ನಿರ್ಧಾರ
ಒಂದಾನೊಂದು ಕಾಲದಲ್ಲಿ ರಾಜಧಾನಿಯಾಗಿದ್ದ ಊರು ರಾಜಪಟ್ಣ. ಹಾಗಾಗಿ ಕೆಲ ದಶಕಗಳ ಹಿಂದೆ ಇಲ್ಲಿನ ಜನರು ನಿಧಿಯ ಆಸೆಗೆ ಅದೆಷ್ಟೋ ಭೂಮಿಯನ್ನು ಅಗಿದು ತಮ್ಮ ಅದೃಷ್ಟ ಪರೀಕ್ಷಿಸಿದ್ದು ಉಂಟು. ಅದರಲ್ಲಿ ಕೆಲವೇ ಕೆಲವರಿಗೆ ಲಕ್ಷ್ಮಿ ಒಲಿದಿದ್ದಾಳೆ ಎಂದು ಗುಮಾನಿಗಳಿವೆ.
ಇದರ ವ್ಯಾಪ್ತಿಗೆ ಬರುವ ಗೌರ, ಕಾಡು, ಪಕ್ಷಿ ಪ್ರಪಂಚ, ಶುದ್ಧ ನೀರಿನ ನದಿ ಇವೆಲ್ಲ ಇರುವ ಸಮೃದ್ಧವಾದ ಗ್ರಾಮ. ಶಂಭು ಭಟ್ಟರ ಮನೆ, ೩೦೦ ಬಟ್ಟಿ ಭೂಮಿ, ಹತ್ತು ಎಕರೆ ಗುಡ್ಡೆ ಇದ್ದದ್ದು ಇದೇ ಗೌರದಲ್ಲಿ. ಭಟ್ಟರು ಪುಸ್ತಕದಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಅದರಲ್ಲಿ ಬರುತ್ತಿದ್ದ ಸಂಬಳ ಹಾಗೂ ಸಣ್ಣ ಪುಟ್ಟ ಕೃಷಿಯಿಂದ ಬರುತ್ತಿದ್ದ ಹಣದಿಂದ ಮಡದಿ ಲಕ್ಷ್ಮಮ್ಮ ಹಾಗೂ ನಾಲ್ಕು ಮಕ್ಕಳ ಸಂಸಾರ ಮುಂದೆ ಸಾಗಿತ್ತು. ಸ್ವಾತಂತ್ರ ದಿನಾಚರಣೆಯಂದು ಭಟ್ಟರು ಚೌಚೌ ಹಾಗೂ ಜಿಲೇಬಿ ತರುತ್ತಿದ್ದರು ಅಂದು ಎಲ್ಲ ಮಕ್ಕಳು ಚೀರುತ್ತಾ ಕೇಕೆ ಹಾಕುತ್ತಾ ಸಂಭ್ರಮಿಸುತ್ತಿದ್ದರು. ಅದಲ್ಲದೆ ತಿಂಗಳಿಗೊಮ್ಮೆ ಮಾತ್ರ ಮಾಡುವ ಚಾಯ , ಆರು ತಿಂಗಳಿಗೊಮ್ಮೆ ಮಾಡುವ ಉಪ್ಪಿಟ್ಟು, ಚಪಾತಿಗು ಇದೆ ಸಂಭ್ರಮವಿರುತ್ತಿತ್ತು.ಅಮ್ಮನವರು ಕೂಡ ನರೆಯಲ್ಲಿದ್ದ ತಮ್ಮನ ಕುಟುಂಬ ಹಾಗೂ ಅವರ ಮಕ್ಕಳನ್ನು ತಮ್ಮ ಮಕ್ಕಳಷ್ಟೇ ಪ್ರೀತಿಸುತ್ತಿದ್ದರು. ಶಂಭು ಭಟ್ಟರು ಒಬ್ಬನೇ ಮಗನಾದದ್ದರಿಂದ ಅವರ ಅಣ್ಣ ತಮ್ಮಂದಿರು ಇರಲಿಲ್ಲ.ಆಸ್ತಿ ಅಂತಸ್ತಿನಲ್ಲಿ ಬಡತನವಿದ್ದರೂ ಹೃದಯ ಶ್ರೀಮಂತರಾಗಿದ್ದರು.
