ಈ ಕಿಡಕಿಯಲ್ಲಿ ಕೂತು ನಾವಿಬ್ಬರು ಅದೆಷ್ಟು ನಕ್ಕಿದ್ದೆವೊ, ಕೆಳಗೆ ಬಿದ್ದಿದ್ದೇನೇ ಕೂಡ. ಹಾಗೆ ಬಿದ್ದಾಗ ಆಕೆ ಗಾಬರಿಯಿಂದ ಕೈ ಹಿಡಿದು ಮೇಲೆತ್ತಿದ್ದಾಳೆ, ಅಲ್ಲೇ ಪೆಟ್ಟು ಕೊಟ್ಟು ನಕ್ಕಿದ್ದಾಳೆ, ತಾನೂ ಕೆಳಗೆ ಬಂದು ಮುಖವನ್ನೆ ನೋಡಿದ್ದಾಳೆ ಅವಳೊಂದಿಗಿನ ನೆನಪುಗಳು ಅವಳಷ್ಟೇ ಸುಂದರ.
ನಾನು ನನ್ನ ಉನ್ನತ ಶಿಕ್ಷಣಕ್ಕಾಗಿ ಮನೆ ಬಿಟ್ಟಿದ್ದೆ. ಸ್ನೇಹಿತರ ಸಹಾಯದಿಂದ ಕಾಲೇಜಿಗೆ ಹತ್ತಿರವಾಗುವ ಹಾಗು ನನಗೆ ಸರಿ ಹೊಂದುವ ಈ ಮನೆಯನ್ನು ಸೇರಿಕೊಂಡೆ. ಆ ಮನೆಯ ಮೇಲೆ ಇದ್ದ ಕೋಣೆಯನ್ನು ನನಗೆ ಕೊಟ್ಟಿದ್ದರು. ಅದು ಹಳೆಕಾಲದ ದೊಡ್ಡ ಮನೆ,ಬಹಳ ಚಂದವಾಗಿ ಇಟ್ಟಿದ್ದರು.ನಾನು ಆದಷ್ಟು ಮನೆಯ ಒಡತಿ ಆದ ಯಶೋದಮ್ಮನವರನ್ನು ಮಾತನಾಡಿಸಲು ಹೋಗುತ್ತಿರಲಿಲ್ಲ, ನನ್ನ ಮನೆಯ ಕಥೆ, ಅಥವಾ ಆಸ್ತಿ ಪಾಸ್ಥಿಯ ಬಗೆಗಿನ ಪ್ರಶ್ನೆಗಳಿಗೆ ಉತ್ತರ ಕೊಡುವ ವ್ಯವಧಾನ ನನಗೆ ಇರಬೇಕಲ್ಲ!ಆಶ್ಚರ್ಯವೆಂದರೆ ಅವರು ಕೂಡ ನನ್ನ ತಂಟೆಗೆ ಬರುತ್ತಿರಲಿಲ್ಲ.
ಅದೊಂದು ದಿನ ಕಾಲೇಜ್ ಬೇಗ ಮುಗಿದಿತ್ತು , ಸೀದ ಮನೆಗೆ ಬಂದು ತುಸು ಹೊತ್ತು ಮಲಗೋಣ ಅನ್ನಿಸಿತು.ಮಲಗಿದರೆ ಸರಿಯಾಗಿ ನಿದ್ರೆ ಬರಲಿಲ್ಲ, ಇಲ್ಲ ಸಲ್ಲದ ಯೋಚನೆಗಳು ಒಂದೊಂದಾಗಿ ಹಾಜಾರಾತಿ ಹಾಕುತ್ತಿದ್ದವು. ಎದ್ದು ಹೊರಗೆ ಬಂದೆ, ಕೆಲ ಸರಕಾರಿ ಶಾಲಾ ಮಕ್ಕಳು ಬರುತ್ತಿರುವುದನ್ನು ಕಂಡೆ, ಕೆಲ ಸಣ್ಣವು ಮತ್ತೆ ಕೆಲ ದೊಡ್ಡವು, ಏನೆಂದು ನೋಡ ಹೋದೆ.ಆ ಮಕ್ಕಳೆಲ್ಲ ಮನೆಯ ಇನ್ನೊಂದು ಭಾಗದ ಕಡೆಗೆ ಹೋಗುತ್ತಿದ್ದರು. ನಾನು ತುಸು ಹೊತ್ತು ಬಿಟ್ಟು ಹೋದೆ.ಯಶೋದಮ್ಮ ಆ ಮಕ್ಕಳಿಗೆ ಪಾಠ ಮಾಡುತ್ತಿದ್ದರು, ಯಾವ ಪಬ್ಲಿಕ್ ಶಾಲೆಗೂ ಕಮ್ಮಿ ಇರಲಿಲ್ಲ! ಅಲ್ಲೇ ಮರದ ಮರೆಯಲ್ಲಿ ನಿಂತು ನೋಡಿದೆ.
