ಭ್ರಮನಿರಸನ
ವಿಶ್ವವಿದ್ಯಾನಲಯದ ಎದುರು ಇದ್ದ ಬಸ್ ನಿಲ್ದಾಣದಲ್ಲಿ ನಿಂತು ಸಮಯ ನೋಡಿಕೊಂಡಳು 4:30 ಕಳೆದಿತ್ತು. ಮರುದಿನ ಅವಳ ಗೆಳತಿಯ ಅಣ್ಣನ ಮದುವೆ, ಇವಳು ದಿನ ಮುಂಚಿತವಾಗಿ ಬರಲೇಬೇಕೆಂದು ಅವಳ ಗೆಳತಿ ಅದಾಗಲೇ ಒತ್ತಾಯ ಮಾಡಿದ್ದಳು.ಇವರಿಬ್ಬರೂ ಒಂದೇ ಕೋಣೆಯಲ್ಲಿ 3 ವರ್ಷದಿಂದ ಜೊತೆಯಲ್ಲೇ ಇದ್ದವರು. ಹಿಂದಿನ ದಿನವಷ್ಟೇ ಮದುವೆಗೆ ತೆಗೆದುಕೊಂಡು ಹೋಗಲಿರುವ ಒಳ್ಳೆಯ ಬಟ್ಟೆ, ಬಳೆ, ಬೊಟ್ಟು, ಹಣದ ಸಂಚಿ ಎಲ್ಲವನ್ನೂ ತಯಾರು ಮಾಡಿ ಇಟ್ಟಿದ್ದಳು. ಹೇಗೂ ಸಣ್ಣ ಪುಟ್ಟ ಖರೀದಿಗೆ ಗೆಳತಿಯ ಅಪ್ಪ ಅಮ್ಮ ಕಾರಿನಲ್ಲಿ ಬರುವವರಿದ್ದರು ಹಾಗಾಗಿ ಒತ್ತಾಯ ಮಾಡಿ ಈಕೆಯ ಕೈಚೀಲವನ್ನು ತೆಗೆದುಕೊಂಡು ಮತ್ತೆರಡು ದಿನದಲ್ಲಿ ಕಾಣುವ ಬಗ್ಗೆ ಮಾತನಾಡಿ ಗೆಳತಿ ಹೊರಟಿದ್ದಳು.
ಇದೆಲ್ಲ ಯೋಚನೆ ಮಾಡುತ್ತಿರುವಾಗ ಬಸ್ ಬಂದಿತು. ಬಸ್ ಹತ್ತಿ ಕೂತಳು, ,ಕ್ಷಣ ಮಾತ್ರದಲ್ಲಿ ಬಸ್ ತುಂಬಿ ಹೋಗಿತ್ತು.ಮುಂದಿನ 3-4 ಸ್ಟಾಪಿನಲ್ಲಿ ಇಳಿಯುವವರ ಟಿಕೆಟ್ ಹಣ ಪಡೆದು, ಬಸ್ ಸ್ವಲ್ಪ ಖಾಲಿಯಾದ ಮತ್ತೆ ಕುಳಿತವರ ಟಿಕೆಟ್ ಹಣಕ್ಕೆ ಕಂಡಕ್ಟರ್ ಬಂದಾಗ ತನ್ನ ಗೆಳತಿ ಮೊದಲೇ ಹೇಳಿದಂತೆ 15 ರೂಪಾಯಿ ಕೊಟ್ಟು ಕಾಲೇಜಿನ ಗುರುತಿನ ಚೀಟಿ ತೋರಿಸಿದಳು, ಅವನು ಏನು ಮಾತನಾಡದೇ ಮುಂದೆ ಹೋದ. ನಾಳಿನ ಮದುವೆ , ಅಲ್ಲಿ ತನ್ನ ಗೆಳತಿ ಹಾಗೂ ತಾನು ಮಾಡಲಿರುವ ತಲೆಹರಟೆ ಕೆಲಸಗಳು, ಅಣ್ಣನನ್ನು ಹೇಗೆಲ್ಲಾ ಕಾಡಬೇಕು ಎಂದು ಹಾಕಿದ ಯೋಜನೆಗಳು ಹೀಗೆ ನೂರೆಂಟು ಯೋಚನೆ ಇವಳಿಗೆ.