ಸಂತೃಪ್ತಿ


ಜೋಯಿಸರು ಜೇನು ಸಂಶೋಧನ ಕೇಂದ್ರದಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಉಜ್ಜಯಿನಿ ಇಂದ ಮೂಡಿಗೆರೆವರೆಗೆ ಅನೇಕ ರಾಜ್ಯಗಳಲ್ಲಿ ಸೇವೆಸಲ್ಲಿಸಿದ್ದರಲ್ಲದೆ ಅಲ್ಲಿಯ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಜೇನು ಉತ್ಪಾದನೆಗೆ ನೂರು ಲೀಟರ್ ಗುರಿಯೆಂದು ನೀಡಿದ್ದರೆ ಜೋಯಿಸರು ನೂರೈವತ್ತು ಇನ್ನೂರು ವರೆಗೂ ತಲುಪುತ್ತಿದ್ದರು. ಸರಕಾರಿ ಕೆಲಸವಾದರೂ ಬೆಳ್ಳಂ ಬೆಳಗ್ಗೆ ನಾಕು ಗಂಟೆಯ ಚಳಿಯನ್ನು ಲೆಕ್ಕಿಸದೆ , ತಣ್ಣೀರು ಸ್ನಾನ ,ದೇವರ ಪೂಜೆ ಮಾಡಿ, ಜೇನು ಪೆಟ್ಟಿಗೆಗಳನ್ನು ಸರಿಯಾದ ಸ್ಥಳಕ್ಕೆ ರವಾನಿಸುವ ಕೆಲಸವನ್ನು ತಾವೇ ಖುದ್ದಾಗಿ ನಿಂತು ಮಾಡಿಸುತ್ತಿದ್ದರು. ಅವರ ಈ ನಿಸ್ವಾರ್ಥ ಸೇವೆಯಿಂದ ಅಲ್ಲಿನ ಸೊಸೈಟಿಗೆ ಒಳ್ಳೆಯ ಹೆಸರು ಬರುತ್ತಿತ್ತು ಅಲ್ಲದೆ ವರ್ಷದ ಲಾಭದಲ್ಲಿ ಸಣ್ಣ ಒಂದು ಭಾಗವು ಇನಾಮಾಗಿ ಎಲ್ಲಾ ಕೆಲಸಗಾರರಿಗೆ ಲಭಿಸುತ್ತಿತ್ತು.ಹೀಗೆ ಕಾಯಕವೇ ಕೈಲಾಸ ಎಂದು ಜೋಯಿಸರು ನಂಬಿದ್ದರು. ಅವರಿಗೆ ನಾಗಾಲ್ಯಾಂಡ್ಗೆ ವರ್ಗವಾದಗಲೂ ಹೋಗಲು ತಯಾರಿದ್ದರು ಅಲ್ಲದೆ ಅದನ್ನು ಪತ್ನಿಯೊಂದಿಗೆ ಹೇಳಿ ಬೇಕಾಗುವ ಸಿದ್ಧತೆ ಮಾಡಿಕೊಳ್ಳಲು ಸೂಚನೆ ಕೊಟ್ಟರು.
  ಜೋಯಿಸರ ಮಡದಿ ತ್ರಿಪುರ ಸುಂದರಿ ಅಮ್ಮನವರು. ಹೆಸರಿಗೆ ತಕ್ಕಂತೆ ಬಹಳ ಲಕ್ಷಣವಾಗಿದ್ದರು. ಆಕೆ ಬಹಳ ಮುಂದಾಲೋಚನೆ ಇಂದ ಯೋಚಿಸುವವರು. ನಾಗಾಲ್ಯಾಂಡ್ಗೆ ಹೋಗಲು ನಾಲ್ಕು ಜನ ಮಕ್ಕಳನ್ನು ಕಟ್ಟಿಕೊಂಡೇ ಹೋಗಬೇಕು,ಅಲ್ಲಿ ಶಾಲೆ ಹೇಗೋ ಏನೋ ? ಇನ್ನೂ ಊಟ, ವಸತಿ ಅದೆಲ್ಲ ಅಲ್ಲಿಗೆ ಹೊಂದಿಕೊಳ್ಳಲು ಅಷ್ಟು ಸುಲಭವಲ್ಲ ಎಂದು ಅರಿತು ಅವರ ಸಹೋದ್ಯೋಗಿ ಇಂದ ಮನವರಿಕೆ ಮಾಡಿಸಿದ್ದರು. ಏಕೆಂದರೆ ಜೋಯಿಸರು ಅವರ ಪತ್ನಿಯ ಮಾತನ್ನು ಕೇಳುತ್ತಿರಲಿಲ್ಲ.
ಜೋಯಿಸರ - ಸುಂದರಮ್ಮನವರ ಜೀವನ ನಾನಾ ಊರುಗಳಲ್ಲಿ ಬೆಸೆದುಕೊಂಡು, ಇಳಿ ವಯಸ್ಸಿನಲ್ಲಿ ಮಹಾನಗರಿಗೆ ಬಂದು ತಲುಪಿದೆ.ಇಲ್ಲಿ ಮಕ್ಕಳು ಮೊಮ್ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಅವರ ನಡುವಿನ ಜಗಳ ನೋಡಲು ಎರಡು ಕಣ್ಣು ಸಾಲದು, ಒಬ್ಬರನ್ನೊಬ್ಬರು ಕಾಲೆಳೆಯುವ ರೀತಿ ಹೇಳ ತೀರದು. ಅದೇ ಒಬ್ಬರಿಗೆ ಹುಷಾರು ತಪ್ಪಿದರೆ ಮತ್ತೊಬ್ಬರು ತೋರುವ ಕಾಳಜಿ ಮಾತ್ರ ಅಪೂರ್ವ!
ಅ೦ತಹ ಕೆಲವು ಘಟನೆಗಳು…
ಶ್ರೀ ಸೋಮನಾಥ್ ಪುರದ ಜ್ಯೋತಿರ್ಲಿಂಗ ದರ್ಶನ ಮುಗಿಸಿ ಹಿಂದಿರುಗುವಾಗ
 ಅಂಗಡಿ ಆತ "ನೋಡಿ ಸ್ವಾಮಿ ಹೇಗೆ ಹೊಳೀತಾ ಇದೆ ಈ ಸರಗಳು, ಸ್ಫಟಿಕದ ಮಾಲೆ ಇದು, ಧರಿಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆದು, ಕೇವಲ ಇನ್ನೂರು ರೂಪಾಯಿ .." ಎಂದೆಲ್ಲ ಬುರುಡೆ ಬಿಡುತ್ತಿದ್ದ. ಜೋಯಿಸರು ಅವನ ಭಾಷೆಯಲ್ಲೇ ಮಾತನಾಡಿದ್ದರು ಹಾಗಾಗಿ ಕಮ್ಮಿಯೇ ಹೇಳಿರುತ್ತಾನೆ ಎಂಬುದು ಜೋಯಿಸರ ನಂಬಿಕೆ ಅಲ್ಲದೆ ಆರೋಗ್ಯ ಅದು ಇದು ಹೇಳಿದ ಮೇಲೆ ಮೊಮ್ಮಕ್ಕಳಿಗೆ ತೆಗೆದುಕೊಳ್ಳುವ ಮನಸ್ಸಾಗಿ  ಒಂದೇ ರೀತಿಯ  8 ಮಾಲೆಗಳನ್ನು ಕೊಡ ಹೇಳಿದರು ಅಷ್ಟರಲ್ಲಿ ಮೆಲ್ಲಗೆ ನಡೆದುಕೊಂಡು ಬರುತ್ತಿದ್ದ ಸುಂದರಮ್ಮ ಅಲ್ಲಿಗೆ ತಲುಪಿದರು. ಗಮನಿಸಿದರು, ಸಾಧಾರಣ ಮಣಿಯನ್ನು ಪೋಣಿಸಿ ಪಳ ಪಳ ಹೊಳೆಯುವ ವಿದ್ಯುತ್ ದೀಪಗಳ ಕೆಳಗೆ ಅದನ್ನು ಜೋಡಿಸಿ ಕಣ್ಣು ಕುಕ್ಕುವಂತೆ ನೇಲಿಸಿದ್ದ. ಸುಂದರಮ್ಮನವರು ಬಂದೊಡನೆ ಜೋಯಿಸರು ಮನದಲ್ಲೇ "ಏನಾದರೂ ತಗಾದೆ ತೆಗೆದೆ ತೆಗೆಯುತ್ತಾಳೆ " ಅಂದುಕೊಂಡರು. ಸುಂದರಮ್ಮನವರು ಜೋಯಿಸರ ಕಡೆ ಮುಖ ಮಾಡಿ ಅಂದರು" ಇದು ಚಿಕ್ಕಪೇಟೆಲಿ  ಇಪ್ಪತ್ತು ರೂಪಾಯಿಗೆ ಸಿಗುವ ಮಾಲೆ , ನೀವು ಬೊಳೆಣ್ಣೆ ಹಚ್ಚಿಸ್ಕೊತ್ತಿದ್ದಿರ ಅಷ್ಟೆ, ಅಲ್ಲದೆ ನಿಮಗೆ ಇರುವ ಮೊಮ್ಮಕ್ಕಳ ಪೈಕಿ  ಮೂವರು ಮಾತ್ರ ಹೆಣ್ಣು ಮಕ್ಕಳು ಎಂದು ತಣ್ಣಗೆ ಹೇಳಿದರು" ಇವರುಗಳ ಮುಖದ ಭಾವವನ್ನು ನೋಡಿ ಅಂಗಡಿ ಆತ ಕಿಸಕ್ ಎಂದು ನಕ್ಕ. ಜೋಯಿಸರು ಅಲ್ಲಿಂದ ಬಿರ ಬಿರ ನಡೆದರು.
ಮತ್ತೊಮ್ಮೆ ರಾಮೇಶ್ವರಂ  ರೈಲ್ವೇ  ನಿಲ್ದಾಣದಲ್ಲಿ.
 ಬಸ್ಸೇ ಆಗಿರಲಿ ರೈಲೇ ಆಗಿರಲಿ ಒಂದು ಒಂದೂವರೆ ಗಂಟೆ ಮೊದಲೇ ತಲುಪುವುದು ಜೋಯಿಸರ ಅಭ್ಯಾಸ. ಅಂದು  ಸಂಜೆ 4 ಗಂಟೆಗೆ ರೈಲು ಇದ್ದಿತು, 3 ಗಂಟೆಗೆ ರೈಲು ನಿಲ್ದಾಣ ತಲುಪಿ ಆಗಿತ್ತು ಇನ್ನೂ ಆಯಾ ಪ್ಲಾಟ್ ಫಾರ್ಮ್ ನಲ್ಲಿ ನಿಂತರೆ ಆಗಿತ್ತು. ಜೋಯಿಸರು ಮಾತ್ರ ಬಿರುಸಾಗಿ ನಡೆಯುತ್ತಿದ್ದಾರೆ, ನೋಡಿದವರು 3 ಗಂಟೆಗೆ ರೈಲು ಎಂದು ಭಾವಿಸುವಷ್ಟು. ಆಗಿಂದ್ದಾಗೆ ತಿರುಗಿ ಸುಂದರಮ್ಮನನ್ನು  ನೋಡುತ್ತಿದ್ದರಂತೆ. ಈ ಪ್ರಸಂಗವನ್ನು ಅಜ್ಜಿ ಅವರ ಮೊಮ್ಮಗಳೊಂದಿಗೆ ಹೇಳಿ ನಗುತ್ತಿರುವುದು ಅಜ್ಜಯ್ಯ ನಿಗೆ ಕೇಳಿತ್ತು. ಅಜ್ಜಿ ಮುಂದುವರಿಸಿದರು " ಹುಚ್ಚು ಈ ಮನುಷ್ಯನಿಗೆ ಎಂದು ಅದೆಷ್ಟು ಜನ ಅನ್ಕಂಡಿದ್ರ ಏನಾ" ಎಂದು ಹೇಳಿದ್ದು ಕೇಳಿ
ಅಜ್ಜ  ಅಕಾಡಕ್ಕೆ ಇಳಿದು " ನೀ ಎಂತ ದೊಡ್ಡ ರಂಬೆಯ ನಿನ್ನ ತಿರುಗಿ ತಿರುಗಿ ನೋಡೋದಕ್ಕೆ ?!" 
ಅಜ್ಜಿ : ನೋಡಿದ್ದು ನೀವು ನಾನಲ್ಲ! 
ಅಜ್ಜ: ಒಂದು ಕೆಜಿ ಚಿನ್ನ ಹೇರಿಕೊಂಡು ಬೆಕ್ಕಿನ ನಡಿಗೆಯಲ್ಲಿ ಬರುತ್ತಿದ್ದೆ ಇನ್ನೂ ಯಾರರು ನಿನ್ನ ಹಿಡ್ಕೊಂಡು ಹೋದ್ರೆ ಅದಕ್ಕೆ ನೋಡಿದ್ದು! ನಿನ್ನ ಅಲ್ಲಾ!!
ಅಜ್ಜಿ : ಯಾರು ಹಿಡ್ಕೊಂಡು ಹೋಗಿಲ್ಲ ಬಿಡಿ..
ಅಜ್ಜ : ಎಲ್ಲರಿಗೂ ನನ್ನಷ್ಟು ತಾಳ್ಮೆ ಇರಬೇಕಲ್ಲ ಎಂದು ಒಳಗೊಳಗೇ ಹೇಳಿಕೊಂಡರು.
ನಾರಯಾಣನ೦ಗಡಿಯ ತಿ೦ಡಿ ಮತ್ತು ಕೆ೦ಪು ಅ೦ಚಿನ ಪ೦ಚೆ
