ಮಹಾನಗರಿಗೆ ಮರುಳಿದ ಮತ್ತೆಯೂ ಮುಸ್ಸಂಜೆ ದೀಪದ ಎದುರು ಕೂತಾಗ ಕಾಡುವ ನೆನಪುಗಳು...
ಹೊಟ್ಟೆಪಡಿಗಾಗಿ ಮಹಾನಗರಿಗಳಲ್ಲಿ ಬಿಡಾರ ಹೂಡಿರುವ ನಮಗೆ ಹಬ್ಬ
ಹರಿದಿನಗಳಿಗೆ ಊರಿಗೆ ಹೋದಾಗ ಹೆಚ್ಚಿಗೆ ಸಮಯ ಸಿಕ್ಕಿದ ಅನುಭವ ಆಗುವುದು ಸಹಜ. ಅದಲ್ಲದೆ
ಕಳೆದುಕೊಂಡದನ್ನು ಮತ್ತೆ ಪಡೆದು ಬೆಸೆದುಕೊಂಡ ಭಾವ. ಬಸ್ಸಿಂದ ಇಳಿದು ಮನೆಗೆ ನಡೆದುಕೊಂಡು
ಹೋಗುವಾಗ ದಾರಿಯಲ್ಲಿ ಸಿಗುವ ದೊಡ್ಡ ಗಡಿಯಾರ ಕಂಬ, ಅದೇ ಹಳೆಯ ಕಟ್ಟಡಗಳು, ತಾಲೂಕು ಮೈದಾನ ಹೀಗೆ ಇವೆಲ್ಲವೂ ಪಿಸುಮಾತಿನಲ್ಲಿ ಅಲ್ಲಿ ಕಳೆದ ಕ್ಷಣಗಳನ್ನು
ನೆನಪಿಸಿದಂತೆ ಭಾಸವಾಗಿ ಮುಗುಳುನಗೆ ಮುಖವನ್ನು ಅರಳಿಸಿದ್ದು ಉಂಟು.
ಮುಸ್ಸಂಜೆಯ ದೀಪ ಹೊತ್ತಿಸಿ ಮನೆಯ
ಜಗುಲಿಯಲ್ಲಿ ಕೂತು ಅಪ್ಪ ಅದೇನೋ ಆಲೋಚನೆಯಲ್ಲಿದ್ದಾಗ ನಾನು ಅವರೊಟ್ಟಿಗೆ ನಡೆಸುತ್ತಿದ್ದ
ಸಂಭಾಷಣೆಗಳು ಮನೆ ಬಿಟ್ಟು ಮರಳಿದ ಮತ್ತೆಯೂ ಕಿವಿಯಲ್ಲಿ ಗುಂಯ್ ಗುಟ್ಟುತ್ತಿರುತ್ತದೆ. ಪೂರ್ಣಿಮೆಯ ಬೆಳಕು, ಕುಟುರ್ ಪಕ್ಷಿಯ ಸದ್ದು, ಮಿಣುಕು ಹುಳ ,ಅಪ್ಪನ ಬೆಚ್ಚಗಿನ ಮಡಿಲು, ತಂಪು ಗಾಳಿ ...
ನಾನು: ಏನು ಯೋಚನೆ ಅಪ್ಪ?
ಅಪ್ಪ: ನಿಮಗೆ ಇಷ್ಟು ಒಳ್ಳೆ ಪರಿಸರ ಸಿಗಲ್ಲ ಅನ್ನೋ ಯೋಚನೆ ಅಷ್ಟೆ.
ನಾನು: ಹೌದು ಅಪ್ಪ. ನಮಿಗೆ ಅದು ಸಾಧ್ಯ ಆಗೋದು ಕಷ್ಟನೆ ಅಲ್ವ
ಅಪ್ಪ?!
ಅಪ್ಪ: ಈಗ ನಾವು ಅನುಭವಿಸುತ್ತಿರುವ ಈ ಜಾಗವನ್ನು ಯಾವುದೋ ಬ್ಯಾಂಕ್
ಸ್ವಂತ ಕಟ್ಟಡ ನಿರ್ಮಿಸಲು ಕೇಳಿತ್ತು. ಒಂದೊಂದು ಪೈಸೆಗು ಕಷ್ಟ ಇದ್ದ ಆ ದಿನಗಳಲ್ಲಿಯೂ ಇದನ್ನು
ಮಾರಾಟ ಮಾಡಲು ನನ್ನ ಮಾವ ಬಿಡಲಿಲ್ಲ.
ನಾನು: ಯಾಕಪ್ಪಾ?