ಅರ್ಧ ಮುಕ್ಕಾಲು ಗಂಟೆ ಕಳೆಯಿತು, ಹತ್ತಿರ ಕೂತ ಹುಡುಗಿ ಹತ್ತಿರ ತನ್ನ ಸ್ಟಾಪ್ ಗೆ ಇನ್ನು ಎಷ್ಟು ಹೊತ್ತು ಬೇಕೆಂದು ಕೇಳಿದಾಗ ಬಂದ ಉತ್ತರ ಕೇಳಿ ಅವಳಿಗೆ ಭ್ರಮನಿರಸನವಾಗಿತ್ತು. ಅವಳು ತಪ್ಪಿ ಬೇರೊಂದು ಬಸ್ ಹತ್ತಿದ್ದಳು!ಅದಾಗಲೇ 6 ಗಂಟೆ ಕಳೆದಿತ್ತು. ಅವಳ ಮುಖ ನೋಡಿ ಆ ಹುಡುಗಿ "ಅಯ್ಯೋ ನೀವು ಈಗ್ಲೇ ಇಲ್ಕೊಳ್ಳಿ, ಇಲ್ಲಿ ಅರ್ಧ ಮುಕ್ಕಾಲು ಗಂಟೆಗೆ ಒಂದು ಬಸ್ ಬರೋದು , ಕತ್ತಲೆ ಆಗ್ತಾ ಬಂತು ಬೇರೆ!" ಅಂದಾಗ ಅರ್ಧ ಜೀವ ಹೋಯಿತು ಇವಳಿಗೆ. ಪುಸ್ತಕದ ಚೀಲದಲ್ಲಿ ತದಕಾಡಿದಳು ದುಡ್ಡಿದ ಸಣ್ಣ ಸಂಚಿ ಗೆಳತಿ ತೆಗೆದುಕೊಂಡು ಹೋದ ಕೈಚೀಲದಲ್ಲಿತ್ತು!! ಪಾಪ ಆ ಹುಡುಗಿ ಮೂವತ್ತು ರೂಪಾಯಿ ಕೊಟ್ಟು ಸಮಾಧಾನ ಹೇಳಿ ಇವಳನ್ನು ಇಳಿಸಿದಳು.
ಅದಾಗಲೇ ಗಾಬರಿ ಆಗಿತ್ತು. ಐದು ನಿಮಿಷವಾಯಿತು ಯಾವ ಬಸ್ ಬರಲಿಲ್ಲ. ಸಣ್ಣ ಭಯವೊಂದು ಮನೆ ಮಾಡಿತು, ಅಷ್ಟರಲ್ಲಿ ಬಸ್ ಬಂತು. ಹತ್ತಿ ಕೂತಳು, ಬದುಕಿದೆಯಾ ಬಡ ಜೀವ ಎಂದೆನಿಸದೆ ಇರಲಿಲ್ಲ. ಸರಿ ಅವಳ ಸ್ಟಾಪ್ ಬಂದಿತು.ನಿಲ್ದಾಣದಿಂದ ಮಣ್ಣು ದಾರಿಯಲ್ಲಿ ಸುಮಾರು ನಾಲ್ಕು ಮೈಲಿ ಹೋದರೆ ಅವಳ ಗೆಳತಿಯ ಮನೆಯಾಗಿತ್ತು. ಇಳಿದು ಗೆಳತಿಗೆ ಹೇಳಿದಂತೆ ಅವಳಿಗೆ ಕರೆ ಮಾಡಲು ಫೋನ್ ತೆಗೆದರೆ ಅದು ಸ್ವಿಚ್ ಆಫ್ ಆಗಿತ್ತು.