ಮುಖವಾಡ


ಮಹಾನಗರಿಯ ಸರ್ಕಾರಿ ಪದಿಪೂರ್ವ ಕಾಲೇಜಿಗೆ ವರ್ಗಾವಣೆ ಆದದ್ದು ಶರ್ಮರಿಗೆ ಸಮಾಧಾನಕರ ಸಂಗತಿಯಾಗಿತ್ತು. ಅವರಿಗೆ ಇದ್ದ ಏಕೈಕ ಪುತ್ರಿ ಇಲ್ಲಿಯೇ ವ್ಯಾಸಂಗ ಮಾಡುತ್ತಿದ್ದಳು. ತಮ್ಮ ಕಡೆಯ 5-6 ವರ್ಷಗಳ ಸೇವೆಯನ್ನು ಸಕುಟುಂಬ ಸಮೇತರಾಗಿ ಇದ್ದು ಪೂರೈಸುವುದು ಅವರ ಕನಸಾಗಿತ್ತು.
   ಶರ್ಮರು ನಾನಾ ಹಳ್ಳಿ ಹಾಗೂ ಪಟ್ಟಣಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ಇಲ್ಲಿಗೆ ವರ್ಗವಾಗುವ ಮೊದಲು ಕಾಫಿಬೆಟ್ಟ ಎಂಬ ಹಳ್ಳಿಯಲ್ಲಿ ಸತತ 5 ವರ್ಷಗಳ ಸೇವೆ ಸಲ್ಲಿಸಿದ್ದರು. 23 ಮಕ್ಕಳಷ್ಟೇ ಇದ್ದ ಶಿಕ್ಷಣ ಸಂಸ್ಥೆಯನ್ನು 2600ಕ್ಕೆ ಏರಿಸಿ ಅಲ್ಲಿಯ ಮಕ್ಕಳು ಪೇಟೆಯ ಮಕ್ಕಳಿಗಿಂತ ಒಂದು ಕೈ ಮೇಲೆ ಎಂಬ ಛಾಪು ಮೂಡಿಸಿದ್ದರು. ಅವರ ಸೇವೆ ದೊರೆತ ಅದೆಷ್ಟೋ ಶಾಲಾ - ಕಾಲೇಜುಗಳು ಇಂದು ಮಾದರಿ ಸಂಸ್ಥೆಯಾಗಿ ಪರಿವರ್ತನೆಯಾಗಿದೆ. ಅವರ ವಿಶೇಷತೆ ಎಂದರೆ ಒಂದು ದಿನವೂ ಕೂಡ ಅವರು ಮಾಡಿದ ಸತ್ಕಾರ್ಯಗಳ  ಬಗ್ಗೆ  ಮಾತನಾಡದೆ ಇರುವುದು. ಯಾವ ವ್ಯಕ್ತಿಯ ಕುರಿತಾದ ನಕಾರಾತ್ಮಕ ಮಾತುಗಳನ್ನು ಯಾವತ್ತೂ ಆಡದೆ ಇರುವುದು. 
  ಕಾಫಿಬೆಟ್ಟದಲ್ಲಿ ಶಾಲೆಯನ್ನು ಅಷ್ಟೇ ಅಲ್ಲದೇ ಅಲ್ಲಿರುವ ಕೃಷಿಕರಿಗು ಅದೆಷ್ಟೋ ಮಾರ್ಗದರ್ಶನ ನೀಡಿ ಅವರೆಲ್ಲರ ಮನದಲ್ಲಿ ದೇವರ ರೂಪಿಯಾಗಿದ್ದರು. ಅವರು ಅಲ್ಲಿಂದ ವರ್ಗವಾಗಿ ಹೋದಾಗ ಅಲ್ಲಿನ ಜನಗಳು ತೋರಿದ ಅಭಿಮಾನ ಶರ್ಮಾರನ್ನು ಕಟ್ಟಿ ಹಾಕಿತ್ತು.
ಅವರ ಬಗ್ಗೆ ಮಾತನಾಡಲು ಬಂದ ಪ್ರತಿಯೊಬ್ಬರೂ ಅನಾಥ ಭಾವದಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದರು .


  ಮಹಾನಗರಿಯ ಸಂಸ್ಥೆಯ ಕಟ್ಟಡ ಅದೆಷ್ಟು ಹದಗೆಟ್ಟಿತ್ತು ಎಂದರೆ ಒಳ ಹೋಗಲು ಅಸಯ್ಯ ಹುಟ್ಟಿಸುವ ಪರಿಸ್ಥಿತಿ. ಮುರಿದು - ತುಕ್ಕು ಹಿಡಿದ ಗೇಟು, ಗೆದ್ದಲು ತಿಂದ ಬಾಗಿಲುಗಳು, ನೀರಿನ ಕೊಳವೆಗಳೆಲ್ಲ ಮುರಿದು ನೇಲುತ್ತಿರುವ ಶೌಚಾಲಯ, ಶರ್ಮರಿಗೆ ನಂಬಲು ಅಸಧ್ಯವಾದ ಆದರೆ ನಂಬಲೇ ಬೇಕಾದಾ ಕಟು ಸತ್ಯ!
 ಶರ್ಮರು ತಾವು ನಂಬಿದ್ದ ಶಕ್ತಿಯನ್ನು ಮನಸಾ ಸ್ಮರಿಸಿ ಸಂಸ್ಥೆಯನ್ನು ಮುಂದೆ ತರಲು ಟೊಂಕ ಕಟ್ಟಿದರು. ಅದೆಷ್ಟೋ ಒಳ ರಾಜಕೀಯಗಳು, ದುಡ್ಡು ತಿನ್ನಲು ಹವಣಿಸುವ ನೀಚರು, ಸಂಬಳ ಒಂದು ಬಂದರೆ ಸಾಕು ಕಾಲೇಜು ಹೇಗಿದ್ದರೆ ನಮಗೇನು ಎನ್ನುವ ಮನೋಭಾವದವರು ಇವೆಲ್ಲದರ ನಡುವೆಯೂ ಕಾಲೇಜನ್ನು ಮುಂದೆ ತಂದರು.  3 ವರ್ಷದಲ್ಲಿ ಅಲ್ಲಿದ್ದ ಕಟ್ಟಡ, ಶಿಕ್ಷಣ ತಂತ್ರಜ್ಞಾನ, ಗ್ರಂಥಾಲಯ, ಊಟದ ಕೊಠಡಿ, ಶೌಚಾಲಯ ಎಲ್ಲವೂ ಖಾಸಗಿ ಸಂಸ್ಥೆಗಳನ್ನು ಮೀರಿಸುವಂತಿತ್ತು. ಇವರ ಸೇವೆಯನ್ನು ಗುರುತಿಸಿ ಸರಕಾರ ಇವರಿಗೆ ಬಡ್ತಿಯನ್ನು ನೀಡಿದ್ದಲ್ಲದೆ ವಿಶ್ವ ಮಾನವ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತು. ಇದು ಯಾವುದಕ್ಕೂ ಹಿಗ್ಗದೆ ನಿರ್ಲಿಪ್ತವಾಗಿಯೆ ಇದ್ದರು.
    ಮುಂಬರಲಿರುವ ಚುನಾವಣೆಯ ಬಿಸಿ ಕಾವೇರುತ್ತಿತ್ತು. ಎಲ್ಲೆಲ್ಲೂ ಪ್ರಚಾರದ ಭರಾಟೆ, ಹೆಸರು ಮಾಡಿರುವ ,ಜನರನ್ನು ಸೆಳೆಯಬಲ್ಲ ನಾಯಕರನ್ನು ತಮ್ಮ ತಮ್ಮ ಪಕ್ಷಕ್ಕೆ ಸೇರಿಸುವ ಹುನ್ನಾರವಂತೂ ನಡೆದೇ ಇತ್ತು. ಜನ ಮೆಚ್ಚಿದ ನಾಯಕರಲ್ಲಿ ಅಗ್ರ ಸ್ಥಾನದಲ್ಲಿದ್ದ ಶರ್ಮರನ್ನು ಹೇಗಾದರೂ ಮಾಡಿ ತಮ್ಮ ಪಕ್ಷಕ್ಕೆ ಸೇರಿಸಲು ಎಲ್ಲ ಪಕ್ಷಗಳು ಹೊಂಚು ಹಾಕುತ್ತಿದ್ದವು. ಈ ವಿಚಾರ ತಿಳಿದ ಶರ್ಮರಿಗೆ ಆಘಾತವಾಗಿತ್ತು. ಯಾವ ಫಲ ಅಪೇಕ್ಷೆ ಇಲ್ಲದೆ ತಾವು ಮಾಡಿದ ಕೆಲಸಕ್ಕೆ ರಾಜಕೀಯ ಬಣ್ಣ ಕೊಡುವುದು ಅವರಿಗೆ ಅತ್ಯಂತ ನೋವಿನ ಸಂಗತಿಯಾಗಿತ್ತು. ಅವರಿಗೆ ಇನ್ನೂ ಹೆಚ್ಚಿನ ನೋವು ಆದದ್ದು ಅವರ ಹೆಂಡತಿ ತೋರಿದ ಆಸಕ್ತಿ ಇಂದ. ಪ್ರತಿಬಾರಿಯೂ ಯಾವ ಉಪಕಾರವನ್ನು ಮಾಡದೆ, ಹಳ್ಳಿಗಳಿಗೆ ವರ್ಗವಾದಾಗ ತಾಯಿ ಮನೆಯಲ್ಲೇ ಉಳಿದು,ಹಳ್ಳಿಗರ ತಿರಸ್ಕಾರದದಿಂದ ಕಂಡು ಈಗ ದುಡ್ಡು ಮಾಡಬಹುದೆಂದು ತಿಳಿದ ಕೂಡಲೇ ಮುಖವಾಡ ಧರಿಸಿದ್ದರು ಮಾಯಾದೇವಿ.
 ಅವರು ಅದೆಷ್ಟು ಕೋರಿಕೊಂಡರು ತಮ್ಮ ಮೊಂಡು ಹಠ ಬಿಡಲು ಮಾಯಾದೇವಿ ಒಪ್ಪಲೇ ಇಲ್ಲ! ಮನನೊಂದ ಶರ್ಮರು ಯಾರ ಬಳಿ ಹೇಳಲಾಗದೆ - ಎದೆಯಲ್ಲಿ ಬಚ್ಚಿಡಲಾಗದೆ ಕಂಗಾಲಾದರು. ಅವರು ರಾಜಕೀಯಕ್ಕೆ ಧುಮುಕುವರೆ  ಇಲ್ಲವೇ ಎಂಬುದು ಪ್ರತಿಯೊಬ್ಬರ ಬಾಯಲ್ಲೂ ಚರ್ಚೆಯ ವಿಷಯವಾಗಿತ್ತು. ಮಾಧ್ಯಮಗಳು ಅನಿಸಿಕೆಗಳನ್ನು ಸಂದೇಶ ಮೂಲಕ ಕಳುಹಿಸುವ ಜಾಹೀರಾತು ನೀಡಿತು. ನಾಮ ಪತ್ರ ಸಲ್ಲಿಕೆಯ ಕಡೆಯ ದಿನದಂದು ಶರ್ಮರು ಕಾಣೆಯಾದರು! ಮಾಯಾದೇವಿ ತಲೆಯಮೇಲೆ ಕೈಹೊತ್ತು ಕೂತರು. ಮಗಳು ಇದ್ಯಾವುದರ ಪರಿವೆ ಇಲ್ಲದೆ ತನ್ನ ವ್ಯಾಸಂಗದಲ್ಲಿ ಸಂಪೂರ್ಣ ಮುಳಿಗಿದ್ದಳು.


