#48, ಸಿರಿ ದೇವ ಮತ್ತು ಗಾಜಿನ ಜಾಡಿಗಳು

ಅದು ಮಬ್ಬುಗತ್ತಲೆಯ ಕೋಣೆ. ಇಡಿಯ ವಿದ್ಯಾರ್ಥಿ ನಿಲಯದಲ್ಲಿ ಹೆಚ್ಚಿನ ಸೌಲಭ್ಯ ಸಿಗುವ ಏಕಮಾತ್ರ ಕೋಣೆ #48. ನನ್ನ ಅದೃಷ್ಟ ಅಲ್ಲಿ ಸೇರಿಕೊಂಡೆ ಅಲ್ಲಿ ಮೊದಲೇ ಬಿಡಾರ ಹೂಡಿದ್ದ ಸಿರಿ ದೇವ ನನಗೆ ಕೋಣೆಯ ವಿಶೇಷತೆಗಳನ್ನು ಹೇಳಿದಳು.ಕೋಣೆಯ ಒಂದು ಮೂಲೆ ಮಳೆಗಾಲದಲ್ಲಿ ಸಂಪೂರ್ಣ ಸೋರುತ್ತಿತ್ತು. ಹಾಗಾಗಿ ಅಲ್ಲಿ ಯಾರೂ ಜಾಂಡ ಊರುವ ಹಾಗಿರಲಿಲ್ಲ ಇದರಿಂದ ಅಲ್ಲಿ ಇಬ್ಬರಿಗೆ ಮಾತ್ರ ಅವಕಾಶ ,ಇದು ಮತ್ಯಾವ ಕೊಣೆಯಲ್ಲು ಸಿಗದು. ಇನ್ನು ಹೀಗೆ ಮಳೆಯ ನೀರಿನಿಂದ ತುಕ್ಕು ಹಿಡಿದ ಕಂಬಿಯ ಕಿಡುಕಿಯನ್ನು ಸ್ಲೈಡಿಂಗ್  ವಿಂಡೋವಾಗಿ ಮಾರ್ಪಾಟು ಮಾಡಿದ್ದರು. ಯಾವುದೋ ಖಾಸಗಿ ದ್ವೀಪದ, ಗಗನಚುಂಬಿ ವಸತಗೃಹದ ತುತ್ತ ತುದಿಯ ಕೋಣೆಯ ಕಿಡುಕಿಯಂತೆ ನಮಗೆ ಅನ್ನಿಸುತ್ತಿತ್ತು ಅದಕ್ಕೆ ಕಾರಣ ಈ ಕಿಡುಕಿ ತಳ್ಳಿದಾಗ, ಆಕಾಶ, ಸಂಪೂರ್ಣ ಹಸಿರು ಮರಗಳು ,ಪಕ್ಷಿಗಳು, ಅಳಿಲುಗಳು ಇವೆಲ್ಲ ಕಾಣ ಸಿಗುತ್ತಿದ್ದವು. ಮಾರ್ಗ ಬದಿಯಾಗಿರದ ಕಾರಣ ವಾಹನದ ಸದ್ದುಗದ್ದಲವೂ ಇರುತ್ತಿರಲಿಲ್ಲ. ಒಟ್ಟಿನಲ್ಲಿ ನಮ್ಮ ಇಂದ್ರಲೋಕವೆ ಇದಾಗಿತ್ತು.
  ಸದಾ ನಗು - ಕುಶಿ, ಯಾವ ಚಿಂತೆಯೂ ಇಲ್ಲಿ ಇರುತ್ತಿರಲಿಲ್ಲ, ಹಾಗೆ ಬಂದರು ಅವುಗಳು ನೀರ ಮೇಲಿನ ಗುಳ್ಳೆಗಳಂತೆ. ಬೆಳ್ಳಂಬೆಳಗ್ಗೆ ಎದ್ದು ಬಿಸಿನೀರು ಮಾಡುವ ಕೆಲಸ ನನಗಾದರೆ ಅಂದಿನ ಧಿರಿಸಿನ ಇಸ್ತ್ರಿ ಕೆಲಸ ಸಿರಿಯದ್ದು. ಇನ್ನು ಮೆಸ್ಸಿನಲ್ಲಿ ಇಬ್ಬರಿಗು ತಿಂಡಿ ಬಡಿಸಿ ತರುವ ಕೆಲಸ ನನ್ನದು ಮತ್ತು ನೀರಿನ ಕುಪ್ಪಿ ತುಂಬಿಸುವ ಕೆಲಸ ಸಿರಿಯದ್ದು.ಅಷ್ಟೆ ಅಲ್ಲ ಬಸ್ಸಿನಲ್ಲಿ ನಡೆಯುವ ಸಂಭಾಷಣೆಗಳಿಗೆ ಕಣ್ಣು ಅರಳಿಸಿ ನಾನಾ ಅರ್ಥ ಕಲ್ಪಿಸಿ ಆಕೆ ಹಲ್ಲು ಬಿಟ್ಟರೆ ನಾನು ಜೋರಾಗಿ ನಕ್ಕು ಉಳಿದವರ ವಕ್ರ ದೃಷ್ಟಿಗೆ ಬಲಿಯಾಗುತ್ತಿದ್ದೆ!