ಅಪ್ಪ: ನೋಡು ಪುಟ್ಟ, ಬುಲ್ಡೋಜರ್ ಆಗಲಿ ಮತ್ತೊಂದಗಲಿ ಇಲ್ಲದ ಆ ಕಾಲದಲ್ಲಿ ಏನು ಇರದ ಭೂಮಿಯನ್ನು ಕೈಯಲ್ಲೇ ತಟ್ಟು ಮಾಡಿ , ಮೇಲಿನ ತಟ್ಟಿನಲ್ಲಿ
ಕಾಫಿ ಸಸಿಗಳನ್ನು ನೆಟ್ಟು,ಹಲಸು,ಮಾವು, ಪನ್ನೆರಳೆ, ನೇರಳೆ, ಅಮ್ಮೆ ಹಣ್ಣು, ಬೇಲದ ಹಣ್ಣು,ಆಜಿನ ಹಣ್ಣು, ದೊಡ್ಡ ಮರವೊಂದಕ್ಕೆ
ಕಟ್ಟಿದ ತೂಗಯ್ಯಾಲೆ,ಕೆಳಗಿನ ತಟ್ಟಿನಲ್ಲಿ
ಗದ್ದೆ, ಅದರಲ್ಲೊಂದು ಕೆರೆ, . ಒಂದು ಅದ್ಭುತ
ಜಗತ್ತನ್ನು ನಮಿಗೆ ಕೊಟ್ಟಿರುವಾಗ ಅದನ್ನು ಯಾರಿಗಾದರು ಮಾರುವುದನ್ನು ಕಲ್ಪಿಸಿಕೊಳ್ಳಲು ಅಸಾಧ್ಯ!
ನಾನು : ಅಲ್ವ ಅಪ್ಪ! ನಾವಿಲ್ಲಿದ್ದಾಗ ಇದ್ಯಾವುದೂ ವಿಶೇಷ ಅನ್ನಿಸಿಯೆ ಇರಲಿಲ್ಲ. ಈಗ ಒಂದು
ಬಾಳೆ ಎಲೆಗೆ ನಾಲ್ಕು ರೂಪಾಯಿ ಕೊಟ್ಟು ತರುವಾಗ ಅಟ್ಟಿ ಅಟ್ಟಿ ಎಲೆ ತಂದು ಕಡುಬು ಮಾಡಿ ತಿಂದದ್ದು ನೆನಪಾಗುತ್ತೆ.
ಅಪ್ಪ: ನಿಜ ಪುಟ್ಟ, ಬಿಟ್ಟು ದೂರ ಹೋದಾಗಲೇ
ಅದರ ಬೆಲೆ ತಿಳಿಯೋದು ಅಲ್ವ?
ನಾನು: ರಾತ್ರಿ ಹಗಲು ವ್ಯತ್ಯಾಸವೆ ತಿಳಿಯದಷ್ಟು ಜಳಪಿಸುವ ಬೆಳಕಿನ ಜಗಮಗದಲ್ಲಿ ಕಳೆದು ಕರಗಿ ಹೋದಂತೆ ಅಲ್ಲಿ ಆದ್ರೆ ಇಲ್ಲಿ ಪೂರ್ಣಿಮೆಯ
ಕೆಳಗೆ ಶಾಂತವಾಗಿ ಉರಿದಿರುವ ಈ ದೀಪ ನಮ್ಮ ಅಂತರಂಗ ತೆರೆದಿಟ್ಟ ಭಾವ.
ಅಪ್ಪ: ಯಾವುದಾದ್ರೂ ಅಷ್ಟೆ ಅತೀ ಆದ್ರೆ ಅಜೀರ್ಣ ಆಗೋದೇ!
ನಾನು : ಅಪ್ಪ ಈಗೆನೋ ಸರಿ ಮುಂದೇನು ನಮ್ಮ ತೋಟ ,ಕೆರೆ ಇವೆಲ್ಲ ಹೀಗೆ ಇರುತ್ತಾ?
ಅಪ್ಪ: ನಾನಿರೋವರೆಗೂ ಈ ತೋಟ ಹೀಗೆ ಇರುತ್ತೆ, ಗದ್ದೆಲಿ ಬತ್ತನೇ ಬೆಳಿತೀನೆ ಯಾವುದೇ ಕಾರಣಕ್ಕೂ
ಶುಂಠಿ ಬೆಳಿಯಲ್ಲ.
ನಾನು: ನಷ್ಟ ಅಲ್ವ ಅಪ್ಪ? ಕೆಲಸಕ್ಕೆ ಯಾರು
ಸಿಗ್ತಾರೆ? ಹಾಗೆ ಸಿಕ್ಕಿದ್ರು ಸಂಬಳ ಕೊಟ್ಟು ಪೂರೈಸುತ್ತಾ ಅಪ್ಪ?
ಅಪ್ಪ: ದೇವ್ರು ಶಕ್ತಿ ಕೊಟ್ಟಷ್ಟು ದಿನ ನಾನು ನನ್ನ ಕೆಲಸ ಮಾಡುತ್ತೇನೆ ಉಳ್ದದ್ದು ಆ
ಶಕ್ತಿಗೆ ಬಿಟ್ಟದ್ದು.
ಮಹಾನಗರಿಗೆ ಮರುಳಿದ ಮತ್ತೆಯೂ ಮುಸ್ಸಂಜೆ ದೀಪದ ಎದುರು ಕೂತಾಗ ಕಾಡುವ ನೆನಪುಗಳು...
Comments
Post a Comment