ಹಿಮಾಲಯದ ತಪ್ಪಲಲ್ಲಿ ಇರುವ ಪುಟ್ಟ ರಾಜ್ಯ, ಶ್ವೇತಲ್ . ಇನ್ನೂ ಅದರ ಸೌಂದರ್ಯದ ಬಗ್ಗೆ ಹೇಳ ಬೇಕಾದದ್ದೆ ಇಲ್ಲ. ಸಾಂಗ್ ಪೌಡೆಲ್, ಹೆಸರಾಂತ  ವಿಷ್ಣುಗುಪ್ತ  ಸಂಶೋಧನ ಕೇಂದ್ರದಲ್ಲಿ  ಸಂಶೋಧನಾ ವಿದ್ಯಾರ್ಥಿ. ಕಲೆ ಮತ್ತು ಮನಸ್ಸು ಅವನ ಸಂಶೋಧನಾ ವಿಷಯ. ಕೊರೆಯುವ ಚಳಿಯಲ್ಲೂ ಬೆಳಿಗ್ಗೆ ಬೇಗ ಎದ್ದು ಹೂವರಳುವುದನ್ನು, ಮೊದಲ ಸೂರ್ಯ ಕಿರಣವನ್ನು, ಮಂಜು ತುಂಬಿದ ಸಸಿಗಳನ್ನು, ಮರಗಳನ್ನು ನೋಡುವುದು ಅವನ ನಿತ್ಯ ನಿಯಮ ಆಗಿತ್ತು. ಹಾಗೆಂದು ಅವನು ಯೋಗಿಯಂತೆ ಇರುತ್ತಾನೆ ಎಂದೇನಲ್ಲ, ಉಳಿದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಸಹಪಾಠಿ. ಸಂಜೆಯ ಹೊತ್ತು ಸಾಂಗ್ನೊಟ್ಟಿಗೆ ಸಮಯ ಕಳೆಯಲು ಉಳಿದ ವಿದ್ಯಾರ್ಥಿಗಳ ಗುಂಪೇ  ಕಾಯುತ್ತಿರುತ್ತದೆ. ಅವನಲ್ಲಿ ಏನೋ ಒಂದು ಆಕರ್ಷಣೆ. ಅವನಿಗೆ ಗೊತ್ತಿರುವ ಅದೆಷ್ಟೋ ಸುಂದರ ವಿಷಯಗಳನ್ನು ಅವನು -ಅಭಿನಯಿಸಿ ತೋರಿಸುವ ಪರಿ ಅದ್ಭುತವೇ ಸರಿ. 
    ಆ ದಿನ ಸಾಂಗ್ ಕೂರುವ ಪುಟ್ಟ ಕಲ್ಲು ಜಾಗದಲ್ಲಿ ಮತ್ಯಾರೋ ಕೂತಿದ್ದನ್ನು ನೋಡಿ ಸಾಂಗ್ ಆಶ್ಚರ್ಯ ಪಟ್ಟ. ಇಷ್ಟು ಮುಂಜಾನೆ ಅದು ಇಲ್ಲೆಯೇ ಕೂತಿರುವವರು  ಯಾರಿರಬಹುದು ಎಂಬ ಕುತೂಹಲ ಹೆಚ್ಚಾಗುತ್ತಾ ಹೋಯಿತು.ಕೂತಿರುವ ಭಂಗಿಯಿಂದ ಆಕೆ ಕೂಡ  ತಾನು ಮಾಡುವ ಪ್ರಾಣಾಯಾಮವನ್ನೇ  ಮಾಡುತ್ತಿರುವುದು ಖಾತ್ರಿಯಾಯಿತು.ಸ್ವಲ್ಪ ಹೊತ್ತು ಅಲ್ಲಿಯೇ ನಿಂತು ನೋಡುತ್ತಾ ಇದ್ದ. ಆಕೆ ಪ್ರಾಣಾಯಾಮ ಆದ ನಂತರ ಅಲ್ಲಿಯೇ ಇದ್ದ ಕೊಳದಿಂದ ಮುಖವನ್ನು ತೊಳೆದುಕೊಂಡು , ತುಸು ದೂರ ನಡೆದು ಅಲ್ಲಿ ಹರಿಯುತ್ತಿದ್ದ ಪುಟ್ಟ ಝರಿಯಿಂದ ಬೊಗಸೆ ತುಂಬಾ ನೀರು ಕುಡಿದು ಬರುವಷ್ಟರಲ್ಲಿ, ಆಗಷ್ಟೇ ಉದಯಿಸುತ್ತಿರುವ ಸೂರ್ಯ ಕಿರಣಗಳು ಅವಳ ಮುಖವನ್ನು ಪ್ರಜ್ವಲಿಸಿತ್ತು. ಧೈರ್ಯ ಅವಳ ಕಂಗಳಲ್ಲಿ ತುಂಬಿ ತುಳುಕಾಡುತಿತ್ತು. ಕದ್ದು ನೋಡುತ್ತಿರುವುದು ತಪ್ಪು ಅನ್ನಿಸಿ ಅವಳ ದಾರಿಗೆ ಎದುರಾದ. ಒಂದಿನಿತೂ ವಿಚಲಿತಳಾಗದೆ ಇದ್ದ ಅವಳ ನೋಟ ಅಷ್ಟೇ ಪ್ರಕರವಾಗಿತ್ತು. ದಾರಿಯುದ್ದಕ್ಕೂ ಮಾತನಾಡುತ್ತಾ ಇಬ್ಬರು ಸಾಗಿದರು.
ಪ್ರತಿನಿತ್ಯವೂ ಒಟ್ಟಿಗೆ ಕಾಲ ಕಳೆಯುತ್ತಿದ್ದರು.ವಾರುಣಿ - ಸಾಂಗ್ ಒಳ್ಳೆಯ ಸ್ನೇಹಿತರಾದರು.