ಮರುದಿನ ಎಂದಿನಂತೆ ಕಾಲೇಜಿಗೆ ಹೋಗುವಾಗ ಮಂಜಣ್ಣ ಸಿಕ್ಕಿದ, ಆತ ನಾನಿರುವ ಮನೆಗೆ ಕೆಲಸಕ್ಕೆ ಬರುತ್ತಾನೆ, ಅವನಿಗೆ ಹೇಗೂ ಅದೇ ದಾರಿಯಲ್ಲಿ ಹೋಗಬೇಕಿತ್ತು, ಹಾಗಾಗಿ ಅವನನ್ನು ನನ್ನ ಬೈಕಿನಲ್ಲಿ ಕೂರಿಸಿಕೊಂಡೆ. ಅವನನ್ನು ಕರೆದುಕೊಂಡು ಹೋದದರಲ್ಲಿ ನನ್ನ ಸ್ವಾರ್ಥವು ಇತ್ತು. ಯಶೋದಮ್ಮ ಅವನಂತಹ ಅನೇಕ ಬಡವರ ಮಕ್ಕಳ ಶಿಕ್ಷಣ ಹಾಗೂ ಆಹಾರಕ್ಕಾಗಿ ಶಿಕ್ಷಣ ಪ್ರಾಯೋಜಕರ ನೆರವು ಪಡೆದುಕೊಂಡು ಹಗಲಿರುಳು ಶ್ರಮಿಸುತ್ತಿದ್ದಾರೆ ,ತಮ್ಮ ಬದುಕನ್ನೇ ಮೀಸಲು ಇಟ್ಟಿದ್ದಾರೆ , ಹಾಗು ಅದನ್ನು ಎಲ್ಲಿಯೂ ಪ್ರದರ್ಶಿಸದೆ ತಮ್ಮಷ್ಟಕ್ಕೇ ಇರುವ ಮೇರು ವ್ಯಕ್ತಿತ್ವ ಎಂದು ಮಂಜಣ್ಣನ ಮಾತಿನಿಂದ ತಿಳಿದುಕೊಂಡೆ.