ಅಜ್ಜನಿಗೆ ಮೊಮ್ಮಕ್ಕಳು ಅಂದ್ರೆ ಪ್ರಾಣ. ಅವುಗಳಿಗೂ ಅಷ್ಟೆ ಅಜ್ಜ ಕೊಡೊ ದೇವಸ್ಥಾನದ ಪ್ರಸಾದ, ಆಮೇಲೆ ನಾರಾಯಣನ ಅಂಗ್ಡಿ ನಿಪ್ಪಟ್ಟು, ಚಕ್ಲಿ ಎಲ್ಲ ಇಷ್ಟ. ಆದ್ರೆ ಅಜ್ಜ ಅದನ್ನು ಕೊಟ್ಟು ಮೊಮ್ಮಕ್ಕಳ ಪ್ರೀತಿಗೆ ಪಾತ್ರ ಆಗೋದು  ಅಜ್ಜಿಗೆ ಇಷ್ಟವಿಲ್ಲ. ಒಮ್ಮೆ ಅಜ್ಜಿ ಈ ವಿಷಯ ಕುರಿತು ಮೊಮ್ಮಕ್ಕಳ ಹತ್ತಿರ ಹೇಳುತ್ತಾ ಇದ್ದರು.
ನಿಮ್ಮ ಅಜ್ಜನಿಗೆ ಬಿಳಿ ಅಂಗಿ ಬಿಳಿ ಪಂಚೆ ಆಗ್ಬೇಕು ಅದನ್ನು ಅವರು ದೇವಸ್ಥಾನದಿಂದ ಬಂದ ಮೇಲೆ ನೋಡಿದ್ರೆ ಆ ದೇವರಿಗೆ ಪ್ರೀತಿ! ಅಲ್ಲಾ ಆ ಅಂಗಿಯ ಕಿಸೆಗೆ ಸೀದ ನಿಪ್ಪಟ್ಟು, ಚಕ್ಕುಲಿ, ಕೋಡುಬಳೆ ಹಾಕೊಂಡು ಅಂಗಿ ಪೂರಾ ಎಣ್ಣೆ ಜಿಗುಟು, ಇನ್ನೂ ಪಂಚೆ ,ಸಿನಿಮಾ ನಟಿ ಹಾಗೆ ಸೊಂಟದ ಕೆಳಗೆ ಕಟ್ಟಿಕೊಂಡು ಧರ ಧರ ನಡ್ಕೊಂಡು ಬರ್ತಾರೆ ಒಳ್ಳೆ ಕೆಂಪು ಅಂಚು ಕೊಟ್ಟ ಹಾಗೆ ಆಗಿರುತ್ತೆ .ಅದ್ನ ತಿಕ್ಕಿ ತಿಕ್ಕಿ ನನ್ನ ಕೈಯೆಲ್ಲ ಬಿದ್ದೇ ಹೊಗಿದೆ!
ಈ ಮಾತು ಅಜ್ಜನ ಕಿವಿಗೆ ಬಿದ್ದ ಮರು ದಿನದಿಂದ ಅಜ್ಜನ ಬಟ್ಟೆ ಅಜ್ಜನೆ ತೊಳಿತಿದ್ರು. ಹಾಗಂತ ಅಜ್ಜಿ ಒಂದೆರಡು ಬಾರಿ ಬೇಡ ಅಂದಿದ್ದಾರೆ ಅಷ್ಟೆ. ಆಮೇಲೆ ಅಜ್ಜ ಎಷ್ಟೇ ಆದ್ರೂ ಹೆಣ್ಣು ಜೀವದ ಹಾಗೆ ತಿಕ್ಕಿ ತಿಕ್ಕಿ ತೊಳೆಯೋದು ಸ್ವಲ್ಪ ಕಷ್ಟ ಹಾಗಾಗಿ ಅವರಿಗೆ ಸಾಧ್ಯ ಆದ ಹಾಗೆ ತೊಳೆದು ಹಾಕುತ್ತಿದ್ದರು. ಅಜ್ಜಿ ಮಾತ್ರ ಅವುಗಳು ತಂತಿಯ ಮೇಲೆ ಆರಲು ಹಾಕಿದಾಗ ತಮ್ಮ ಪರಿಮಳದ ಬಟ್ಟೆಗೆ ಸ್ವಲ್ಪವೂ ತಾಗದಂತೆ ಆಗಾಗ ಹೋಗಿ ನೋಡುತ್ತಿದ್ದರು. ಅದನ್ನು ತಿಳಿದು ಅಜ್ಜ ಅಲ್ಲಿ ಬಟ್ಟೆ ಹಾಕುವುದನ್ನು ನಿಲ್ಲಿಸಿದರು.ಹೀಗೆ ಒಮ್ಮೆ ಅಜ್ಜ ಹಗ್ಗದ ಮೇಲೆ ಬಟ್ಟೆಗಳನ್ನು ಹಾಕುತ್ತಿದ್ದರು. ಅಲ್ಲೆ ಇದ್ದ ಅಜ್ಜಿ ಸುಮ್ಮನೆ ಇರಲಾರದೆ. "ಹೀಗೆ ಬಟ್ಟೆ ನೇಲ್ಸಿ ನೇಲ್ಸಿ ಹಗ್ಗ ತುಂಡೆ ಆಗುತ್ತಾ ಏನ!" ಎಂದು ಅಜ್ಜಂಗೆ ಕೇಳುವ ಹಾಗೆ ಗೊಣಗಿಕೊಂಡರು ಅಜ್ಜ ಕೋಪದಿಂದ ಹ್ಯಾಂಗರ್ ಸಮೇತವಾಗಿ ಅವುಗಳೆನ್ನಲ್ಲ ಕಿತ್ತು ತೆಗದು ಅಲ್ಲೆ ಇದ್ದ ಅವರ ಟ್ರಂಕಿನ ಒಳ ತುಂಬಿಸಿ ಬಲವಾಗಿ ಮುಚ್ಚಲು ಅಜ್ಜಿ "ಅಲ್ಲ ಹ್ಯಾಂಗರ್ ತುಂಡಾದೀತ ಏನ?" ಅನ್ನಬೇಕೆ!!
