ಆಶಯ
ದಿನವೂ ಬಸ್ಸಿಂದ ಇಳಿದು, ರಸ್ತೆ ದಾಟುವಾಗ
ಕಣ್ಣುಗಳನ್ನು ಸಣ್ಣ ಮಾಡಿ, ದಯವಿಟ್ಟು ನಿಧಾನಿಸಿ ಎಂಬಂತೆ ಮುಖವನಿಟ್ಟು
ವೇಗವಾಗಿ ಹೋಗುವ ವಾಹನಗಳನ್ನು ನಿಲ್ಲುವಂತೆ ಮಾಡುವ ಪುಟ್ಟ ಪ್ರಯತ್ನ ಇವಳದು.
ಒಂದು ವೇಳೆ ನಿಲ್ಲಿಸಿದರೆ, ಅವರ ದಿನಚರಿ ಅದ್ಭುತವಾಗಿರಲ ಎಂದು ಮನಸಾ
ಪ್ರಾರ್ಥಿಸುವಳು .ಹೀಗೆ ಮಾಡಿದಾಗ ನಿಲ್ಲಿಸುತ್ತಿದ್ದ ವಾಹನಗಳು ಕೆಲವೇ ಕೆಲವು ಮಾತ್ರ. ರಸ್ತೆಯ
ಇನ್ನೊಂದು ಕಡೆ ಇರುವ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಈಕೆ. ವಾಹನ ಚಲಾಯಿಸುತ್ತಿರುವ ಯಾರೇ
ಇವಳನ್ನು ನೋಡುವ ವ್ಯವಧಾನ ತೋರಿದ್ದರೆ, ಶಾಲೆಗೆ ಹೋಗುವ ಮಗುವೇನೋ
ಅಂದುಕೊಳ್ಳುವಂತಹ ಮುಗ್ಧ ಮುಖ ಇವಳದು.ಹೀಗೆ ಒಂದು ದಿನ ವಾಹನ ನಿಲ್ಲಿಸಿದ ಇವನಿಗೆ ಇವಳ ಮುಗ್ಧತೆ
ತುಂಬಾ ಇಷ್ಟವಾಗಿತ್ತು. ಅಷ್ಟೇ ಅಲ್ಲದೆ ಆ ದಿನ ಅವನು ಕನಸಿನಲ್ಲಿಯೂ ಯೋಚಿಸಲು ಅಸಾಧ್ಯವಾದ
ಒಂದೊಳ್ಳೆ ಬೆಳವಣಿಗೆ ಅವನ ವ್ಯವಹಾರದಲ್ಲಿ ಆಗಿತ್ತು.ಅಂದಿನಿಂದ ಪ್ರತಿನಿತ್ಯ ಆಕೆ ರಸ್ತೆ ದಾಟುವ
ಸಮಯಕ್ಕೆ ಸರಿಯಾಗಿ ಅಲ್ಲಿ ತಲುಪುತ್ತಿದ್ದ. ಒಂದು ವೇಳೆ ಬೇಗ ತಲುಪಿದರು ಆಕೆಯ ಬರುವಿಕೆಗೆ
ಕಾಯುತ್ತಿದ್ದ. ಆಕೆಯ ಮುಗ್ಧ ಮುಖ ಅವನಲ್ಲಿ ಸಮಾಧಾನ ತರುತ್ತಿತ್ತು. ಆಕೆ ತುಂಬು ಮನಸ್ಸಿನಿಂದ
ಒಳ್ಳೆಯದು ಆಗಲೆಂದು ಹಾರೈಸಿದಂತೆ ಅನಿಸುತ್ತಿತ್ತು ಕೂಡ. ಅವಳಿಗೂ ಅದೆಷ್ಟು ರೂಢಿ ಆಗಿತ್ತು
ಅಂದರೆ ಈಗೆಲ್ಲ ಮುಖವನ್ನು ಸಣ್ಣ ಮಾಡಿ ಸೀದ ರಸ್ತೆ ದಾಟಿ ಹೋಗುವಳ,ಕಿರು
ನಗುವೊಂದನ್ನು ಬೀರುತ್ತಾ.