ಅಂದಿನಿಂದ ಅವರನ್ನು ಕಾಣಲು ಹವಣಿಸುತ್ತಿದೆ ಮತ್ತು ಕಂಡಾಗ ಮುಗುಳು ನಗುತ್ತಿದ್ದೆ.ಇಷ್ಟು ದಿನ ಮಾತನಾಡದೇ ಮಾತನಾಡಲು ಮುಜುಗರವಾಗುತ್ತಿತ್ತು. ಅಂದು ತುಸು ಶೀತ ಇತ್ತು ,ಗುಳಿಗೆ ನುಂಗುವವನಲ್ಲ ಹಾಗಾಗಿ ಅವರಲ್ಲಿ ಹೋಗಿ ತುಳಸಿ,ಶುಂಠಿ ಕೇಳೋಣ ಅಂದುಕೊಂಡೆ "ಕಳ್ಳನಿಗೊಂದು ಕುಂಟ ನೆಪ" ಅನ್ನುವ ಹಾಗೆ.ಬಾಗಿಲು ತೆರೆದೆ ಇತ್ತು. ಒಮ್ಮೆ ಬಾಗಿಲು ತಟ್ಟಿದೆ , ಅವರು ಹೊರಗೆ ಬಂದರು.ಸುಮಾರು ಮೂವತ್ತರ ಆಸುಪಾಸು, ಹಸನ್ಮುಖದ ಯಶೋದಮ್ಮ "ಹೇಳು ಮಗು" ಅಂದಾಗ ಮೊದಲೇ ಅಭ್ಯಾಸ ಮಾಡಿದಂತೆ ಬಡಬಡಾಯಿಸಿದೆ. ಆಕೆ ತಕ್ಷಣ ಒಳಗೆ ಬಾ ಎಂದು ಹೇಳಿ ತನ್ನ ಸ್ವಂತ ಮಗುವೇ ಎಂಬಂತೆ ತೋರಿದ ಕಾಳಜಿಯನ್ನು ಇನ್ನೂ ಕೂಡ ಜೋಪಾನವಾಗಿ ಇಟ್ಟು ನೆನಪಿಸಿಕೊಳ್ಳುತ್ತೇನೆ.
ಇಲ್ಲಿಂದ ಶುರುವಾದದ್ದು ನನ್ನ ಇವರ ಸ್ನೇಹ, ಅಂದಿನಿಂದ ನಾನು ಕೂಡ ದಿನದಲ್ಲಿ ಒಂದು ಗಂಟೆ ಮಕ್ಕಳಿಗೆ ಪಾಠ ಮಾಡುತ್ತಿದ್ದೆ, ಅವರೊಂದಿಗೆ ಅಡುಗೆಗೆ ಸೇರುತ್ತಿದ್ದೆ. ಕೋಣೆಯಲ್ಲಿ ಗಂಜಿ ಬೇಯಿಸುವುದೂ ನಿಂತಿತು!
ತುಸು ನಾಚಿಕೆ ಸ್ವಭಾವದವನಾದ ನನಗೆ ಒಂದಿಬ್ಬರು ಒಳ್ಳೆಯ ಸ್ನೇಹಿತರು ಇದ್ದರು.ಅವರೊಂದಿಗೆ ಆಗೊಮ್ಮೆ ಈಗೊಮ್ಮೆ ತಿರುಗುತ್ತಿದ್ದೆ.ಆದರೆ ನನಗೆ ಈಕೆಯೊಂದಿಗೆ ಇರುತ್ತಿದ್ದ ಪ್ರತಿ ಕ್ಷಣವೂ ನಾನು ಸಂಪೂರ್ಣವಾಗಿ ಬದುಕಿದ್ದೇನೆ ಅನ್ನಿಸುತ್ತಿತ್ತು. ನನಗೆ ಆಗಲಿ ,ಅಲ್ಲಿ ಬರುತ್ತಿದ್ದ ಬಡ ಮಕ್ಕಳೇ ಆಗಲಿ ಯಾರಿಗೆ ಹುಷಾರು ತಪ್ಪಿದರೂ ಆಕೆಯ ಕಂಗಳು ತುಂಬುತ್ತಿದ್ದವು, ಅವರೊಂದಿಗೆ ಆಡುವಾಗ ಮಕ್ಕಳಾಗಿ ಇರುತ್ತಿದ್ದರು,ಕೋಪ ಮಾಡಿಕೊಂಡಾಗ ಅವರ ಮುದ್ದು ಮುಖ ನೋಡಲು ಮತ್ತಷ್ಟು ಚಂದ.ಆಕೆ ಕೆಲವೊಮ್ಮೆ ತಾಯಿ,ಕೆಲವೊಮ್ಮೆ ಸಖಿ!ನನ್ನ ತಾಯಿ ಒಂದು ದಿನವೂ ಈ ಪ್ರೀತಿ ಕೂಡಲೇ ಇಲ್ಲವಲ್ಲ ಅನ್ನಿಸಿದಾಗ ಗಟ್ಟಿಯಾಗಿ ಒಮ್ಮೆ ಅತ್ತದ್ದು ಉಂಟು!