 ವಾರುಣಿ ತತ್ವಜ್ಞಾನದ ಕುರಿತಾದ ಒಂದು ವಿಷಯದ ಮೇಲೆ ಸಂಶೋಧನೆ ಮಾಡುತ್ತಿದ್ದ ಬೇರೊಂದು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ. ಸಂಶೋಧನೆಗೆ ಸಂಬಂಧ ಪಟ್ಟ ಕೆಲವು ಕೆಲಸದ ಮೇಲೆ ಮೂರು ತಿಂಗಳಿಗೆ ಇಲ್ಲಿಗೆ ಬಂದಿದ್ದಳು. ಸಾಂಗ್ - ವಾರುಣಿಯರ ಹವ್ಯಾಸ, ನಿತ್ಯ ನಿಯಮಗಳು, ನಂಬಿಕೆಗಳು, ಆಚಾರ ವಿಚಾರಗಳು ಎಲ್ಲವೂ ಏಕತಾನತೆಯನ್ನು ಹೊಂದಿತ್ತು. ಅವರ ಸ್ನೇಹ ಮೆಲ್ಲಗೆ ಪ್ರೀತಿಗೆ ತಿರುಗುತ್ತಿತ್ತು. ಆದರೆ ಅವರ ಮೇಲಿದ್ದ ಜವಾಬ್ದಾರಿಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದರಿಂದ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ತಮ್ಮ ಸಂಶೋಧನೆಯಲ್ಲಿ ಮಗ್ನರಾಗುತ್ತಿದ್ದರು.ಒಂದೊಮ್ಮೆ ಕಾತರತೆ ಹೆಚ್ಚಾದರೆ ಭೇಟಿಯಾಗಿ ಒಂದಿಷ್ಟು ಮಾತನಾಡುತ್ತಿದ್ದರು. ವಾರುಣಿ ವಿಶ್ವವಿದ್ಯಾನಿಲಯದಲ್ಲಿ ತನ್ನ  ಕೊನೆಯ ದಿನದಂದು ಸಾಂಗ್ನನ್ನು ಭೇಟಿಯಾದಳು ಅವನು ಮಂಕಾಗಿಯೆ ಇದ್ದ ,ಕಾರಣ ತಿಳಿದಿದ್ದರೂ ಆಕೆ ಏನು ಹೇಳಲಿಲ್ಲ.
ಸಾಂಗ್ ತಡೆಯಲಾರದೆ ತಾನು ಆಕೆಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ. ವಾರುಣಿ ತಾನು ಏನ್ನನ್ನೋ ಪಡೆಯ ಬೇಕಾಗಿದೆ.ಅದನ್ನು ಪಡೆಯುವವರೆಗೂ ಏನೂ ಹೇಳಲು ತಯಾರಿಲ್ಲ ಎಂಬಂತೆ ಉತ್ತರ ಕೊಟ್ಟಳು. ಸಾಂಗೆಗ್ ಸಣ್ಣದೊಂದು ಹೆದರಿಕೆ ಮನೆಮಾಡಿತ್ತು ಎಲ್ಲಿ ವಾರುಣಿ ತನ್ನನ್ನು ನಿರಾಕರಿಸುವಳೋ ಎಂದು ಹಾಗಾಗಿ "ನನಗೆ ಗೊತ್ತು, ನಮ್ಮ ಆಚಾರ ವಿಚಾರಗಳನ್ನು ನಿಮ್ಮ ಪಂಗಡದವರು ಒಪ್ಪುವುದಿಲ್ಲ ಅದಕ್ಕಾಗಿ ಹೀಗೆಲ್ಲ ಸಬೂಬು ಹೇಳುತ್ತಾ ಇದ್ದಿ,ಎಷ್ಟೇ ಸಂಶೋಧನೆ ಮಾಡಿದರು ಸಂಕುಚಿತ ಮನೋಭಾವ ಹೋಗಬೇಕಲ್ಲ..." ಎಂದು ಏನೇನೊ ಕಿರಿಚಾಡಿದ. ವಾರುಣಿ ಏನು ಹೇಳದೆ ತನ್ನ ದಾರಿ ಹಿಡಿದಳು.