ಪವರ್ ಬ್ಯಾಂಕ್? ಅದೂ ಕೂಡ ಅವಳ ಕೈಚೀಲದಲ್ಲೆ ಇತ್ತು!! ಕೈಯಲ್ಲಿ ಹಣ ಬೇರೆ ಇಲ್ಲ, ಇದ್ದದ್ದು ಬರೆ ಹತ್ತು ರೂಪಾಯಿ ಇನ್ನೇನು ಮಾಡುವುದು?! 7:30ಯ ಕತ್ತಲು ಸುತ್ತಲೂ ಆವರಿಸಿದೆ. ಬರೀ ಅಲ್ಲೊಂದು ಇಲ್ಲೊಂದು ಇದ್ದ ಅಂಗಡಿಯ ಬೆಳಕು ಮಾತ್ರ ಇತ್ತು , ಬೇರೆ ದಾರಿ ಏನು ಇರಲಿಲ್ಲ ಹಾಗಾಗಿ ಹಿಂದೊಮ್ಮೆ ಹೋದ ದಾರಿಯನ್ನು ನೆನಪಿಸಿಕೊಂಡು ರಿಕ್ಷಾ ಹತ್ತಿದಳು. ಒಂದು ಮೈಲಿ ಕಳೆದ ಮತ್ತೆ ರಿಕ್ಷಾ ಚಾಲಕ ಕೇಳಿದ"ಮೇಡಂ ಇಲ್ಲಿ ಎಡನೋ ಬಲನೋ ?!" ಆ ಕತ್ತಲೆಯಲ್ಲಿ ಏನು ಗೊತ್ತಾಗಲಿಲ್ಲ ಅವಳಿಗೆ ಆದರೆ ಅದು ಅವನಿಗೆ ತಿಳಿಯಬಾರದೆಂದು ಬಲಗಡೆ ಅಂದಳು. ಚಾಲಕ ಎಂದ "ನಾನು ಹೊಸ್ಬ ಮೇಡಂ,ಎಲ್ಲಾ ದಾರಿನೂ ಒಂದೇ ರೀತಿ ಕಾಣ್ತವೆ, ಯಾವುದಕ್ಕೂ ಆ ಮನೆಯವರಿಗೆ ಒಮ್ಮೆ ಕರೆ ಮಾಡಿ ಕೇಳಿ"! ಅವಳು ತನ್ನ ಫೋನ್ ಸ್ವಿಚ್ ಆಫ್ ಆಗಿದೆ ಅಂದಳು. ಹೇಳಿದ ಮತ್ತೆ ಯಾಕಾದರೂ ಹೇಳಿದೆ ಅನಿಸಿತ್ತು ಅವಳಿಗೆ! 4 ಮೈಲಿ ಆದರೂ ಗೆಳತಿಯ ಮನೆ ಸಿಗುತ್ತಿಲ್ಲ. ರಿಕ್ಷಾ ಒಂದು ದೊಡ್ಡ ಬರೆಯ ಮುಂದೆ ನಿಂತಿತು. ಸುತ್ತ ಒಂದು ಮನೆಯೂ ಇರಲಿಲ್ಲ, ಬರಿಯ ಕಗ್ಗತ್ತಲು ಜೊತೆಗೆ ನಾಯಿಗಳು ಗೂಳಿಡುವ ಸದ್ದು!