ಆಕೆಯೊಂದಿಗೆ ದಿನ ಕಳೆದಂತೆ ಹೆಚ್ಚೆಚ್ಚು ಆಕರ್ಷಿತನಾಗುತ್ತಿದ್ದೆ.ಆಕೆಯಿಂದ ನಾನು ಒಬ್ಬ ವ್ಯಕ್ತಿ ಯಾವ ಅಪೇಕ್ಷೆ ಇಲ್ಲದೆ ಉತ್ಕೃಷ್ಠವಾಗಿ ಪ್ರೀತಿಸುವುದು ಸಾಧ್ಯವಿದೆ ಅನ್ನುವುದು ತಿಳಿದದ್ದು. ನನ್ನ ಅಮ್ಮ ಒಂದು ದಿನವೂ ನನ್ನನ್ನು ಹೀಗೆ ಮಾತನಾಡಿಸಲಿಲ್ಲ, ಅವಳೊಂದಿಗೆ ನನಗೆ ಯಾವ ಸುಂದರ ನೆನಪುಗಳಿಲ್ಲ , ಆಕೆ ಒಳ್ಳೆ ತಾಯಿ,ಒಳ್ಳೆ ಹೆಂಡತಿ, ಒಳ್ಳೆ ಸೊಸೆಯು ಯಾವುದು ಆದವಳಲ್ಲ. ಆಕೆಯ ಸಣ್ಣತನ ,ವಿಕೃತ ಮನೋಭಾವ, ತೋರಿಕೆಯ ಪ್ರೀತಿ, ನಾಟಕ ಇವೆಲ್ಲ ನನ್ನನ್ನು ಮಾನಸಿಕವಾಗಿ ಕುಗ್ಗಿಸಿತ್ತು! ನನ್ನ ತಂದೆಯ ಕಾರಣಕ್ಕಾಗಿ ಮಾತ್ರ ಮನೆಗೆ ಹೋಗುತ್ತಿದ್ದೆ,ಮರಳಿ ಬಂದ ಮತ್ತೆ ಯಾರ ಹತ್ತಿರವೂ ಹೇಳಲಾಗದೆ ಒಂದೆರಡು ದಿನ ಮಂಕಾಗಿಯೇ ಇರುತ್ತಿದ್ದೆ. ಎಲ್ಲವನ್ನೂ ತೊರೆದು ಬದುಕುವುದೇ ಒಳಿತು ಎಂದು ಮನಸು ಹೇಳುತ್ತಿತ್ತು. ಈಕೆಯನ್ನು ಭೇಟಿಯಾದ ಮತ್ತೆ ಹೊಸದೊಂದು ಭರವಸೆ ಮೂಡಿತ್ತು.
ಆಕೆ ನನಗೆ ಚಾ, ಕಾಪಿ ಮಾಡುವುದನ್ನು ಮಾತ್ರವಲ್ಲ ಪ್ರೀತಿಯಿಂದ ಅದನ್ನು ಕೊಡುವುದನ್ನು,ಅಲ್ಲಿಗೆ ಬರುತ್ತಿದ್ದ ಮಕ್ಕಳ ಆಟ ಪಾಠ ,ನಗುತ ನೋವ ಮರೆಯುವ ಕಲೆ,ಅಷ್ಟೇ ಯಾಕೆ ಕಸೂತಿ, ರಂಗೋಲಿ, ಹೂ ಕಟ್ಟುವುದನ್ನು ಕಲಿಸಿದ್ದಾಳೆ.ನಾನು ಆಕೆಯ ಹುಟ್ಟು ಹಬ್ಬಕ್ಕೆ ನಾನೇ ಕಟ್ಟಿದ ಹೂವಿನ ಮಾಲೆಯನ್ನು , ಆಕೆ ಬೆಳಗ್ಗೆ ಎದ್ದ ಹಾಗೆ ತುಸು ಹೊತ್ತು ಕೂರುವ ಮಾವಿನ ಮರದಡಿ ಇರುವ ಸಣ್ಣ ಮೇಜಿನ ಮೇಲೆ ಇಟ್ಟಿದ್ದೆ.