 ವಾರುಣಿಯನ್ನು ಮರೆಯಲು ಕೆಲ ತಿಂಗಳುಗಳೇ ಬೇಕಾಯಿತು. ಆಕೆ ಸಾಂಗ್ ಗೆ ಕರೆ ಮಾಡಿದರೂ ಆತ ಉತ್ತರಿಸಲಿಲ್ಲ. ತನ್ನ ತಪ್ಪಿನ ಅರಿವಾಗಿ ಪಶ್ಚಾತಾಪ ಪಟ್ಟು, ಸಂಶೋಧನೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡ. ಅವನ ಮಾರ್ಗದರ್ಶಕರ ಸೂಚನೆ ಮೇರೆಗೆ ಹೃಷಿಕೇಶದಲ್ಲಿದ್ದ  ರಾಜೀವ ಶರ್ಮಾರನ್ನು ಭೇಟಿಯಾಗಿ   ಕೆಲವೊಂದು ವಿಷಯಗಳನ್ನು ಚರ್ಚಿಸಲು ತೆರಳಿದ. ಅವರನ್ನು ಕಂಡ ಕ್ಷಣ ಅವನ ಕಣ್ಣುಗಳಿಗೆ ನಂಬಲು ಅಸಾಧ್ಯವಾದವು. ತನ್ನ ಮನೆಯ ದೇವರ ಕೋಣೆಯಲ್ಲಿಟ್ಟಿದ್ದ ,ತಾನು ಬುದ್ಧಿ ಬಂದಾಗಿ ನಿಂದಲೂ ಕೈ ಮುಗಿಯುತ್ತಾ ಬಂದ ಭಾವಚಿತ್ರದಲ್ಲಿದ್ದ ವ್ಯಕ್ತಿ ಎದುರು ನಿಂತಿದ್ದರು!
ಎಷ್ಟೋ ವರ್ಷಗಳ ಹಿಂದೆ ಕೆಲಸಕ್ಕೆಂದು ಶ್ವೇತಲ್  ನಿಂದ ದಕ್ಷಿಣಕ್ಕೆ ಆತನ ಕುಟುಂಬದವರು ಹೋಗಿದ್ದರು. ವರ್ಷಗಟ್ಟಲೆ ದಮ್ಮು ಕಟ್ಟಿ ದುಡಿದು ಕೆಲಸದ  ಹಣವನ್ನು ಕೊನೆಯ ದಿನ ಒಟ್ಟಿಗೆ ಪಡೆದುಕೊಂಡು ತಮ್ಮ ತಮ್ಮ ಊರುಗಳಿಗೆ ತೆರುಳುತ್ತಿದ್ದರು. ಅಲ್ಲಿ ಮಾಲೀಕರು ಮಾಡುತ್ತಿದ್ದ ಮೋಸ, ಆ ಕುಟುಂಬದವರ ಮಕ್ಕಳ ವಿದ್ಯಾಭ್ಯಾಸ , ಅಸಾಹಾಯಕ ಮುಗ್ಧ ಹೆಂಗಸರ ಪಾಡು ಇವೆಲ್ಲವನ್ನೂ ಸುಧಾರಿಸಿ , ಮಕ್ಕಳಿಗೆ ಶಿಕ್ಷಣದಲ್ಲಿ ಆಸಕ್ತಿಯನ್ನು ತರಿಸಿ. ಧರಿದ್ರ ದೇವೋ ಭವ ಎಂಬುದನ್ನು  ಅಕ್ಷರಶಃ ಪಾಲಿಸಿದ ಮಹಾನ್ ಚೇತನ ಅವರು.
ಅಂದು ಗಂಗೆಯ ದಂಡೆಯಲ್ಲಿ ಕೂತು ಅದೆಷ್ಟು ಹೊತ್ತು ಮಾತನಾಡಿದರೋ! ತನ್ನ ಮನೆಗೆ ಬರಲೇ ಬೇಕೆಂಬ ಷರತ್ತಿನ ಮೆರೆಗೆ ಶರ್ಮರ ಔತಣವನ್ನು ಸ್ವೀಕರಿಸಿದ. ಆ ಕ್ಷಣ ವಾರುಣಿಯ ಮುದ್ದು ಮುಖ ನೆನೆಪಿಗೆ ಬಂದು ಸಾಂಗ್ನನ್ನು ಕಾಡಿತ್ತು.


ಅಂದು ಗಂಗೆಯ ಮಡಿಲಲ್ಲಿ  ಕುಳಿತು ವಾರುಣಿ ಆದೆನನ್ನೋ ಆಲೋಚಿಸುತ್ತಿದ್ದಳು. ಸುತ್ತ ಕಣ್ಣು ಆಡಿಸಿದಳು ಶೂನ್ಯ ಭಾವದಲ್ಲಿ ಮಿಂಚು ಸುಳಿದ ಅನುಭವ. ಸಾಂಗ್ ಯಾರೊಂದಿಗೋ ಮಾತನಾಡುತ್ತಾ ಕುಳಿತ್ತಿದ್ದ.  ಸಾಂಗ್ನನ್ನು ಭೇಟಿ ಆಗಬೇಕೆಂದು ಮಾಡಿದ ವ್ಯರ್ಥ ಪ್ರಯತ್ನಗಳು, ಹೇಳ ಬೇಕೆಂದಿದ್ದ ಮಾತುಗಳು ಇವೆಲ್ಲದಕ್ಕೊಂದು ಕೊನೆ ಹೇಳುವ ಸೂಚನೆ ಸಿಕ್ಕಿತ್ತು. ತಾನು ಏನು ಮಾಡಬೇಕೆಂದು ಮನಸಿನಲ್ಲಿಯೆ ಯೋಚಿಸಿದಳು.ಗಂಗೆಗೆ ಮತ್ತೊಮ್ಮೆ ಕೈ ಮುಗಿದಳ ತುಂಬಿದ ಕಂಗಳಲ್ಲಿ.
    ಮರುದಿನ ಬೇಗ ಎದ್ದು ಗಂಗೆಯ ತಪ್ಪಲಿನ ಹತ್ತಿರ ಇದ್ದ ಕಂಬದ ಹಿಂದೆ ಮುಸುಕೊಂದನ್ನು ಹಾಕಿ ಕೂತಳು. ಒಂದೈದು ನಿಮಿಷ ಬಿಟ್ಟು ಇಣುಕಿದಳು ಅವಳು ಅಂದುಕೊಂಡಂತೆ ಅಲ್ಲಿ ಸಾಂಗ್ ಇರಲಿಲ್ಲ ಬದಲಾಗಿ ರಾಜೀವ ಶರ್ಮರು ಕೂತಿದ್ದರು. ಸರಿಯಾಗಿ 10 ನಿಮಿಷ ಕಳೆದು ಅವರ ಹತ್ತಿರ ಹೋಗಿ ಕೂತಳು.ಶರ್ಮರು ಕಣ್ಣು ತೆರೆದು ಗಂಗೆಯನ್ನು ನೋಡಿ ಕೈಮುಗಿದರು. ಹತ್ತಿರವೇ ಕೂತಿದ್ದ ವಾರುಣಿಯನ್ನು ನೋಡಿ "ಕಂದ, ಹೇಗಿದ್ದಿ?"ಎಂದು ಕೇಳಿದರು ಉಮ್ಮಳಿಸಿ ಬಂದ ದು:ಖವನ್ನು ತಡೆಯಲಾಗದೆ ಬಿಕ್ಕಿ ಬಿಕ್ಕಿ ಅತ್ತಳು.
ಆಡದ ಅದೆಷ್ಟೋ ಮಾತುಗಳನ್ನು, ಅನುಭವಿಸಿದ ಯಾತನೆಗಳನ್ನು, ಕಲಿತ ಪಾಠಗಳನ್ನು , ಪ್ರಕೃತಿಯ ವಿಸ್ಮಯಗಳನ್ನು ಎಲ್ಲವೂ ಗಂಗೆಯ ತಪ್ಪಲಿನಲ್ಲಿ ಕೂತು ಮಾತನಾಡಿದರು. ಅಲೆಗಳಂತೆ ಬುಗಿಲೇಳುತಿದ್ದ ಆಲೋಚನೆಗಳು ಇದೀಗ ಪ್ರಶಾಂತವಾಗಿತ್ತು ಗಂಗೆ ಎಲ್ಲಾ ನೋವನ್ನು ನಿವಾರಿಸಿದ್ದಳು!
ಶರ್ಮರು ಎಷ್ಟೋ  ವರುಷಗಳ ಹಿಂದೆ ಮಾಡಿದ  ಸಹಾಯವನ್ನು ಇಂದು ಒಬ್ಬ ಹುಡುಗ ಹೀಗೆ ಅಕಸ್ಮಾತ್ ಆಗಿ ಸಿಕ್ಕಿ ಸ್ಮರಿಸಿದ ವಿಚಾರವನ್ನು ಮಗಳಿಗೆ ಹೇಳಿ ಸಾಂಗ್ನ ಮನೆಗೆ ಹೋಗುವುದಾಗಿ ಹೇಳಿದರು. ವಾರುಣಿಯ ಕಣ್ಣಲ್ಲಿ ಮಿಂಚೊಂದು ಹಾದು ಹೋದದ್ದನ್ನು ಶರ್ಮರು ಗಮನಿಸಿದರು.ಆಕೆ ಮತ್ತು ಸಾಂಗ್ನ ಸ್ನೇಹದ ಬಗ್ಗೆ ಎಲ್ಲವನ್ನೂ ತಂದೆಯ ಎದುರು ತೆರೆದಿಟ್ಟಳು.