ನಮ್ಮ ನಗುವಂತು ಎಲ್ಲೆಂದರಲ್ಲಿ, ಬಸ್ಸು , ಮಾರ್ಗ, ದೇವಸ್ಥಾನ ,ಆಶ್ರಮ ಹೀಗೆ ಎಲ್ಲೆಲ್ಲೂ.ಒಮ್ಮೆ ರಾಮಕೃಷ್ಣ ಆಶ್ರಮಕ್ಕೆ ಭೇಟಿ ಇಟ್ಟೆವು ಅಲ್ಲಿ ಅದಾಗಲೇ ಹಲವು ಸನ್ಯಾಸಿಗಳು  ತಲೆಯ ಮೇಲೆ ಮುಸುಕು ಹಾಕಿ ಧ್ಯಾನ ಸ್ಥಿಯಲ್ಲಿದ್ದರು ಆಗ ಸಿರಿ ಹಿಂದಿನ ದಿನವಷ್ಟೇ ನೋಡಿದ ತಟ್ಟತಿನ್ ಮರೆಯತಿಲ್ ಸಿನೆಮದ ಗುಂಗಿನಲ್ಲಿ, "ಅಕ್ಕ  ತಟ್ಟತಿನ್ ಮರೆಯತ್ತಿಲ್" ಅಂದಳು ನಾನು ನಗು ತಡೆಯಲಾಗದೆ ಜೋರಾಗಿ ನಕ್ಕು ಬಿಟ್ಟೆ. ಸಂಪೂರ್ಣ ನಿಷಬ್ಧವಾಗಿದ್ದ ,ಒಂದು ಸೂಜಿ ಬಿದ್ದರೂ ಕೇಳುವಂತಿದ್ದ ಅಲ್ಲಿ ನಾನು ನಕ್ಕಿದ್ದು ಪ್ರತಿ ಧ್ವನಿಸುವಂತೆ ಭಾಸವಾಗಿ ಪೆಟ್ಟು ತಿನ್ನುವ ಮೊದಲು ನಾವಿಬ್ಬರೂ ಸಾಸಿವೆ ರಟ್ಟಿದಂತೆ ಆಶ್ರಮದ ಹೊರಗೆ ಬಿದ್ದೆವು! ನಾವು ಮಾಡಿದ ತಪ್ಪಿನ ಅರಿವಾಗಿ ಅದಕ್ಕೆ ತಕ್ಕ ಶಿಕ್ಷೆ ಅನುಭವಿಸುವ ಸಲುವಾಗಿ, ಮೊದಲೇ ಮಾತನಾಡಿದಂತೆ ಇಪ್ಪತ್ತು ರೂಪಾಯಿ ಬದಲು ಹತ್ತೆ ರೂಪಾಯಿಗೆ ಬೋಂಡ ಕಟ್ಟಿಸಿಕೊಂಡು, ತಲೆಯ ಮೇಲೆ ಶಾಲು ಹಾಕಿ ಬಸ್ ಏರಿ ಕೂತೆವು. ಯಾರೋ ಬಂದು ಪೆಟ್ಟು ಹಾಕಿದಂತೆ ಅಂದು ಕನಸು ಬಿದ್ದಿರಬೇಕು!