ಸಂಜೆ ಬಂದು ಆಕೆಯ ನೋಡುವ ತವಕ, ಆಕೆ ಪ್ರತಿನಿತ್ಯ ಇರುತ್ತಿದ್ದಲ್ಲಿ ಇರಲಿಲ್ಲ. ನಾನು ಹುಡುಕಲಿ ಎಂದು ಅಡಗಿ ಕೂರುತ್ತಿದ್ದದ್ದು ನನಗೆ ಹೊಸತೇನೂ ಆಗಿರಲಿಲ್ಲ, ಆದರೆ ಈ ಬಾರಿ ಗೆದ್ದಿದ್ದೇ, ಅದು ಹೊಸತು ! ಆಕೆಯ ಮುಖದಲ್ಲಿ ಇದ್ದ ನಗು!! ಇಂದಿಗೂ ಹಾಗೆ ಇದೆ ನನ್ನ ಕಣ್ಣಲ್ಲಿ. ನಾನು ಕಟ್ಟಿದ ಮಲ್ಲಿಗೆ ಮಾಲೆಯಿಂದ ಬಿದ್ದ ಹೂಗಳು ನನಗೆ ನೆರವು ನೀಡಿದ್ದವು.ಆಕೆ ನಡೆದ ಹಾದಿಯಲ್ಲಿ ಮಲ್ಲಿಗೆ ಹೂಗಳು ಅರಳಿದ್ದವು.
ಬದುಕನ್ನು ಇನ್ನಷ್ಟು ಪ್ರೀತಿಸಲು, ಜೀವನದಲ್ಲಿ ಕಳೆದ ಅಮೃತ ಕ್ಷಣಗಳನ್ನು ಮತ್ತೊಮ್ಮೆ ಬದುಕಲು,ಮುಂಬರಲಿರುವ ದಿನಗಳಿಗೆ ಭರವಸೆ ತುಂಬಿಸಿಕೊಳ್ಳಲು ಆಶಿಸುವವರು "ಮಡಿಲು" ಗೆ ಬರುತ್ತಿದ್ದರು. ಮಡಿಲ ಮಗುವಾಗುವ ಅವಕಾಶ ಮಾಡಿಕೊಟ್ಟ ಕೃಷ್ಣ ರಾಯರು ತಮ್ಮ ಅನುಭವವನ್ನು ಪ್ರತಿಬಾರಿಯೂ ಹಂಚಿಕೊಳ್ಳುತ್ತಿದ್ದರು.
ಇಷ್ಟು ಹೇಳಿ ಸುಮ್ಮನೆ ಆದಾಗ ಅವನ ಕಂಗಳು ಮಾತ್ರವಲ್ಲ ಅಲ್ಲಿ ಇದ್ದ ಪ್ರತಿಯೊಬ್ಬರ ಕಂಗಳು ತುಂಬಿದ್ದವು. ಅಲ್ಲಿ ಇದ್ದ ಒಬ್ಬ ಹುಡುಗ ಹೇಳಿದ "ಅಂದು ಮಂಜಣ್ಣನ ಮಗ ಮಲ್ಲಿಗೆ ಮೊಗ್ಗುನ್ನು ತಂದಿರಲಿಲ್ಲವೆಂದು ಕೋಪ ಕೂಡ ಬಂದಿತ್ತು ನಿಮಗೆ". ಆಶ್ಚರ್ಯ ತುಂಬಿದ ಕಂಗಳಿ ಅವನನ್ನು ರಾಯರು ನೋಡಿದರು "ಕೆಯೆಟಿ(KAT),ಕ್ಯಾಟ್(Cat) ಅಲ್ಲ ಅಣ್ಣ !" ಎಂದಾಗ ಕಳಚಿದ್ದ ಕೊಂಡಿಯೊಂದು ಮತ್ತೆ ಬೆಸೆದುಕೊಂಡಿತ್ತು!!
Comments
Post a Comment