ಶರ್ಮರು ಮುಖವಾಡದ ಜೀವನದಿಂದ ಬೀಸೆತ್ತು ಊರು ಬಿಟ್ಟಿದ್ದರು. ರೈಲಿನಲ್ಲಿ ಸಿಕ್ಕಿದ ವ್ಯಕ್ತಿಯೊಬ್ಬರು ಹೃಷಿಕೇಶ ದಲ್ಲಿರುವ ತಮ್ಮ ಶಿಕ್ಷಣ ಸಂಸ್ಥೆಗೆ ಸೇರಲು ಕೋರಿಕೊಂಡರು. ಅಲ್ಲಿನ ವಾತಾವರಣ ಶರ್ಮರಿಗೆ ಬಹಳ ನೆಮ್ಮದಿ ಕೊಟ್ಟಿತು.ಬಡ ಮಕ್ಕಳ ಶಿಕ್ಷಣಕ್ಕಾಗಿ ಅಲ್ಲಿದ್ದ ಪ್ರತಿ ಶಿಕ್ಷಕನು ದುಡಿಯುತ್ತಿದ್ದರು. ಯಾವುದೇ ಹೆಸರಿನ ಅಪೇಕ್ಷೆ ಇಲ್ಲದ , ಸೇವಾ ಮನೋಭಾವದಿಂದ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದರು. ಅವರಂತೆ ಬಂದವರು ಕೆಲವರು. ಈ ಮುಖವಾಡದ ಕುರಿತಾದ ಜಿಜ್ಞಾಸೆ ಮಾತ್ರ ಅವರನ್ನು ಕಾಡುತ್ತಲೇ ಇತ್ತು. ಸಮಯ ಎಲ್ಲದಕ್ಕೂ ಉತ್ತರ ಕೊಟ್ಟಿತ್ತು. 
  ಶಾಲೆಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳ ವ್ಯವಸ್ಥೆಗಾಗಿ ಅಲ್ಲಿನ ಜನನಾಯಕರಲ್ಲಿ ಕೋರಿಕೆ ಸಲ್ಲಿಸಲು ಹೋಗಬೇಕಾಗಿತ್ತು. ಆತ ಅದೆಷ್ಟೋ ಅನ್ಯಾಯ ಮಾಡಿ, ಹಣವನ್ನು ನುಂಗಿ ಬಹು ಅಂತಸ್ತಿನ ಬಂಗಲೆಯನ್ನು ಕಟ್ಟಿಕೊಂಡು ಮೆರೆಯುತ್ತಿದ್ದ, ಅವನ ಅಟ್ಟಹಾಸವನ್ನು ತಿಳಿದ ಯಾರಿಗೂ ಅವನ ಮುಖವನ್ನು ನೋಡಲು ಅಸಯ್ಯ ಹುಟ್ಟುವಂತಿತ್ತು. ಇಷ್ಟಾಗಿಯೂ ಅವನಿಗೆ ಕೈ ಮುಗಿದು, ನಗುತ ನಗುತ ಮಾತನಾಡುತ್ತಾ ಇದ್ದುದ್ದರಿಂದ ತಮ್ಮ ಕೋರಿಕೆಯನ್ನು ಪೂರೈಸಲು ಈತ ಒಪ್ಪಿದ. ಇಲ್ಲಿ ಮುಖವಾಡ ಅತ್ಯಗತ್ಯವಾಗಿತ್ತು.
  ಇನ್ನೂ ಕೆಲ ಭಕ್ತರು ಗಂಗೆಯ ದಡದಲ್ಲಿ ಕೂತು ಜೋರಾಗಿ ಹತ್ತು ಜನರಿಗೆ ಕೇಳುವಂತೆ ಹಾಡನ್ನು ಹೇಳುತ್ತಿರುತ್ತಾರೆ ಆಗ್ಗಿಂದಾಗೆ ತಮನ್ನು ಯಾರಾದರೂ ನೋಡುತ್ತಿದ್ದರೋ ಎಂದು ಖಾತ್ರಿ ಪಡಿಸಿಕೊಳ್ಳುತ್ತಾರೆ ಯಾರಾದರೂ ವಿದೇಶಿಯರು ಚಿತ್ರೀಕರಿಸಲು ಬಂದರಂತೂ ನಾನಾ ಭಂಗಿಯಲ್ಲಿ ಚಿತ್ರಿಸಲು ಬೇಡಿಕೊಳ್ಳುತ್ತಾರೆ. ಇನ್ನೂ ಕೆಲ ಭಕ್ತರು ಗಂಗೆಯ ದಡದಲ್ಲಿ ಕೂತು ತಮ್ಮ ಪಾಡಿಗೆ ಏನನ್ನೋ ಧ್ಯಾನಿಸುತ್ತಿರುತ್ತಾರೆ. ಯಾರು ಬಂದರು ಹೋದರು ಅದರ ಪರಿವೇ ಇಲ್ಲದೆ ಗಂಗೆಯ ಮಡಿಲಲ್ಲಿ ಏಕಾಂತವನ್ನು  ಅನುಭವಿಸುತ್ತಾರ.
 ಈಗಿನ ಕಾಲಗತಿಯಲ್ಲಿ  ಮುಖವಾಡದ ಅವಶ್ಯಕತೆ ಮತ್ತು ಅದರ ಮಿತಿಯನ್ನು ಅರಿತವ ಯಾವುದೇ ಕ್ಲೇಶಕ್ಕೆ ಒಳಗಾಗದೆ ಶಾಂತಿಯಿಂದ ಜೀವಿಸಬಹುದು ಎಂದು ಮನಗಂಡಿದ್ದರು.