ಅಂದು ಇವನು ಕೆಲಸ ಮುಗಿಸಿ ಹೋಗುತ್ತಿದ್ದಾಗ
ಇವಳನ್ನು ಹುಡುಗನೊಬ್ಬನೊಂದಿಗೆ ಇರುವುದನ್ನು ನೋಡಿದನು, ಸ್ವಲ್ಪ
ಕಸಿವಿಸಿಯಾಯಿತು. ಒಮ್ಮೆಯೂ ಮುಖತಃ ಭೇಟಿಯಾಗದ ಇವಳ ಬಗ್ಗೆ ಗೊತ್ತಿಲ್ಲದೆ ಏನನ್ನು
ಕಲ್ಪಿಸಿಕೊಳ್ಳುವುದು ತಪ್ಪೆಂದ ತನಗೆ ತಾನೇ ಹೇಳಿಕೊಂಡು ಮನೆಗೆ ಹೋದ. ಎಲ್ಲ ಕೆಲಸ ಮುಗಿಯಿತು,
ಮಲಗಿಕೊಂಡ ಆದರೂ ಒಮ್ಮೆ, ಸಂಜೆ ಅವಳನ್ನು ನೋಡಿದ್ದು,
ಮತ್ತೆ ಮತ್ತೆ ಕಾಡಿತ್ತು. "ಈಗೆಲ್ಲಾ ಹುಡುಗೀರು ಭಾರಿ ಸರ್ ..."
ಎಂದು ಬಣ್ಣ ಬಣ್ಣದ ಕಥೆ ಹೇಳುತ್ತಿದ್ದ ಚಾಯ ಹುಡುಗನ ಮಾತು ನೆನೆಪಿಗೆ ಬಂತು. ಅಂತೂ ಇಂತೂ ನಿದ್ದೆ
ಮಾಡಿದ. ಬೆಳಗ್ಗೆ ಮತ್ತದೇ ಯೋಚನೆ ಕಾಡಿತ್ತು, ಸಣ್ಣ ವಿಷಯಕ್ಕೆ ಜಗಳ
ಮಾಡಿಕೊಂಡು ಹೊರಟ. ಇಂದು ಆತ ವಾಹನ ನಿಲ್ಲಿಸಲಿಲ್ಲ ಆಕೆಯ ನಗು ಕಾಣಲಿಲ್ಲ.
ಆಸ್ಪತ್ರೆಗೆ
ಬಂದ ಅಣ್ಣ ಇವನೊಂದಿಗೆ ಮಾತನಾಡಿದ. ತಪ್ಪು ತಂಗಿಯದ್ದೆ ಎಂದು ಅಲ್ಲಿದ್ದವರು ಹೇಳಿದ್ದರಿಂದ
ಆಸ್ಪತ್ರಗೆ ಸೇರಿಸಿದಕ್ಕೆ ಧನ್ಯವಾದ ತಿಳಿಸಿದ. ಆಕೆ ಚೇತರಿಸಿಕೊಳ್ಳಲು ಒಂದು ವಾರವೇ ಬೇಕಾಯಿತು.
ಇವನು ಮಾತನಾಡಿಸಿದಾಗ ಆಕೆ ಕೇಳಿದಳು " ತಪ್ಪು ನನ್ನದು ನಿಜ, ನೀವು
ನನ್ನಲ್ಲಿ ವಿಶ್ವಾಸ ಹುಟ್ಟಿಸಿ ನಂತರ ಅದನ್ನು ಮುರಿದದ್ದೆ ಇದಕ್ಕೆ ಕಾರಣ ಅನ್ಸಲ್ವ?"
ಆತ ಏನು ಮಾತನಾಡಲಿಲ್ಲ. ಹೇಗೆ ತಾನೇ ಹೇಳಿಯಾನು ಹಿಂದಿನ ದಿನ ಆಕೆಯ
ಅಣ್ಣನೊಂದಿಗೆ ಕಂಡದ್ದು ಇದಕ್ಕೆ ಕಾರಣ ಎಂದು?!ಅವರ ವಿವಾಹ ವಾರ್ಷಿಕೋತ್ಸವದಂದು ಇದನ್ನೆಲ್ಲ ನೆನಪಿಸಿಕೊಂಡು ನಗುವುದು ಆ ದಿನದ ಒಂದು
ಕಾರ್ಯಕ್ರಮವಾಗಿತ್ತು.