ರಿಕ್ಷಾ ಆಫ್ ಆಯಿತು. ಇವಳ ಹೃದಯದ ಬಡಿತ ಜೋರಾಯಿತು. ಕೈ ಕಾಲುಗಳು ಕಂಪಿಸಿದವು. ಮನದಲ್ಲಿ ಅದಾಗಲೇ ಅವಳು ಸತ್ತಿದ್ದಳು. ಒಮ್ಮೆ ಅಪ್ಪ ,ಅಮ್ಮ, ಅಣ್ಣ ಕಣ್ಣ ಮುಂದೆ ಬಂದರು. ಮೈ ಮುದ್ದೆ ಮಾಡಿ ಕೂತಳು.ರಿಕ್ಷಾ ಪುನಃ ಚಾಲೂ ಆಯಿತು. "ನಿನ್ನೆ ಅಷ್ಟೆ ರೆಪೇರಿ ಮಾಡ್ಸಿದ್ದು , ಈ ಮಣ್ಣು ದಾರೀಲಿ ಹೋದ್ರೆ ಮತ್ತೇನೂ ಆಗುತ್ತೆ " ಎಂದು ಗೋಣಗಿಕೊಂಡು" ," ಅಲ್ಲಿ ಎಡಗಡೆ ಹೋಗಬೇಕಿತ್ತು ನೋಡಿ", ಅಂದಾಗ ಮರುಜನ್ಮವೇ ಬಂದ ಹಾಗೆ ಆಗಿತ್ತು ಅವಳಿಗೆ. ಹಂಗೂ ಹಿಂಗೂ ಗೆಳತಿಯ ಮನೆಯ ಕಾಣಲಾರಂಭಿಸಿತು. ಗೆಳತಿ ತನ್ನ ಫೋನ್ ಹಿಡಿದುಕೊಂಡು ಅದಾಗಲೇ ಒಂದು ಫರ್ಲಾಂಗ್ ಮುಂದೆ ನಿಂತು ಚಡಪಡಿಸುತ್ತಿದ್ದದ್ದನ್ನು ಕಂಡೊಡನೆ ತುಸು ಧೈರ್ಯ ಬಂತು ಇವಳಿಗೆ. ರಿಕ್ಷಾ ಚಾಲಕ " ಮೇಡಂ ಇಷ್ಟು ಕತ್ತಲೆ ಆದ ಮತ್ತೆ ಒಬ್ರೆ ಹೋಗೋದು ಅಷ್ಟು ಸುರಕ್ಷಿತ ಅಲ್ಲ" ಎಂದು ಹೇಳಿ ಗಾಡಿ ನಿಲ್ಲಿಸಿದ.
ಇದೆಲ್ಲಾ ನಡೆದು ಎಷ್ಟೋ ವರ್ಷಗಳೇ ಕಳೆಯಿತು. ಒಂದು ದಿನ ವಾರ್ತಾ ಪತ್ರಿಕೆ ಓದುತ್ತಿರುವಾಗ ಈ ಆಟೋ ಚಾಲಕನ ಭಾವಚಿತ್ರ ಕಂಡಿತು, ಮಾದಕ ವಸ್ತುಗಳ ಕಳ್ಳಸಾಗಣೆ ಮಾಡಿ ಪೊಲೀಸರ ಅತಿಥಿ ಆದ ಬಗ್ಗೆ ಅದರಲ್ಲಿ ಬರೆದಿತ್ತು. ಮೊದಮೊದಲು ಒಳ್ಳೆವನಂತೆ ನಟಿಸಿ ಮತ್ತೆ ಸಂಚು ಹೂಡುವ ವಂಚಕ ಎಂದೆಲ್ಲ ಇತ್ತು. ಅವಳಿಗೆ ಭ್ರಮನಿರಸನವಾಯಿತು,ಮುಂದಿನ ವಾರ ಗೆಳತಿ ಮನೆಗೆ ಬರುವುದಾಗಿ ಹೇಳಿದ್ದಳು ಆಗ ಇದರ ಬಗ್ಗೆ ಕೇಳಲೇ ಬೇಕೆಂದು ಅಂದುಕೊಂಡು ಸುಮ್ಮನಾದಳು.