ಹೀಗಿರುವಾಗ ಒಂದು ದಿನ ನೆರೆ ಮನೆಯ ಜಕೊಬಿ ಬಂದು ಶಂಭು ಭಟ್ಟರಲ್ಲಿ ತನ್ನ ಕಷ್ಟವನ್ನು ಹೇಳಿಕೊಂಡು ಭತ್ತ ಬೆಳೆಯಲು ಭೂಮಿಯನ್ನು ಎರವಲು ಕೊಡುವಂತೆ ಬೇಡಿಕೊಂಡ. ಭಟ್ಟರು ತಾವಾಗೇ ಕೃಷಿ ಮಾಡುವಷ್ಟು ಹಣವಿಲ್ಲದ್ದರಿಂದ ಇದಕ್ಕೆ ಒಪ್ಪಿದರು. ಅದಲ್ಲದೆ ಊಟಕ್ಕೆ ಬೇಕಾಗುವಷ್ಟು ಅಕ್ಕಿಯನ್ನು ಮಾತ್ರ ಕೊಟ್ಟರೆ ಸಾಕು ಎಂದು ಹೇಳಿದರು. ಭಟ್ಟರು ತುಂಬಾ ಸಾಧು ಸ್ವಭಾವದವರು, ಯಾರೊಬ್ಬರಿಗೂ ನೋವಾಗುವಂತೆ ಹೋಗಲಿ ಎತ್ತರಿಸಿದ ಧ್ವನಿಯಲ್ಲಿ ಎಂದೂ ಮಾತನಾಡಿದವರಲ್ಲ. ಜಕೊಬಿಯ ಕಷ್ಟವನ್ನು ಕೇಳಿ ಮಮ್ಮಲ ಮರುಗಿದರು ಕೂಡ.
ಮೊದಲನೆಯ ವರ್ಷದ ಅಕ್ಕಿ ಬೆಳೆದು ಜಕೊಬಿ ಅದನ್ನು ಭಟ್ಟರಿಗೆ ನೀಡಿ ಕೈಮುಗಿದು ನಿಂತ. ಭಟ್ಟರು ಒಳ್ಳೆದು ಆಗಲಿ ಎಂದು ಕೈ ಮುಗಿದರು ಹೊರತು ಎಷ್ಟು ಲಾಭವಾಯಿತು ಎಂದೇನೂ ಕೇಳಲಿಲ್ಲ ಜಕೊಬಿ ಇವರ ಒಳ್ಳೆಯತನ ನೋಡಿ ಆಶ್ಚರ್ಯ ಪಟ್ಟಿದ್ದ. ವರ್ಷಗಳು ಉರುಳಿದಂತೆ ಜಕೊಬಿಯ ಆರ್ಥಿಕ ಸ್ಥಿತಿ ಉತ್ತಮವಾಗುತ್ತ ಬಂತು ಅದನ್ನು ಕಂಡು ಭಟ್ಟರಿಗೆ ಎಲ್ಲಿ ನಷ್ಟವಾಗಿ ತಾವೇ ಕೈಯಾರೆ ವಂಚಿಸಿದ ಹಾಗೆ ಆದರೆ ಎಂದಿದ್ದ ಪುಟ್ಟ ಭಯ ನಿವಾರಣೆಯಾಗಿ ತುಸು ಸಮಾಧಾನವಾಗಿತ್ತು.