ಅಪಘಾತ ಅವಳ ಕಾಲುಗಳನ್ನು ತೆಗೆದುಕೊಂಡಿತ್ತು
.ಇವನಿಗೆ ಕೈಯ್ಯಾರೆ ಅವಳ ಆಸೆಗಳನ್ನು ಚೂರು ಮಾಡಿದ ಎಂಬ ಪಾಪಪ್ರಜ್ಞೆಯಿಂದ ಹೊರಬರಲು ಆಗದೆ
ನರಳುತ್ತಿದ್ದ. ಅದರಿಂದ ಹೊರ ಬರಲು ಇದ್ದ ಒಂದೇ ದಾರಿ ಅಂದರೆ ಅವಳ ಕಾಲುಗಳನ್ನು (ಕನಸುಗಳನ್ನು?) ಅವಳಿಗೆ
ಮರಳಿ ಸಿಗುವಂತೆ ಮಾಡುವುದು. ಹಗಲು ರಾತ್ರಿ ಅದೊಂದೇ ಯೋಚನೆ , ಕಡೆಗೂ
ಸತತ ಪ್ರಯತ್ನದಿಂದ ಆಕೆ ನಡೆಯುವಂತೆ ಮಾಡಿದ. ಇದೀಗ ಕನಸುಗಳನ್ನು ಕಳೆದುಕೊಂಡ ಅನೇಕರಿಗೆ
ಮಾರ್ಗದರ್ಶಿಯಾಗಿ ನಿಂತಿದ್ದಾನೆ. ಅವನ ಮಾತಿನಲ್ಲಿರುವ ಶಕ್ತಿ ಯಾರನ್ನು ಬಡಿದೆಬ್ಬಿಸುವಂತದ್ದು,
ಅದರಲ್ಲೂ ಈ ಸಾಲುಗಳು," ಯಾರಲ್ಲಿಯೂ ನೀವಾಗಿಯೇ
ಮೂಡಿಸಿದ ಪ್ರೀತಿ, ವಿಶ್ವಾಸ , ಸ್ನೇಹವನ್ನು
ಮುರಿದು ಮಾನವ ಸಂಬಂಧಗಳಲ್ಲಿ ಆ ವ್ಯಕ್ತಿ/ಪ್ರಾಣಿ ಸಂಪೂರ್ಣ ನಂಬಿಕೆ ಕಳೆದುಕೊಳ್ಳುವಂತೆ ಮಾಡದಿರಿ
, ಮಾಡಿದರೆ ಅದು ಘೋರ ಪಾಪವೇ ಸರಿ"ಅವನು ಹೇಳಿಯೇ ಹೇಳುತ್ತಿದ್ದ.
ಪ್ರಾಯಶಃ ಈ ಮೂಲಕ ತಾನು ಮಾಡಿದ ತಪ್ಪು ಮತ್ಯಾರು ಮಾಡದಿರಲಿ ಎಂಬ ಆಶಯ ಅವನಲ್ಲಿ ಇದ್ದಿರಬಹುದು.
ಅಪಘಾತದಿಂದಾಗಿ ಅವಳಿಗೆ ಮಕ್ಕಳ ಯೋಗ
ಇರಲಿಲ್ಲ. ಆದರೆ ಆ ನೋವು ಅವಳನ್ನು ಕಾಡಿದಾಗಲೆಲ್ಲ ತನ್ನ ತಲೆ ಸವರಿ "ನಮಗೆ ಮಕ್ಕಳು
ಇಲ್ಲವೆಂಬ ನೋವು ನನ್ನನು ಯಾವತ್ತಿಗೂ ಕಾಡಲಿಲ್ಲ ಕಾರಣ ಆ ಕುಶಿಯನ್ನು ನಾನು ನಿನ್ನಲ್ಲಿ
ಕಾಣುತ್ತೇನೆ"ಎಂದು ಇವನು ಹೇಳುತ್ತಿದ್ದ
ಪ್ರೀತಿ ತುಂಬಿದ ಮಾತುಗಳು ಅವಳಿಗೆ ನೆಮ್ಮದಿ ಕೊಡುತ್ತಿತ್ತು.
ಅಪಘಾತದಲ್ಲಿ
ಅವಳು ಕಾಲುಗಳನ್ನು ಕಳೆದುಕೊಂಡಳು ಆದರೆ ಮಾನವ ಸಂಬಂಧದಲ್ಲಿನ ನಂಬಿಕೆಗಳನ್ನು
ಕಳೆದುಕೊಳ್ಳದಂತೆ ಇವನು ತೋರಿದ ಕಾಳಜಿ , ಅವನ ಆಶಯ ಇಂದು ಅವಳ
ಕಾಲುಗಳನ್ನು ( ಕನಸುಗಳನ್ನು!) ಅವಳಿಗೆ ಮರಳಿಸುವುದರೊಂದಿಗೆ
ಸಾವಿರಾರು ಮನಸ್ಸುಗಳನ್ನೂ ಹಸನಾಗಿಸಿದೆ.
Comments
Post a Comment