ಅಜ್ಜಿ ತನ್ನ ಪುಳ್ಳಿ ಜೊತೆಗೆ ಬೆಸೆದುಕೊಂಡ ರೀತಿ ಜೀವ ಸೆಲೆ ಎಂದರೆ ಏನು ಎಂಬುದನ್ನು ಅದರ ಸೌಂದರ್ಯವನ್ನು ಅಚ್ಚುಕಟ್ಟಾಗಿ ನಿರೂಪಿಸಿದಂತು ಸ್ಪಷ್ಟ!
ಕೆಲವು ಪರಿಮಳ ಗತಿಸಿದ
ಘಟನೆಗಳನ್ನು ಮತ್ತೊಮ್ಮೆ ನಮ್ಮ ಮುಂದೆ
ಕಟ್ಟಿಕೊಡುತ್ತದೆ. ಪತಂಜಲಿ ಬಟ್ಟೆ ಸಾಬೂನಿನ ಪರಿಮಳ ವಿದ್ಯಾರ್ಥಿ ನಿಲಯದಲ್ಲಿ ಬಟ್ಟೆ ಒಗಿಯುವಾಗಾ
ನಮ್ಮ ಸ್ನೇಹಿತೆಯರನ್ನು
ಗೊಳಾಡಿಸಿದ ದಿನಗಳನ್ನು , ಪೊಂಡ್ಸ್ ಕ್ರೀಮ್
ಪರಿಮಳ ,ಅಮ್ಮ ನಮಗೆ
ಚಳಿಗಾಲದಲ್ಲಿ ಕ್ರೀಮ್ ಹಾಕಿ, ಬೆಚ್ಚೆಗೆ ಇರಲು
ಕಾಲು ಚೀಲ ಹಾಕಿಸಿ,ಟೊಪ್ಪಿ ಹಾಕಿಸಿ
ಕೂರಿಸಿತಿದ್ದದ್ದನ್ನು, ಅಷ್ಟೆ ಅಲ್ಲ
ದಾರಿಯಲ್ಲಿ ಎಲ್ಲೋ ಕೊಳೆತ ಮೊಟ್ಟೆಯ ವಾಸನೆಯಂತೂ ಗಡಗಡ ನಡುಗುತ್ತ ನಿಲ್ಲುತ್ತಿದ ರಸಾಯನ
ಶಾಸ್ತ್ರದ ಪ್ರಯೋಗಾಲಯ ಚಿತ್ರಿಸಿ ಸಣ್ಣಕೆ
ಕಂಪಿಸಿದ್ದು ಉಂಟು!
ಪರಿಶುದ್ಧ ಕೊಬ್ಬರಿ ಎಣ್ಣೆಯ ಪರಿಮಳವಂತೂ ನೆನಪಿಸುವುದು
ಸುಬ್ಬಿ ಅಜ್ಜಿಯನ್ನು .
ಸರಿಯಾಗಿ ಹತ್ತು ಗಂಟೆಗೆ ಸಣ್ಣ ಡಬ್ಬಿ ಕೊಬ್ಬರಿ ಎಣ್ಣೆಯನ್ನು ,ಪುಟ್ಟ ಬಟ್ಟೆಯ ಚೀಲ ಅದರಲ್ಲಿ ಆಕೆ ಹಣಿಗೆ,ಮತ್ತೊಂದು ಡಬ್ಬಿ, ಅದರಲ್ಲಿ ಬಟ್ಟು , ಇವನ್ನೆಲ್ಲ ತೆಗೆದುಕೊಂಡು ಮನೆಯ ಜಗುಲಿಯಲ್ಲಿ ಕೂತು ೨ ಬಿಂದು
ಎಣ್ಣೆಯನ್ನು ನೆತ್ತಿಗೆ ಹಾಕಿ ಜಡುಕು ತೆಗೆದು
ಸಣ್ಣ ತುರುಬು ಕಟ್ಟಿ,ಬಿದ್ದ ತಲೆ
ಕಸವನೆಲ್ಲ ತೆಂಗಿನ ಬುಡಕ್ಕೆ ಹಾಕಿ ಕೈಯೊಂದನ್ನು ಹಣೆಗೆ ಇಟ್ಟು ದಾರಿಯನ್ನು ಯಾರನ್ನೋ
ನಿರೀಕ್ಷಿಸುವಂತೆ ನೋಡುತ್ತಾಳೆ. ಯಾರು
ಕಾಣದಿದ್ದಾಗ ಒಳಗೆ ಹೋಗುವಳು. ಅಷ್ಟರಲ್ಲಿ ಪುಳ್ಳಿ ಬಂದು ತಿನ್ನಲು ಏನಾದರೂ ಕೊಡು ಎಂದು ಕೇಳಿದಾಗ
ಮನೆ ಬಿಟ್ಟು ಎಲ್ಲಿಯೂ ಹೋಗದ ಸುಬ್ಬಿ ಅಜ್ಜಿ ಏನು ತಾನೆ ಕೊಡುವಳು?! ಆಕೆ ಈರುಳ್ಳಿ ಒಂದನ್ನು ಕೆಂಡದಲ್ಲಿ ಸುಟ್ಟು ಕೊಡುವಳು.ಅದರ ರುಚಿ