ವಾರುಣಿ ತನ್ನ ತಂದೆಯನ್ನು ಅಗಾಧವಾಗಿ ಪ್ರೀತಿಸುತ್ತಿದ್ದಳು. ಶರ್ಮರ ನಡೆ ನುಡಿಯೇ ಅಂತದ್ದು. ಆಕೆಯ ತಾಯಿ ಅದೇಕೊ ಸಂಕುಚಿತ ಮನೋಭಾವ ಹೊಂದಿದ್ದರು. ಹೀಗಿದ್ದರೂ ವಾರುಣಿ ಇಬ್ಬರಲ್ಲಿ ಒಂದೇ ರೀತಿ ಇರುತ್ತಿದ್ದಳು. ಮನೆಯಲ್ಲಿ ಆಗಿಂದ್ದಾಗೆ ಮಾಯಾದೇವಿ ಅಶಾಂತಿಯನ್ನು ಪ್ರಕಟಿಸುತ್ತಿದ್ದರಾದರೂ ಶರ್ಮರು ಒಂದಿನಿತು ಮಾತನಾಡದೆ ಶಾಂತಿಯಿಂದ ಯಾವುದಾದರು ಪುಸ್ತಕ ಓದಿಕೊಂಡು ಇರುತ್ತಿದ್ದರು. ಒಂದು ದಿನ ತನ್ನ ತಂದೆ ಮನೆ ಬಿಟ್ಟು ಹೋದದ್ದನ್ನು ಕೇಳಿ ಕುಗ್ಗಿ ಹೋದಳು. ಆದರೆ ಒಂದಿನಿತೂ ತೋರ್ಪಡಿಸದೆ ನಿರ್ಲಿಪ್ತವಾಗಿದ್ದಳು. ಹೆಚ್ಚಿನ ವ್ಯಾಸಂಗಕ್ಕೆ ಊರು ಬಿಟ್ಟಳು. ಆದರೆ ಆಕೆಯ ಉದ್ದೇಶ ತಂದೆಯ ಹುಡುಕಾಟವಾಗಿತ್ತು ವಿದ್ಯಾಭ್ಯಾಸ ನೆಪ ಮಾತ್ರವಾಗಿತ್ತು. ವರ್ಗವಾಗಿ ಹೋದ ಎಲ್ಲ ಊರುಗಳಿಗೆ ಭೇಟಿ ಕೊಟ್ಟು. ಸಾವಿರ ಸಾವಿರ ಜನರನ್ನು ಭೇಟಿಯಾಗಿ ಪ್ರತಿಭಾರಿ ಯಾವ ಫಲ ಸಿಗದಿದ್ದಾಗ ನಿರಾಶಳಗಿ ಮತ್ತೆ ಮೈಕೊಡವಿ ಮರಳಿ ಪ್ರಯತ್ನ ಮುಂದುವರಿಸುತ್ತಿದ್ದಳು. ಆ ಪ್ರಯತ್ನದಲ್ಲಿದ್ದಾಗ ಸಾಂಗ್ನ ಗೆಳೆತನ ಆದದ್ದು. ಆತನ ರೀತಿ ನೀತಿಗಳಿಂದ ತನ್ನ ತಂದೆಯ ನೆನಪಾಗಿ  ಅವನಲ್ಲಿ ಕೇಳಿದ್ದಳು. ಆಕೆಯ ತಂದೆ ಇವನ ಮನೆಯ  ದೇವರಾಗಿದ್ದರು. ಆದರೆ ತಾನು ಅವರ ಮಗಳೆಂಬ ವಿಚಾರವನ್ನು ಆಕೆ ಹೇಳಲು ಹೋಗಲಿಲ್ಲ. ಸಾಂಗ್ ಒಮ್ಮೆ  ನಿನಗೇನು  ಬೇಕು ಹೇಳು ಎಂದು ಹೇಳಿದಾಗ ವಾರುಣಿ ಹೇಳಿದ್ದಳು "ನಮ್ಮ ಸ್ನೇಹಕ್ಕೆ ಕಾರಣರಾದ ನಿನ್ನ ಮನೆ ದೇವರಂತೆ ಪೂಜಿಸುವ ಶರ್ಮರನ್ನು ನನಗೂ ಭೇಟಿ ಮಾಡಿಸು ಅದು ನೀನು ನನಗೆ ಕೊಡಬಹುದಾದ ದೊಡ್ಡ ಉಡುಗೊರೆ" ಎಂದು. ಸಾಂಗ್ ಅದಕ್ಕೆ ಪ್ರತಿಯಾಗಿ "ನಿನಗೆ ಇರುವ ಪ್ರೀತಿ ಅವರ ಮಗಳಿಗಿಲ್ಲವಲ್ಲ".
ಒಡಲಲ್ಲಿ ಕೆಂಡ ಹಾಕಿದಂತಾಗಿ ಕಂಗಳು ತುಂಬಿತ್ತು. ಆದರೆ ಸಾಂಗ್ನ ಮುಂದೆ ಸಣ್ಣ ಸುಳಿವು ಸಿಗದಂತೆ  ನೋವನ್ನು ಮರೆಮಾಚಿದ್ದಳು.


