ಆ ದಿನಗಳನ್ನು ಮತ್ತೊಮ್ಮೆ ಬದುಕಿದೆವು
ಕಾಲೇಜ್ ದಿನಗಳಲ್ಲಿ ಸ್ನೇಹಿತೆಯರ ಜೊತೆ ಕಳೆದ ದಿನಗಳು ಅವಿಸ್ಮರಣೀಯ!
ಅಲ್ಲಿ ಕಲಿತ ಪಾಠಗಳು ಅನೇಕ. ದ್ವಿತೀಯ ವರ್ಷದ ಬಿಎಸ್ಸಿಯಲ್ಲಿರುವಾಗ ನಮಗೆ ಬಂದ ಒಂದು
ಕುತೂಹಲ ಅದೇನೆಂದರೆ ಲಯ, ಓದುವುದರಲ್ಲಿ ಮೊದಲು ಎಂದೋ ಅಥವಾ ಬಹಳ ಶ್ರೀಮಂತೆ ಎಂದೋ ನಮ್ಮ
ಜೊತೆ ಅಷ್ಟಾಗಿ ಸೇರದೆ ತನ್ನ ಪಾಡಿಗೆ ಇರುತ್ತಾಳೆ ಎಂಬುದು.ಒಂದು ದಿನ
ಅವಳಲ್ಲಿ ಕೇಳಿದೆವು "ಅದೇಕೆ ನೀನು ಯಾರಲ್ಲಿಯೂ ಹೆಚ್ಚು ಮಾತನಾಡುವುದಿಲ್ಲ ..." ಆಕೆ ಸಣ್ಣದಾದ ನಗುವೊಂದನ್ನು ತರಿಸಿಕೊಂಡು ಹೇಳಿದಳು " ಹಾಗೇನೂ ಇಲ್ಲ." “ಮತ್ತೆ ಪ್ರತಿ ಬಾರಿ ಕರೆದಾಗಲೂ
ಏನಾದರೂ ಕಾರಣ ಹೇಳಿ ತಪ್ಪಿಸಿಕೂಳ್ತಿ ನಮ್ಮೊಡನೆ ಹೊರಗೆ ಮಾರುವ ಚುರುಮುರಿ ತಿನ್ನುಲು ನಿನಗೆ
ಇಷ್ಟ ಇಲ್ಲದಿದ್ದರೆ ಕಡೆ ಪಕ್ಷ ಒಟ್ಟಿಗೆ ಬರಬಹುದಲ್ಲಾ?" ಎಂಬ
ನಮ್ಮ ಪ್ರಶ್ನಗೆ ಆಕೆ ಅಂದಳು" ನನಗೆ ಚುರುಮುರಿ ತಿನ್ನುವ ಆಸೆ ಇಲ್ಲ ಅಂತಲ್ಲ ಅದಕ್ಕಾಗಿ
ಖರ್ಚು ಮಾಡುವ ಮನಸ್ಸಿಲ್ಲ ಅಷ್ಟೇ" ನಾವು ಕೇಳಿಯೇ ಬಿಟ್ಟೆವು "ಹಾಗಾದರೆ ಪ್ರತಿ ದಿನ ನಿನ್ನ ಬಟ್ಟೆಗೆ ಹೊಂದುವ ಬಣ್ಣದ
ಕ್ಲಿಪ್, ನಿನ್ನ ಉಗುರಿನ ಬಣ್ಣಗಳಿಗೆ "...ಅವಳ ಕಣ್ಣುಗಳು ತೇವ ಆಗಿತ್ತು.