ಅದ್ಭುತ! ಆಕೆಯ ಮಡಿಲಲ್ಲಿ ಮಲಿಗಿಕೊಂಡು ಮುದ್ದು ಮಾಡೆಂದು ಪುಳ್ಳಿ ಕೇಳಿದಾಗ ತಲೆ ಸವರುತ್ತಾ , ಬೆನ್ನು ತಟ್ಟುತ್ತ ಕಾಗಕ್ಕ- ಗೂಬಕ್ಕನ ಕಥೆ ಹೇಳುವಳು . ಪುಳ್ಳಿ
ಮತ್ತೊಂದು ಕಥೆ ಬೇಕು ಅಂದಾಗ" ಕಥೆ ಹೇಳು ಕಥೆ ಹೇಳು ಕುಂಞಿ ಬಂಟ ನಾನೇನು ಹೇಳ್ಲಿ ಮಣ್ಣ್
ಹೆಂಟೆ ನೀರಿಗೆ ಬಿದ್ರೆ ಕರಗಿ ಹೋಪೆ, ಬೆಟ್ಟದಲ್ಲಿ ಇದ್ರೆ
ಒಣಗಿ ಹೋಪೆ!!" ಎನ್ನುತ್ತಾ ನಗುವಳು.
ಆಕೆ ಗದ್ದೆಗೆ ಎಮ್ಮೆಮಂಡೆ ಕುಯ್ಯಲು ಹೋದಾಗ ಈ
ಪುಳ್ಳಿಯು ಅಜ್ಜಿಗೆ ಹೆದರಿಸಲೆಂದೆ ಆಳ ಇಲ್ಲದ ಸಣ್ಣ ಕೆರೆ ಹತ್ತಿರ ಹೋಗುತ್ತದೆ. ಅಜ್ಜಿ
ಗಾಬರಿಯಿಂದ ಓಡಿ ಬಂದಾಗ ಚಪ್ಪಾಳೆ ತಟ್ಟುತ್ತ ಮತ್ತೆ ಅಜ್ಜಿ ಹತ್ತಿರ ಹೋಗುತ್ತದೆ. ಅಜ್ಜಿ ಪುಳ್ಳಿ
ದೋಣಿ ಮಾಡಿ ತೋಡಿನಲ್ಲಿ ಬಿಡುವುದು, ಒಟ್ಟಿಗೆ ಕೂತು
ಚೆನ್ನಮಣೆ, ಕಟ್ಟೆಮನೆ, ಕಲ್ಲಾಟ ಆಡುವುದು, ಬಾವಿ ಇಂದ ನೀರು ಸೇದಿ ಮರ್ಗ,ದವನ,ಸೇವಂತಿಗೆ
ಹಾಕುವುದು,ತೆಂಗಿನ ಗರಿಯಲ್ಲಿ
ಕೈ ಗಡಿಯಾರ ಮಾಡಿ ಸಂಭ್ರಮಿಸುವ , ಈ ಎರಡು ಜೀವಗಳು
ಯಾಂತ್ರಿಕವಾಗಿ ನಡೆಯುತ್ತಿರುವ ಕೊಂಕು, ವಿಕಾರತೆ, ಸಣ್ಣತನ ಎಲ್ಲಾ ಇರುವ ಈ ಪ್ರಪಂಚದಲ್ಲಿ ಅವರದ್ದೇ ಆದ ಒಂದು ಚಂದದ ಪ್ರಪಂಚ
ನಿರ್ಮಿಸಿಕೊಂಡು ಅಲ್ಲಿ ನಗು, ಸಂಭ್ರಮ,ಪ್ರಕೃತಿಯೊಂದಿಗೆ ಸ್ವಚಂದವಾದ ವಿಹಾರ ಇವುಗಳಿಗೆ ಮಾತ್ರ ಅವಕಾಶ ಕೊಟ್ಟಿರುವರೇನೋ
ಅನಿಸುತ್ತದೆ. ಸುಬ್ಬಿ ಅಜ್ಜಿ ತನ್ನ ಪುಳ್ಳಿ ಜೊತೆಗೆ ಬೆಸೆದುಕೊಂಡ ರೀತಿ ಜೀವ ಸೆಲೆ ಎಂದರೆ ಏನು
ಎಂಬುದನ್ನು ಅದರ ಸೌಂದರ್ಯವನ್ನು ಅಚ್ಚುಕಟ್ಟಾಗಿ ನಿರೂಪಿಸಿದಂತು ಸ್ಪಷ್ಟ!
Beautifully penned sum😘 this brought tears in my eyes. ✨💫
ReplyDeleteThank you so much Devaa♥️🤗
ReplyDelete