ಮಕ್ಕಳು ದೊಡ್ಡವರಾಗುತ್ತ ಇದ್ದರು ಹಿರಿ ಮಗ ಪಿಯುಸಿ ಪರೀಕ್ಷೆ ಬರಿಯುವುದರಲ್ಲಿದ್ದ ಉಳಿದವರು ಶಾಲೆಗೆ ಹೋಗುತ್ತಿದ್ದರು. ಮಕ್ಕಳ ಮದುವೆ ಮಾಡಿಸಿ ಆಸ್ತಿಯನ್ನು ಅವರಿಗೆ ಸಮನಾಗಿ ಹಂಚಿ ಅವರೆಲ್ಲ ಸಂತೋಷವಾಗಿ ಇರುವುದನ್ನು ಕಲ್ಪಿಸಿಕೊಂಡು ಪುಳಕಿತರಾಗುತ್ತಿದ್ದರು. ಹೀಗೆ ಶುಂಠಿ ಮನೆಯ ಶಂಭು ಭಟ್ಟರು ಬದುಕು ಹರಿಯುವ ನದಿಯಂತೆ ತನ್ನ ಹತ್ತಿರದವರಿಗು ಒಳಿತನ್ನು ಬಯಸಿ ತಾನು ಸುಖವಾಗಿ ಇರುವ ಪರಿಪಾಠ ಪಾಲಿಸಿತ್ತು.
ಅದೇ ವರ್ಷ ಬಂತು ಒಂದು ಹೊಸ ಭೂ ಕಾಯಿದೆ ಉಳುವವನೇ ಭೂಮಿಯ ಒಡೆಯ! ಅದಾಗಲೇ ಜನರೆಲ್ಲ ಸೇರಿ ಜಕೊಬಿಯ ತಲೆ ಹಾಳು ಮಾಡಿದ್ದರು, ಆ ಸಮಯಕ್ಕೆ ಅವನಿಗೂ ಅದೇ ಸರಿ ಕಂಡಿತು ಯಾವ ಶಂಭು ಭಟ್ಟರು ಕಿಂಚಿತ್ತೂ ಲೋಭದ ಯೋಚನೆ ಇಲ್ಲದೆ ಇವನಿಗೆ ಸಹಾಯ ಮಾಡಿದ್ದಾರೋ ಅವರಿಗೆ ಆತ ದ್ರೋಹ ಬಗೆದೇ ಬಿಟ್ಟ!!
ಶಂಭು ಭಟ್ಟರು ಬಹಳ ಹತಾಶೆಯಿಂದ ಉಳಿದ ಅಲ್ಪ ಸ್ವಲ್ಪ ಜಾಗವನ್ನು ಮಾರಿ ಬೇರೆ ಊರಿಗೆ ಹೋಗುವ ನಿರ್ಧಾರ ಮಾಡಿದರು.ಅದನ್ನು ಮಡದಿಗು ಹೇಳಿದರು. ಮಗನನ್ನು ಯಾವುದಾದರು ಅಂಗಡಿ ಕೆಲ್ಸಕ್ಕೆ ಹಾಕಿದರೆ ಆಯಿತು ಎಂದು ಯೋಚನೆ ಮಾಡಿದ್ದರು. ಲಕ್ಷ್ಮಮ್ಮ ತಕ್ಷಣ ತಮ್ಮನಾದ ರಾಮರಾಯರಿಗೇ ಪತ್ರ ಬರೆದರು. ಭಟ್ಟರು ಅಂಗಡಿಯಲ್ಲಿ ತಮ್ಮ ಮುಂದಿನ ನಿರ್ಧಾರವನ್ನು ಹೇಳಿದರು. ಈ ವಿಷಯವು ಮತ್ತಿಬ್ಬರ ಕಿವಿಗೂ ಬಿತ್ತು ಮರುದಿನವೇ ಜಾಗ ಕೊಳ್ಳಲು ಒಂದಿಬ್ಬರು ಬಂದರು ಭಟ್ಟರು ಕೂಡ ಹಣ ಕಾಸಿನ ವಿಚಾರವೆಲ್ಲ ಮಾತನಾಡಿ ಹೆಚ್ಚೇನೂ ಚರ್ಚಿಸದೆ ಹೇಳಿದಷ್ಟಕ್ಕೆ ಒಪ್ಪಿದರು. ಅಮ್ಮನವರು ಯಜಮಾನರ ನೋವನ್ನು ಅರಿತು ಸಂಕಟಪಟ್ಟರು. ಇನ್ನೆರಡು ದಿನದಲ್ಲಿ ಹಣ ಹೊಂದಿಸಿಕೊಂಡು ಬರುವುದಾಗಿ ಹೇಳಿ ಹೋಗಿದ್ದರು ಜಾಗ ಕೊಳ್ಳಲು ಬಂದವರು.