ಮತ್ತೊಮ್ಮೆ ಪಬ್ಬಾಸ್ ನಲ್ಲಿ ಐಸ್ಕ್ರೀಮ್ ತಿನ್ನಲು ಹೋದಾಗ, ಎಂದಿನಂತೆ ಅಲ್ಲಿ ಜನ ಸಾಗರ ಇತ್ತು, ಇನ್ನೂ  ನಮ್ಮಿಬ್ಬರಿಗೆ  ಒಂದು ಸಣ್ಣ ಮೇಜನ್ನು ತೋರಿಸಿದರು, ಅಲ್ಲಿ ಒಬ್ಬಾತ ಮೊದಲೇ ಕುಳಿತಿದ್ದ. ಇನ್ನೇನು ಮಾಡುವುದು ನಾವು ನಮ್ಮಷ್ಟಕ್ಕೆ ಕೂತೆವು. ಸರಿ ಐಸ್ಕ್ರೀಮ್ ಯಾವುದೆಂದು ಹೇಳಿಯಾಯಿತು ಅದೇ ರೀತಿ ಆತನು ಮತ್ತೇನನ್ನೋ ಹೇಳಿದ ಸರಿ ಹತ್ತು ಹದಿನೈದು ನಿಮಿಷಕ್ಕೆ ನಮಗೆ ಐಸ್ಕ್ರೀಮ್ ಕೊಟ್ಟವರು "ಬಿಲ್ ಒಟ್ಟಿಗೆ ಅಲ್ವಾ" ಅಂದರು, ಆತನಿಗೆ ಬಿಲ್ ಮಾತ್ರ ಕೇಳಿತ್ತು ಆತ ಹೌದೆಂಬಂತೆ ತಲೆ ಆಡಿಸಿ, ಉದ್ದದ ಗಾಜಿನ ಲೋಟದ ಬುಡದಲ್ಲಿ ಉಳಿದಿದ್ದ ಗೋಡಂಬಿ ದ್ರಾಕ್ಷಿಯನ್ನು ಬೇಟೆ ಆಡುತ್ತ ಇದ್ದ.ನಮ್ಮ ನಗು ವಿದ್ಯಾರ್ಥಿ ನಿಲಯದ ಕೋಣೆ ತಲುಪಿದ ಮೇಲೂ ನಿಂತಿರಲಿಲ್ಲ.
  ಆಕೆಯಂತು ಒಲವೇ ಜೀವನ ಲೆಕ್ಕಾಚಾರ ಎಂದು ನಂಬಿದವಳು ಹಾಗಾಗಿ ಯಾವಗಾದರು ಒಮ್ಮೆ ಶನಿವಾರದಂದು ಸೈಬಾ ಎಂಬ ಪುಟ್ಟ ಉಪಹಾರ ಗೃಹದಲ್ಲಿ 130 ರೂಪಾಯಿಗೆ  ಇಬ್ಬರ ಊಟವಾಗಿ,  ಅಲ್ಲಿ ತುಸು ತಿರುಗಿ ಸಂತೃಪ್ತಿಯಿಂದ ನಮ್ಮ ಕೋಣೆ ತಲುಪುತ್ತಿದ್ದೆವು. ಅಂದು ಒಂದು ಸಿನೆಮಾ ನೋಡಿ, ಇಬ್ಬರಲ್ಲಿ ಒಬ್ಬರಿಗೆ ನಿದ್ದೆ ಬರುವಷ್ಟು ಹೊತ್ತು ಮಾತಾನಾಡಿ ಮಲಗಿಕೊಳ್ಳುತ್ತಿದ್ದೆವು ಇನ್ನೇನು ಮರುದಿನ ಭಾನುವಾರ ನಾವು ಏಳುತ್ತಿದ್ದ ಹೊತ್ತಿಗೆ ಮೆಸ್ಸಿನಲ್ಲೆ ಕೂತು ತಿನ್ನುವ ಧೈರ್ಯ ಎಲ್ಲಿ ಬರಬೇಕು? ಹಾಗಾಗಿ ತಿಂಡಿಯನ್ನು ಕೋಣೆಗೆ ತಂದು ಕಾಲಿ ಇರುವ ಕಡಪ್ಪ ಕಲ್ಲಿನ ಮಂಚದ ಮೇಲೆ ಕೂತು ತಿನ್ನುತ್ತಿದ್ದೆವು. ಆಗ ಅದೆಷ್ಟೋ ಕನಿಸಿನಲ್ಲಿಯೂ ಅಸಾಧ್ಯವಾದ ಆಸೆಗಳನ್ನು ಹೇಳಿಕೊಳ್ಳುತ್ತಿದ್ದೆವು , ಒಂದು ಒಳ್ಳೆಯ ಉಪಹಾರ ದರ್ಶಿನಿ ಆರಂಭಿಸುವ, ಹಣದ ಪಟ್ಟಿ ನೋಡದೆ ಬಟ್ಟೆಗಳನ್ನು ಕೊಳ್ಳುವ, ಒಟ್ಟಿಗೆ ಹಿಮಾಲಯವನ್ನು ಹತ್ತುವ ಹೀಗೆ ಅನೇಕ ಆಸೆಗಳು ಅಲ್ಲಿ ಬಂದು ಹೋಗುತ್ತಿದ್ದವು.
