಪ್ರದರ್ಶಿಸುವವರ ನಡುವೆಯೂ ಇಂಥಹ ಮಹಾ ತಾಯಿಯ ಮಾರ್ಗ ದರ್ಶನ ಸಿಕ್ಕಿದ್ದು ಪುಣ್ಯವೇ ಸರಿ!
********************************************
ಯಾವ ತೋರಿಕೆಗು ಅಲ್ಲದೆ, ನಿಸ್ವಾರ್ಥ ಮನಸಿನಿಂದ, ಏನ್ನನ್ನೂ ಅಪೇಕ್ಷಿಸದೆ ಮತ್ತೊಂದು ಮಗುವನ್ನು ತನ್ನ ಮಗುವೇ ಎಂದು
ಪ್ರೀತಿ ತುಂಬಿದ ಕಣ್ಣಲ್ಲಿ ಕಾಣುವ ಈ ತಾಯಂದಿರು ಅದೆಷ್ಟು ಸುಂದರ..
Comments
Post a Comment