ಪತ್ರ ರಾಯರ ಕೈ ಸೇರಿತು. ತನ್ನ ಅಕ್ಕನ ಪರಿಸ್ಥಿಸಿ ನೋಡಿ ಕಂಗಳು ತುಂಬಿ ಬಂದಿತ್ತು ರಾಯರಿಗೆ, ರಾಯರ ಪತ್ನಿ ರಾಧಮ್ಮ ಕೂಡ ಅಷ್ಟೇ ಕೊರಗಿದರು. ನೀವು ಈಗಲೇ ಹೊರಡಿ ಎಂದು ಚೀಲ ತಯಾರು ಮಾಡಲು ಒಳ ಹೋದರು. ಪತ್ರ ಓದಿದ ಮರುಕ್ಷಣವೇ ಎಂಬಂತೆ ರಾಯರು ಹೊರಟರು. ದಾರಿಯುದ್ದಕ್ಕೂ ,ಅಂದು ತಾಯಿ ತೀರಿಹೋದಗ, ತಮ್ಮ ತಂದೆಯವರು ಎಲ್ಲರೂ ಸೇರಿ ಎಷ್ಟು ಒತ್ತಾಯ ಮಾಡಿದರು ಮರುಮದುವೆ ಆಗಲು ಒಪ್ಪದೆ ಅಷ್ಟು ಸಣ್ಣ ಪ್ರಾಯಕ್ಕೆ ಮನೆಯ ಒಳಗು ಹೊರಗು ದುಡಿಯುವ ನಿರ್ಧಾರ ಮಾಡಿದ್ದು, ತನ್ನ ಅಕ್ಕ ಲಕ್ಷ್ಮಮ್ಮ ಹೇಗೆ ತಮ್ಮನ್ನು ತಾಯಿಯಂತೆ ಪ್ರೀತಿಸಿದ್ದು, ತುತ್ತು ಅನ್ನ ನೀಡಿ ತಾಯಿಯ ಸ್ಥಾನ ತುಂಬಿದ್ದು ಎಲ್ಲವನ್ನೂ ನೆನಪಿಸಿಕೊಂಡರು. ಹೇಗಾದರೂ ಮಾಡಿ ಇವನ್ನೆಲ್ಲ ಸರಿ ಮಾಡಿಯೇ ಸಿದ್ಧ ಎಂದು ನಿರ್ಧರಿಸಿದರು.
ರಾಯರು ಮನೆ ತಲುಪಿದಾಗ ಶೋಕದ ವಾತಾವರಣ , ಯಾವ ಸದ್ದೂ ಇರದೇ ಬಣಗುಡುತ್ತಿದ್ದ ಕೋಣೆಗಳು. ಪರಮಾನ್ನದ ಪರಿಮಳ ದಾರಿಗೆ ಬರುತ್ತಿದ್ದರು ಅಲ್ಲಿ ಮಕ್ಕಳ ಕೂಗು, ಗದ್ದಲ ಇರಲಿಲ್ಲ.ಊಟದ ನಂತರ ಎಲ್ಲರೂ ಕೂತು ಮಾತನಾಡಿದರು. ಮರುದಿನ ಹಣ ಹೊಂದಿಸಿಕೊಂಡು ಬಂದ ಇಬ್ಬರನ್ನು ರಾಯರು ಮಾತನಾಡಿ ಕಳುಹಿಸಿದರು. ಕೈ ಕೈ ಹಿಸುಕಿಕೊಂಡು ರಾಯರಿಗೆ "ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ " ಈ ಮನುಷ್ಯನಿಂದ ಅಂದುಕೊಂಡು ಹೋದರು. ಅದಲ್ಲದೆ ಹಿರಿ ಮಗನನ್ನು ಯಾವುದೇ ಕಾರಣಕ್ಕೂ ಕೆಲಸಕ್ಕೆ ಸೇರಿಸದೆ ಮುಂದೆ ಓದಿಸಬೇಕು ಎಂಬ ನಿರ್ಧಾರವಾಯಿತು ಆದರೆ ಅದಾಗಲೇ ಪದವಿ ಪ್ರಾರಂಭವಾಗುದರಲ್ಲಿತ್ತು ಇನ್ನೂ ಸೇರಲು ಸಾಧ್ಯ ಇರಲಿಲ್ಲ, ರಾಯರು ಹರಸಾಹಸ ಮಾಡಿ ತಮ್ಮ ಅಳಿಯನನ್ನು ಪದವಿಗೆ ಸೇರಿಸಿಯೇ ಬಿಟ್ಟರು!