ಜೋಯಿಸರು ಇವೆಲ್ಲ ತಗಾದೆಗಳ ನಡುವೆಯೂ ಸಂಪೂರ್ಣ ಬದುಕನ್ನು ಬದುಕಿದವರು. ಪ್ರತಿ ಹಬ್ಬಕ್ಕೂ ಎಲ್ಲ ಮಕ್ಕಳು ಮೊಮ್ಮಕ್ಳ ಹೆಸರಿಗೆ ಡಿಡಿ ಕಳಿಸುತ್ತಿದ್ದರು. ಮೊಮ್ಮಕಳು ಮೇಲೆ  ಅದೆಷ್ಟು ಪ್ರೀತಿ ಎಂದರೆ ಅವರ ಮಂಚದ ಮೇಲೆ ಅಂಟಿಸಿಕೊಂಡಿದ್ದ ಚಿತ್ರಗಳೇ ಸಾಕ್ಷಿ. ಹೇಗೋ ಬಿಡಿಸಿ, ಹೇಗೋ ಬಣ್ಣ ತುಂಬಿಕೊಂಡು ಇರುವ ಚಿತ್ರಗಳು ಅವನ್ನೂ ಅತ್ಯಂತ ಕಾಳಜಿ ಇಂದ ಇಟ್ಟುಕೊಂಡಿರುವ ಅವರು ಯಾವುದೇ ಆಡಂಬರ , ತೋರಿಕೆಗೆ ಬದುಕದೆ ತಮಾಗೋಸ್ಕರ ಬದುಕುವವರು ಎಂಬುದನ್ನು ತೋರಿಸುತ್ತದೆ.ನಿತ್ಯ ಗ್ರಂಥಾಲಯ , ದೇವಸ್ಥಾನಕ್ಕೆ ತಪ್ಪದೆ ಹೋಗುವರು.ನಿಷ್ಕಲ್ಮಶವಾಗಿ ತಮ್ಮ ಸುತ್ತ ಇರುವ ಪ್ರತಿಯೊಬ್ಬರನ್ನೂ ಪ್ರೀತಿಸುತ್ತಿದ್ದರು. ಪ್ರಾಯಶಃ ಅತ್ಯಂತ ತೃಪ್ತಿ ಇಂದ ಬದುಕುವ ಕೆಲವೇ ವ್ಯಕ್ತಿಗಳಲ್ಲಿ ಇವರು ಒಬ್ಬರು.

Comments

  1. I know there are still tons of stories Dev!! The days where he took us in his bicycle, Shirdi Mandir... all these might have popped in your mind ♥️

    ReplyDelete
  2. Yes sumu. Everything is fresh and will remain evergreen in our minds. 😇 he has given us so many memories to cherish. 😘

    ReplyDelete

Post a Comment

Popular posts from this blog

Sarees and Secrets

The lil 💙

Emotional Rollercoaster: Riding the Waves of Dysphoria and Euphoria