ಸಾಂಗ್ನ  ಮನೆಯಲ್ಲಿ ಸಂಭ್ರಮದ ವಾತಾವರಣ. ದೇವರು ಮನೆಗೆ ಬರುವ ಸಂತೋಷ ಆ ಪುಟ್ಟ ಊರನ್ನೆಲ್ಲಾ ತುಂಬಿತ್ತು. ಶರ್ಮರು ತಾವು ತಮ್ಮ ಸ್ನೇಹಿತರೊಂದಿಗೆ ಬರುವುದಾಗಿ ಹೇಳಿದ್ದರು. ಹಾಗಾಗಿ ಸಾಂಗ್ ಮೊದಲೇ ಹೋಗಿ ಬೇಕಾದ ಸಿದ್ಧತೆಗಳೆನ್ನೆಲ್ಲ ಮಾಡಿದ್ದನು. ಶರ್ಮರು ಯಾವುದನ್ನು ಪ್ರಚಾರ ಮಾಡಬಾರದೆಂದು ಹೇಳಿದ್ದರಿಂದ ಎಲ್ಲವೂ ಸಹಜವಾಗಿಯೆ ತೋರುತ್ತಿತ್ತು.ಶರ್ಮರು ಅವರ ಮಗಳೊಂದಿಗೆ ಸಾಂಗ್ನ ಮನೆಗೆ  ತಲುಪಿದರು. ಅದ್ಧೂರಿ     ಸ್ವಾಗತದೊಂದಿಗೆ ಶರ್ಮರನ್ನು ಬರಮಾಡಿಕೊಂಡರು. ಇಂದು ಅಲ್ಲಿಯ ಮಕ್ಕಳು ವಿದೇಶವನ್ನು ತಲುಪಿದ್ದರು. ಅಲ್ಲಿನ ಹೆಂಗಸರು ಸ್ವಾವಲಂಬಿಯಾಗಿ ಜೀವನ ಮಾಡುತ್ತಿದ್ದರು. ಕೆಲಸಕ್ಕೆಂದು ದಕ್ಷಿಣಕ್ಕೆ ಬರುತಿದ್ದ ಗಂಡಸರು ನಿಶ್ಚಿಂತೆ ಇಂದ ಹೋಗಿ ಬರುತ್ತಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಪ್ರಕೃತಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ಆಕೆಯ ಮೇಲೆ ಅಪಾರ ಕಾಳಜಿ ವಹಿಸುತ್ತಿದ್ದರು. ಆಕೆಯ ಸೌಂದರ್ಯವನ್ನು ತಮ್ಮೊಳಗೆ ತುಂಬಿಕೊಳ್ಳುತ್ತಿದ್ದರು. ಹಾಗಾಗಿ ತಾಳ್ಮೆ ,ಪ್ರೀತಿ, ಸಹಿಷ್ಣತೆ ಇವೆಲ್ಲವೂ ಅವರ ಕಣ ಕಣದಲ್ಲು ರಾರಾಜಿಸುತ್ತಿತ್ತು.ಇವೆಲ್ಲವನ್ನೂ ಮಾತನಾಡಿ ಒಟ್ಟಿಗೆ ಊಟ ಮಾಡಿದರು. ಸಾಂಗ್ ಮಾತ್ರ ಅಚ್ಚರಿ ಇಂದ ಸಂತಸವೊ ಸಂಕಟವೊ  ಎಂದು ತಿಳಿಯದೇ ಮೂಖಯಾತನೆ ಪಡುತ್ತಿದ್ದ. ಸಂಜೆಯ ಹೊತ್ತಿಗೆ ಶರ್ಮರು ಹೊರಡಲು ಅಣಿಯಾದರು.ಸಾಂಗ್ ಅವರ ಚೀಲಗಳೆನ್ನೆಲ್ಲ ತೆಗೆದುಕೊಂಡು ಅವರಿಬ್ಬರೊಡನೆ ರೈಲು ನಿಲ್ದಾಣಕ್ಕೆ ಬಂದ. ಸತ್ಯ ತಿಳಿದ ಮತ್ತೆ ತನ್ನ ಬಗ್ಗೆ ಏನು ಅಂದುಕೊಂಡರೊ ಎಂಬ ಭಯ ಅವನ ನಗುವನ್ನು ಕಟ್ಟಿ ಹಾಕಿತ್ತು.
ಶರ್ಮರು ಮಾತ್ರ ವಿಶ್ವಾಸದಿಂದ  ಸಾಂಗ್ನ ಬೆನ್ನು ತಟ್ಟಿ ಅವರ ಮಗಳ ಕೈಯನ್ನು ಅವನ ಕೈ ಮೇಲೆ ಇಟ್ಟು. ಸದಾ ಸಂತೋಷವಾಗಿರಿ ಎಂದರು.





ಚಿತ್ರ ಕೃಪೆ : ಪ್ರಜ್ವಲ ಎಂ











Comments

Popular posts from this blog

Sarees and Secrets

Emotional Rollercoaster: Riding the Waves of Dysphoria and Euphoria

Error is Human?