ಇತ್ತ ಜಕೊಬಿಗೆ ಪಾಪ ಪ್ರಜ್ಞೆ ಕಾಡುತ್ತಲೇ ಇತ್ತು. ಯಾವ ಶಂಭು ಭಟ್ಟರು ತನ್ನ ಉದ್ಧಾರಕ್ಕೆ ಕಾರಣರಾದರೋ ಅವರೇ ಊರು ಬಿಟ್ಟು ಹೋಗುವ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದ ಕೊರಗು ಅವನನ್ನು ಕಾಡುತ್ತಲೇ ಇತ್ತು. ಅದೇ ವರ್ಷ ಗುಣವಾಗದ ಜ್ವರ ಬಂದು ಜಕೊಬಿ ಅಸುನೀಗಿದ. ಇದಾಗಿ ವರ್ಷಗಳು ಕಳೆಯಿತು ಅವನ ಮಗ ಯಾವುದೋ ಕಳ್ಳತನದ ಶಿಕ್ಷೆಗೆ ಹೆದರಿ ಕಸಿಕೊಂಡಿದ್ದ ತೋಟದ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಸತ್ತ! ಅಷ್ಟು ಮಾತ್ರವಲ್ಲದೆ ಜಕೊಬಿಯ ತಲೆ ಹಾಳು ಮಾಡಿದ್ದ ಸಿದ್ದಪ್ಪ ಸಂಪೂರ್ಣ ನಷ್ಟಕ್ಕೆ ಒಳಗಾಗಿ ಅವನ ಸಂತಾನದ ಹೇಳ ಹೆಸರಿಲ್ಲದಂತೆ ಆಗಿ ಹೋಗಿತ್ತು. ಕಾಕತಾಳೀಯವೋ, ದೇವರು ಕೊಟ್ಟ ಶಿಕ್ಷೆಯೋ,ಅದು ಅವರವರ ಭಾವಕ್ಕೆ ಬಿಟ್ಟದ್ದು. ಆದರೆ ಜನರು ಮಾತ್ರ ದೇವರಂತಹ ಭಟ್ಟರಿಗೆ ದ್ರೋಹ ಬಗೆದು ಹೀಗೆ ಆಯಿತು ಎಂದು ಮಾತನಾಡಿಕೊಂಡರು.