ಅಂದು ಒಂದು ಘಂಟೆ
ಮೊದಲೇ ತರಗತಿಗಳು ಬಿಟ್ಟಿದ್ದರಿಂದ ನಾವೆಲ್ಲ ಅಲ್ಲೆ ಮರದಡಿಯಲ್ಲಿ ಕೂತು ಲಯಳಲ್ಲಿ ಮಾತನಾಡಲು ಶುರು ಮಾಡಿದೆವು. ಅವಳನ್ನು ನೋಯಿಸುವ ಉದ್ದೇಶ
ಇರದಿದ್ದರು ಅವಳಿಗೆ ನೋವಾಗಿತ್ತು.ಅವಳು ಅದೇನನ್ನೋ ಹೇಳ ಹೊರಟಳು " ನನಗೆ ಅಪ್ಪ ಇಲ್ಲ, ಅಮ್ಮ ನನ್ನನು ಮಾವನ ಮನೇಲಿ
ಇರಿಸಿದ್ದಾರೆ . ಅಲ್ಲಿ ಮನೆ ಕೆಲಸ ಮುಗಿಸಿ ಓದುತ್ತೇನೆ. ಮಾವನ ಮಗಳು ನನ್ನದೇ ಜೊತೆ ಆದರೆ ಅವಳು ಒಂದು ಕೆಲಸ
ಮಾಡುತ್ತಿರಲಿಲ್ಲ. ಕಾಲು ನೀಡಿ ಕೂತು ಟಿವಿ ನೋಡಿಕೊಂಡು..ಕಂಗಳು ಮತ್ತೆ ತೇವ ಆಗಿತ್ತು. ಅವಳಿಗೆ ಓಡಾಡಲು ಗಾಡಿ ಇದೆ, ಜಸ್ಟ್ ಪಾಸ್
ಆದದಕ್ಕೆಯೇ ಮೂವತ್ತು ಸಾವಿರದ ಫೋನ್ ಆದರೆ ತರಗತಿಯಲ್ಲಿ ಮೊದಲು ಇರುವ ನನಗೆ ? ನನ್ನ ಅಮ್ಮನಿಗೆ ಅದೆಷ್ಟು ಸಂಕಟವಾಗುತ್ತದೆ ಎಂದು ನನಗೆ ಅರ್ಥವಾಗುತ್ತಿತ್ತು. ಅಮ್ಮ
ಅಂಕಪಟ್ಟಿ ನೋಡಿದಾಗಲೆಲ್ಲ ನನಗೆ ಏನು ಬೇಕೆಂದು ಕೇಳುತ್ತಿದ್ದರು. ಮೂರು ನಾಲ್ಕು ಕಡೆಗಳಲ್ಲಿ
ಅಡುಗೆ ಕೆಲಸಕ್ಕೆ ಹೋಗಿ ನನ್ನ ಓದಿಗೆ -ಬೇರೆ ಖರ್ಚುಗಳಿಗೆ ಹಣ ಹೊಂದಿಸುವ ಅಮ್ಮನಲ್ಲಿ ಹೀಗೆಲ್ಲ ಕೇಳುವುದು ಕ್ರೌರ್ಯ
ಅನ್ನಿಸುತ್ತಿತ್ತು ಆದರೆ ಅಮ್ಮ ನಾನೂ ಹೇಳುವವರೆಗೂ ಬಿಡುತ್ತಿರಲಿಲ್ಲ. ಮೂವತ್ತು ರೂಪಾಯಿಗೆ ಈ
ಬಣ್ಣ ಬಣ್ಣದ ಕ್ಲಿಪ್ ಹಾಗೂ ಇಪ್ಪತ್ತು ರೂಪಾಯಿಗೆ ಉಗುರಿನ ಬಣ್ಣ ತೆಗಿಸಿಕೊಂಡೆ. ಅವಳಿಗೆ
ಸಮಾಧಾನವಾಗಿತ್ತು ಅದನ್ನು ನೋಡಿ ನನಗೆ ಸಂತೋಷವಾಗಿತ್ತು. ಇನ್ನು ಚುರುಮುರಿ ತಿನ್ನಲು ಹೇಗೆ ತಾನೆ ಮನಸ್ಸು ಬಂದೀತು?ನಿಮಗೆ ಇದನ್ನೆಲ್ಲ ಹೇಳಿ ಅನುಕಂಪ ಗಿಟ್ಟಿಸಿಕೊಳ್ಳುವ ಆಸೆ ಇಲ್ಲ. ನೀವು ಕೇಳಿದಕ್ಕೆ ಹೇಳಿದೆ ಅಷ್ಟೇ.."