 ಅದು ಹೇಗೆ ವರ್ಷಗಳು ಉರುಳಿದವೊ ತಿಳಿಯಲೇ ಇಲ್ಲ. ಸಿರಿಯ ಊರು ತುಸು ಹತ್ತಿರವಾದ್ದರಿಂದ ಆಗಿಂದ್ದಾಗೆ ಊರಿಗೆ ಹೋಗುತ್ತಿದ್ದಳು ಹಾಗೆ ಹೋದಾಗಲೆಲ್ಲ ಸಿನೆಮಾ ನೋಡಲು ತನ್ನ ಲಾಪ್ -ಟಾಪ್ ಕೊಟ್ಟು "ಸುಮ್ಮನೆ ಬೇಡದ ಯೋಚನೆ ಮಾಡಿಕೊಂಡು ಕೂರ್ಬೇಡ ಒಳ್ಳೆ ಸಿನಿಮಾ ಉಂಟು ನೋಡು" ಎಂದು ಹೇಳಿ ಹೋಗುತ್ತಿದ್ದಳು. ಅಲ್ಲದೆ ಊರಿಂದ ಗಮ ಗಮ ತಿನಿಸುಗಳು ಬರುತ್ತಿದ್ದವು, ಅದರಲ್ಲೂ ಕ್ಯಾರೆಟ್ ಹಲ್ವದ ರುಚಿ ಮರಿಯುವ ಹಾಗೆ ಇಲ್ಲ! ಇನ್ನೂ ನಿಂಬೆ ಉಪ್ಪಿನಕಾಯಿ ಅದು ಬೇರೆಯೇ ಸ್ಥರ!! ಆಕೆ ನನಗಿಂತ ಸಣ್ಣ ಆದರೆ ಅವಳಿಂದ ನಾನು ಕಲಿತ ಗುಣಗಳು ಸಣ್ಣದಲ್ಲ. ಪ್ರಾಯಶಃ ಅವಳ ಗೆಳೆತನ ಆಗದಿದ್ದರೆ ಅದೆಷ್ಟು ಅದ್ಭುತ ಸಂಗತಿಗಳನ್ನು ಗಮನಿಸಿದೆ ಕಳೆದುಕೊಳ್ಳುತ್ತಿದ್ದೆ. ಅದಕ್ಕೆ ನಾನು ಸದಾ ಚಿರಋಣಿ!
ಇನ್ನು ಅವಳ ಮನೆಯಂತು ನನ್ನ ಮನೆಯೇ, ಅವಳ ಅಕ್ಕ ಶೀಲಕ್ಕ  ಏನೇ ಕೊಂಡು ಹೋದರು ಅದರ ಸಿಂಹಪಾಲು ನಮಗೆ ಕೊಡುತ್ತಿದ್ದರು. ಬಾಗಿಲು ಹಾಕಿ ಬಿಸ್ಕತ್ ತಿನ್ನುವ ಈಗಿನ ಕಾಲದಲ್ಲಿ ನಮ್ಮ ಶೀಲಕ್ಕನ ಪ್ರೀತಿ ಹೀಗೆ! ಅಲ್ಲದೆ ಮಾತಿನಲ್ಲೇ ಮುಳುಗಿ ಹೋಗುವ ನನಗೆ, ಅವರ ಮನೆಯಿಂದ ಹೊರಡುವಾಗ ನಾನು ಮರೆತೇ ಹೋಗುತ್ತಿದ್ದ ವಸ್ತುಗಳನ್ನು ನೆನಪಿಸುವುದು ಇವರೇ ಹಾಗಾಗಿ ಅಕ್ಕನ ಕೃಪೆಯಿಂದ ಹಲವು ಬೈಗುಳಗಳಿಂದ ನಾನು ಪಾರಾಗಿದ್ದೇನೆ.