ಇದೆಲ್ಲಾ ನಡೆದು ಭಟ್ಟರು ತುಸು ಸುಧಾರಿಸಿಕೊಂಡು ಮತ್ತೆ ಬದುಕು ಪುನಾರಾರಂಭವಾಯಿತು. ಹಿರಿಮಗ ಪದವಿ ಮುಗಿಸಿ, ರಾಜಪಟ್ನದಲ್ಲೇ ಪದವಿ ಪಡೆದ ಅದೂ ಕೂಡ ಪ್ರಥಮ ದರ್ಜೆಯಲ್ಲಿ ಪದವಿ ಪಡೆದ ಮೊದಲಿಗನಾಗಿ ಸರಕಾರಿ ಶಾಲೆ ಒಂದರಲ್ಲಿ ಕೆಲಸಕ್ಕೆ ಸೇರಿದ. ತನ್ನ ತಮ್ಮಂದಿರು ಪದವಿ ಪಡೆಯಬೇಕು ಎಂಬ ಆಸೆ ಅವನಲ್ಲಿ ಇದ್ದಿತು.ಒಬ್ಬ ತಮ್ಮ ಸಂಪೂರ್ಣ ಮನೆ ಹಾಗೂ ತೋಟದ ಅಭಿವೃದ್ಧಿಗೆ ನಿಂತರೆ , ತಂಗಿ ಅಮ್ಮನ ನೆರವಿಗೆ ಮತ್ತೊಬ್ಬ ತಮ್ಮ ಪಿಯುಸಿ ಮುಗಿಸಿದ್ದ. ಭಟ್ಟರು ಇವನನ್ನು ಯಾವುದಾದರು ಬಟ್ಟೆ ಅಂಗಡಿಗೆ ಸೇರಿಸಲು ಹೊರಟರು ಆದರೆ ಹಿರಿಮಗ ಬಿಡಲಿಲ್ಲ ಅವನು ಪದವಿ ಪಡೆಯಲೇ ಬೇಕೆಂದು ಅದರ ಸಂಪೂರ್ಣ ಖರ್ಚು ತನ್ನದೆಂದು ಹೇಳಿದ. ಸರಿ ಪದವಿಯು ಮುಗಿಯಿತು ಅಷ್ಟೊತ್ತಿಗಾಗಲೇ ಮಾವ ರಾಮರಾಯರು ಇವನಿಗೆ ಲಾರಿ ಆಫೀಸಿನಲ್ಲಿ ಕೆಲಸ ಮಾಡಿ ಕೊಟ್ಟರು. ಇಷ್ಟು ವರುಷ ಇಲ್ಲಿ ಇದ್ದು ಪರ ಊರಿಗೆ ಹೋಗಲು ಮನಸ್ಸೇ ಇಲ್ಲದೆ ಅದನ್ನು ಹೇಳಲು ಆಗದೆ ಪತ್ರ ಒಂದನ್ನು ಬರೆದು ಅಣ್ಣನ ಮೇಜಿನ ಮೇಲಿಟ್ಟ. ತನಗೆ ಸ್ವಂತ ಅಂಗಡಿ ಇಡುವ ಇಂಗಿತವನ್ನು ವ್ಯಕ್ತಪಡಿಸಿದ್ದ. ಅದನ್ನು ಓದಿದ ಅಣ್ಣ ಉತ್ತರ ಹೀಗೆ ಬರೆದ " ಇದೊಂದು ಸಲ ಹೋಗಿ ಬಾ , ಒಂದೇ ಒಂದು ತಿಂಗಳು ಮತ್ತೆ ನಿನಗೆ ಇಷ್ಟವಾಗದ್ದರೆ ನೀನು ಹಿಂದೆ ಬಾ"
ಲಾರಿ ಆಫೀಸಿಗೆ ಸೇರಿ ಮಾವನ ಮನೆಯಿಂದಲೇ ಹೋಗುತ್ತಿದ್ದ ಅದಾಗಿ ಬೇರೊಂದು ಊರಿಗೆ ವರ್ಗವಾಯಿತು. ಹೀಗೆ ಮತ್ತೆರೆಡು ಊರು ಕಡೆಯದಾಗಿ ಕಡೂರ. ಒಂದೊಂದು ಊರು ಕೊಟ್ಟ ಅನುಭವ ಅಭೂತಪೂರ್ವ. ಕಡೆಗೆ ಕಡೂರಿನಲ್ಲಿ ಇರುವಾಗ ತನ್ನ ಸ್ನೇಹಿತರು ಸರ್ಕಾರಿ ಕೆಲಸದ ಪರೀಕ್ಷೆಗೆ ತಯಾರಿ ಕೊಟ್ಟರು. ಆತ್ಮವಿಶ್ವಾಸ ತುಂಬಿಸಿದರು. ಪರೀಕ್ಷೆ ತೇರ್ಗಡೆ ಆಯಿತು. ಅಣ್ಣ ಅಂದು ತೆಗೆದುಕೊಂಡ ನಿರ್ಧಾರ ಇಂದು ಒಳ್ಳೆಯ ಕೆಲಸ -ಮಾನಸಿಕ ನೆಮ್ಮದಿ ಕೊಟ್ಟಿದೆ. ಇತ್ತ ಮತ್ತೊಬ್ಬ ಅಣ್ಣ ಹಗಲಿರುಳು ಎನ್ನದೆ ತೋಟಕ್ಕೆ ದುಡಿದು, ಗುಡ್ಡೆಯನ್ನು ಹುಬ್ಬೇರಿಸಿ ನೋಡುವ ಕಾಫಿ ತೋಟವಾಗಿ ಪರಿವರ್ತಿಸಿದ್ದ.ಅಣ್ಣಂದಿರ ಋಣದ ಭಾರ ಹೇಗಾದರೂ ಮಾಡಿ ಕಮ್ಮಿ ಮಾಡಿಕೊಳ್ಳುವ ನಿರ್ಧಾರ ಮಾಡಿಕೊಂಡು ಹುಟ್ಟೂರಿಗೆ ವರ್ಗ ಮಾಡಿಕೊಂಡು ಕುಟುಂಬ ಸೇರಿಕೊಂಡ. ಅಷ್ಟೊತ್ತಿಗಾಗೇ ಅಣ್ಣನಿಗು ಸರಕಾರಿ ಕೆಲಸ ಸಿಕ್ಕಿ, ತಂಗಿಗೆ ಮದುವೆ ಆಗಿ, ಮತ್ತೊಬ್ಬ ಅಣ್ಣ ತೋಟವ ಮೇಲೆ ತಂದು ಬದುಕು ಮತ್ತೊಮ್ಮೆ ಪ್ರಶಾಂತ ನದಿಯಲ್ಲಿ ತೇಲುತ್ತಿತ್ತು. ನಡೆದ ಕಹಿ ಘಟನೆಗಳನ್ನು ಮರೆತು ಹೊಸ ಅಧ್ಯಾಯ ಬರೆಯಿತು.
ಇದಾಗಿ ಅದೆಷ್ಟೋ ದಶಕಗಳು ಕಳೆಯಿತು ಅಣ್ಣ ತಮ್ಮಂದಿರು ಅಕ್ಕ ಪಕ್ಕದಲ್ಲಿ ಮನೆ ಮಾಡಿಕೊಂಡು ಆಗೊಮ್ಮೆ ಈಗೊಮ್ಮೆ ಬರುವ ತಮ್ಮ ಮಕ್ಕಳ ಮೊಮ್ಮಕ್ಕಳೊಂದಿಗೆ ಅಮೃತ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಒಂದು ದಿನ ಪುಳ್ಳಿ ದೊಡ್ಡಜ್ಜನ ಕಾರನ್ನು ಅವರ ಸ್ನೇಹಿತರು ತೆಗೆದುಕೊಂಡು ಹೋದದ್ದನ್ನು ನೋಡಿ ತನ್ನ ಕಾರೆ ಹೋಯಿತೆಂದು ಬೊಬ್ಬೆ ಹಾಕಿದನ್ನು ನೋಡಿ ಈ ಪುಟ್ಟ ಕಂದಮ್ಮ ತನ್ನ ಅಜ್ಜ , ದೊಡ್ಡಜ್ಜ ಎಲ್ಲರೂ ತನ್ನ ಸ್ವಂತ ಎಂದು ಭಾವಿಸಿದ್ದು ಇಬ್ಬರಿಗೂ ಅದೆಷ್ಟು ಕುಶಿ ನೀಡಿತ್ತೆಂದರೆ ಗತಿಸಿದ ಎಲ್ಲ ಸುಂದರ ಕ್ಷಣಗಳನ್ನು ಮತ್ತೊಮ್ಮೆ ಮೆಲುಕು ಹಾಕಿ ಹೇಗೆ ಅಕ್ಕ ತಾಯಿಯಾದಗ ಸೋದರ ಮಾವ ದೇವರಾದ ಎಂಬುದನ್ನು ಕೂತು ಮಾತನಾಡಿ. ಗತಿಸಿದ ತಮ್ಮ ಸೋದರ ಮಾವನ ಸಹಾಯವನ್ನು ಮನಸಾ ಸ್ಮರಿಸಿದರು.
Comments
Post a Comment