ಕೊನೆ ವರ್ಷದ ಬಿಎಸ್ಸಿ, ಲಯ ನಮ್ಮೆಲ್ಲರಿಗೂ ಬಹಳ ಅಚ್ಚುಮೆಚ್ಚಿನ ಗೆಳತಿ ಆಗಿದ್ದಳು. ಅವಳಿಂದ ನಾವು ಅದೆಷ್ಟೋ ಸದ್ವಿಚಾರಗಳನ್ನು ಕಲಿತ್ತಿದ್ದೇವು. ನಮ್ಮೆಲ್ಲರ ಅಂಕಗಳು ಹೆಚ್ಚಾಗಿದ್ದವು. ನಮ್ಮೊಳಗೆ ಒಂದು ಹೊಸ ಕಿಡಿಯನ್ನು ಹೊತ್ತಿಸಿದ್ದಳು.ನಮ್ಮೆಲ್ಲರಿಗೆ ಅವಳು ಪಾಠ ಹೇಳಿಕೊಟ್ಟ ರೀತಿ ಮರೆಲಾಗದು. ಕೊನೆ ದಿನ ನಾವೆಲ್ಲರೂ ಅವಳಿಗೆ ಚುರುಮುರಿ ಕೊಡಿಸಿ ಸಂಭ್ರಮಿಸಿದ್ದು ಅಚ್ಚಳಿಯದೆ ಉಳಿದಿದೆ.ಅದಾಗಿ ನಾವೆಲ್ಲರೂ ಸ್ನಾತಕೋತ್ತರ ಪದವಿಗೆಂದು ಬೇರೆ ಬೇರೆ ವಿಶ್ವವಿದ್ಯಾನಿಲಯ ಸೇರಿದೆವು. ಲಯ ಅತ್ಯಂತ ಹೆಚ್ಚು ಅಂಕ ಪಡೆದು ಹೆಸರಾಂತ ವಿಶ್ವವಿದ್ಯಯಾನಿಲಯಕ್ಕೆ ಸೇರಲು ಅವಕಾಶ ಪಡೆದದ್ದು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿತ್ತು . ಆದರೆ ವಿಧಿ ಮಾತ್ರ ತನ್ನ ಅಟ್ಟಹಾಸ ಮೆರೆದಿತ್ತು ಲಯಳ ಮಾವ ತೀರಿಕೊಂಡರು, ಆಕೆ ಬೇರೆ ದಾರಿ ಇರದೆ ಶಾಲವೊಂದನ್ನು ಸೇರಿಕೊಂಡಳು. ನಮ್ಮೆಲ್ಲರಿಗೂ ಪಾಠ ಹೇಳಿಕೊಟ್ಟು ಅವಳ ಆಸೆ ಮಾತ್ರ ನುಚ್ಚು ನೂರಾಗಿತ್ತು.
ಇವೆಲ್ಲ ನಡೆದು ಕೆಲ ವರ್ಷಗಳೇ ಕಳೆದವು. ಎರಡು ತಿಂಗಳ ಹಿಂದೆ ನನ್ನ ಎಂಎಸ್ಸಿ ಗೆಳತಿ
ರಶೀದಳಿಗೆ ಅಚ್ಚರಿ ನೀಡಲೆಂದು ಅವಳಿಗೆ ಹೇಳದೆ ಅವಳು ನಡೆಸುತ್ತಿದ್ದ ತರಬೇತಿ ಕೇಂದ್ರಕ್ಕೆ ಹೋದೆ.
ಅವಳಿಗೆ ಬಹಳ ಸಂತಸವಾಗಿತ್ತು. ತುಂಬಾ ಹೊತ್ತು ಮಾತನಾಡಿದೆವು. ಒಳ್ಳೆಯ ತರಬೇತುದಾರರನ್ನು ಪಡೆಯಲು
ಆಕೆ ಪಟ್ಟ ಕಷ್ಟಗಳನ್ನು ಹೇಳಿಕೊಂಡಳು. ಈಗಿರುವ ತರೇಬೇತುದಾರರಲ್ಲಿ ಮಕ್ಕಳಿಗೆ ಚೆನ್ನಾಗಿ
ಕಲಿಸಬೇಕೆಂಬ ಆಸೆ ಇರುವ ಒಬ್ಬ ಶಿಕ್ಷಕಿ ಇರುವ ಬಗ್ಗೆ
ಹೆಮ್ಮೆ ಇಂದ ಹೇಳಿಕೊಂಡಳು.ಆ ಶಿಕ್ಷಕಿಯನ್ನು ಭೇಟಿ ಮಾಡಿ ಹೋರಾಡುವುದಾಗಿ ಹೇಳಿದೆ. ಸರಿಯಾಗಿ ನಾಲ್ಕುವರೆಗೆ
ಆ ಶಿಕ್ಷಕಿ ಬಂದರು ನನಗೆ ಅಚ್ಚರಿ ಕಾದಿತ್ತು.
ಲಯ, ರಶೀದ, ನಾನು
ಮೂವರು ಮಂದ ಬೆಳಕಲ್ಲಿ ಕೂತು ಅದೆಷ್ಟು ಮಾತನಾಡಿದೆವು. ಆ ದಿನಗಳನ್ನು ಮತ್ತೊಮ್ಮೆ ಬದುಕಿದೆವು
Comments
Post a Comment