ಇನ್ನೂ ಆಕೆಯ ಅಮ್ಮನ ಹತ್ತಿರ ಊಟ ಆದ ಮೇಲೂ ಕೈ ತೊಳಿಯದೆ ಗಂಟೆ ಗಟ್ಟಲೆ ಮಾತನಾಡಿದ್ದು ಉಂಟು. ಅವರಿಗೆ ಗಾಜಿನ ಜಾಡಿಗಳೆಂದರೆ ಇಷ್ಟ. ನನ್ನ ಅಕ್ಕನ ಬಸಿರಿನ್ನಲಿ ಅವರು ಒಂದು ದೊಡ್ಡ ಗಾಜಿನ ಕುಪ್ಪಿ ನಿಂಬೆ ಉಪ್ಪಿನಕಾಯಿ ಕೊಟ್ಟಿದ್ದರು. ಅದು ಒಂದು ವಿಶೇಷ ಉಪ್ಪಿನಕಾಯಿ ಅದನ್ನು ಹಾಕಲು ಬಹಳ ತಾಳ್ಮೆ ಬೇಕು ಹಾಗಿರುವಾಗ ಅದನ್ನು ಪಾರ್ಸೆಲ್ ಮಾಡಿ ಕಳುಹಿಸಿದ್ದರು. ನಾನು ಮನೆಯವಳೇನು ಅಲ್ಲ ಇನ್ನೂ ನನ್ನ ಅಕ್ಕ ? ಹೀಗಿರುವಾಗ ಅವರು ತೋರಿಸಿದ ಪ್ರೀತಿ ನನ್ನ ಕಣ್ಣಂಚಿನಲ್ಲಿ ಈಗಲೂ ನೀರು ತರಿಸುತ್ತದೆ.
 ನನ್ನ ಮುಗಿಯದ ಮಾತನ್ನು ಕೇಳಿಸಿಕೊಂಡು. ನಾನು ಹೇಳುತ್ತಿದ್ದ ಕತೆಗಳ ಪಾತ್ರಧಾರಿಗಳು, ಘಟನೆಗಳನ್ನು , ಸೂಕ್ಷ್ಮಗಳನ್ನು ಇನ್ನೂ ನೆನಪಿನಲ್ಲಿ ಇಟ್ಟುಕೊಂಡು ಈಗಲೂ ಅಷ್ಟೆ ಪ್ರೀತಿಯಿಂದ ಬಾಚಿ ತಬ್ಬಿಕೊಂಡು ಅಕ್ಕ ಎಂದು ಮನೆಗೆ ಒಳಗ ಎಳೆದುಕೊಂಡು ಹೋಗಿ, ನನ್ನ ಅತ್ತೆ ಮಾವನಿಗೆ ಏನು ಬೇಕೆಂದು ತಿಳಿದು ಅದನ್ನು ನೀಡಿ ಸತ್ಕರಿಸುವ ರೀತಿ ಇವೆಲ್ಲ ನಮ್ಮನ್ನು ಒಂದು ತೆರನಾದ ಸೆಳೆತಕ್ಕೆ ಒಳ ಪಡಿಸಿ ಬಂಧಿಸಿ ಬಿಡುತ್ತದೆ. ಎಲ್ಲಿಯೋ ಹುಟ್ಟಿ , ಯಾವ ಓಬಿರಾಯನ ಸಂಬಂಧವೇನೋ ಎಂದು ಬೆಸೆದುಕೊಳ್ಳುವ ಸ್ನೇಹಕ್ಕೆ ಬೆಲೆ ಕಟ್ಟಲು ಅಸಾಧ್ಯ. ಇಂದಿಗೂ ಗಾಜಿನ ಅಂದದ ಜಾಡಿಗಳನ್ನು ನೋಡಿದಾಗ ಅಮ್ಮನ ನೆನಪಾಗುವುದು ಉಂಟು.ಆಗೆಲ್ಲ ಹೀಗೆ ಅನ್ನಿಸಿದೆ, "ಪ್ರೀತಿ ತುಂಬಿದ ಕಣ್ಣಲ್ಲಿ ಕಾಣುವ ಈ ತಾಯಂದಿರು ಅದೆಷ್ಟು ಸುಂದರ!".


Comments

Popular posts from this blog

Sarees and Secrets

Emotional Rollercoaster: Riding the Waves of Dysphoria and Euphoria

Error is Human?