ಗೆಳತಿಯೊಂದಿಗೆ ಬೇರೆಲ್ಲ ವಿಷಯ ಮಾತನಾಡುತ್ತಾ ಈ ವಿಷಯವನ್ನು ಕೇಳಿದಳು ಅದಕ್ಕೆ ಅವಳ ಗೆಳತಿ " ಹೇಗೆ ಒಬ್ಬ ಆಟೋ ಚಾಲಕ ತನ್ನ ಪ್ರಾಮಾಣಿಕತೆಯಿಂದ ದೊಡ್ಡ ಟಾಕ್ಸಿ ಮಾಲೀಕ ಅದಾನು ಅನ್ನೋದಕ್ಕೆ ಇವನೇ ಉದಾಹರಣೆ. ಇನ್ನೂ ಶ್ರೀಮಂತಿಕೆ ಜೊತೆ ದುರಾಸೆ ಅನ್ನೋ ಭೂತ ಯಾರನ್ನ ಬಿಡುತ್ತೆ ಹೇಳು? ಅದನ್ನ ಮೀರಿ ನಿಲ್ಲುವವರು ಒಬ್ಬರೋ ಇಬ್ಬರೋ ಅದರಲ್ಲಿ ಇವನು ಒಬ್ಬ. ಅದಕ್ಕೆ,ಇವನ ಮೇಲಿನ ಹೊಟ್ಟೆ ಕಿಚ್ಚಿಗೆ ಸಿಕ್ಕಿಸಿ ಹಾಕಿದ್ರು. ಪಾಪ ಮಾದಕ ವಸ್ತು ಬಿಡು ಒಂದು ಬೀಡಿನು ಸೇದಿದವನಲ್ಲ. ಮಾದಕ ವಸ್ತು, ಅದನ್ನು ಸೇವಿಸುವವರಿಗೆ ಮಾತ್ರ ಹಾನಿ ಮಾಡಿದ್ರೆ ಈ ಹೊಟ್ಟೆಕಿಚ್ಚು ಇನ್ನೊಬ್ರ ಬದುಕನ್ನೇ ಹಾಳು ಮಾಡುತ್ತೆ. ಮಜ ಏನಂದ್ರೆ ಹೀಗೆ ಸಿಕ್ಕಿಸಿ ಹಾಕಿದ್ದು ಒಬ್ಬ ಪೆಟ್ಟಿ ಪೋಲಿಸ್, ಅವನಿಗೆ ಪಾಪ ಗೊತ್ತಿಲ್ಲ ಹೊಸದಾಗಿ ಬಂದ ಮೇಲಿನ ಅಧಿಕಾರಿ ಇವನ ಆತ್ಮೀಯ ಅಂತ. ಈಗ ಆ ಪೆಟ್ಟಿ ಪೋಲಿಸ್ ಸಲಾಂ ಹೊಡಿತಾನೆ ಅಂತೆ ಭಯದಲ್ಲಿ ,ಅಪ್ಪ ಮೊನ್ನೆ ಅವನ ಕಾರಿನಲ್ಲಿ ಹೋದವಾಗ ನೋಡಿದ್ರಂತೆ! ಸಾಕು ಕತೆ ಹೊಟ್ಟೆ ತಾಳ ಹಾಕ್ತಾ ಇದೆ" ಎಂದು ಅವಳ ಭುಜವನ್ನು ಹಿಡಿದು ಅಡುಗೆ ಮನೆಗೆ ನೂಕಿದಳು.ಹೊಟ್ಟೆ ತುಂಬಾ ಊಟಾ ಆಯಿತು ಬಾಯಿ ತುಂಬ ಮಾತು ಆಯಿತು ಇನ್ನು ಕಣ್ಣು ತುಂಬಾ ನಿದ್ದೆ ಮಾಡು ಎನ್ನುತ್ತಾ ಗೆಳತಿಯರು ನಿದ್ರಾ ದೇವತೆಗೆ ಶರಣಾದರು!
ಮರುದಿನ ಇದೇ ಆಟೋ ಚಾಲಕನ ಯಶೋಗಾಥೆಯನ್ನು ಬಣ್ಣಿಸಿ ಅಂಕಣ ಒಂದು ಪ್ರಕಟವಾಗಿತ್ತು. ಇಬ್ಬರು ಕೂತು ಬಿಸಿ ಬಿಸಿ ಚಾಯಾದೊಂದಿಗೆ ಬಿಸಿ ಬಿಸಿ ಸುದ್ದಿ ಓದಿದರು!
Comments
Post a Comment