ಲೋಕೊ ಭಿನ್ನ ರುಚಿಃ.

 

ಎಂದಿನಂತಯೇ ಆಫೀಸ್ ಕೆಲಸ ಮುಗಿಸಿ, ಮನೆಗೆ ಬಂದು ಬಾಗಿಲು ತೆಗೆದಾಗ, ಆಕೆಯ ಕೈಚೀಲ ಸೋಫಾದ ಮೇಲೆ ಇತ್ತು, ಆಕೆ ಸೋಫಾದ ಕೆಳ ಕೂತಿದ್ದಳು.ಇಂದು ಯಾವ ವಿಷಯ ಇರಬಹುದು ಎಂದು ಮನಸಿನಲ್ಲಿ ಯೋಚಿಸುತ್ತ,ಆಕೆಯ ಹತ್ತಿರ ಹೋಗಿ ಇವನು ಕೂತನು.ಮಂಕಾದ ಕಣ್ಣುಗಳು, ಇನ್ನೇನು ಕಣ್ಣಿನಿಂದ ಮುತ್ತು ಉದುರುವುದು ಒಂದೇ ಬಾಕಿ ಇದ್ದ ಹಾಗೆ ಇತ್ತು.

ಆಕೆ ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ, ಹೇಗೆ ಕೇವಲ ಹೆಸರಿಗಾಗಿ, ಬಡ್ತಿಗಾಗಿ, ಅಧಿಕಾರಕ್ಕಾಗಿ ತನ್ನ ಸಹೋದ್ಯೋಗಿಗಳು ಕೆಲಸ ಮಾಡುತ್ತಿದ್ದದ್ದು, ತಾನು ಮಾಡಿದ ಕೆಲಸದ ಕೀರ್ತಿಯನ್ನು ಮತ್ಯಾರೋ ಪಡೆದುಕೊಂಡು, ಎಗ್ಗಿಲದೆ ಮೆರೆಯುತ್ತಿರುವ ರೀತಿ, ಸದಾ ಜೊತೆಯಲ್ಲೇ ಮಾತಾಡಿಕೊಂಡು, ಊಟ ಹಂಚಿಕೊಂಡು, ನಗುತ್ತಾ ಇರುವವರನ್ನು ಒಳ್ಳೆಯ ಸ್ನೇಹಿತರು ಎಂದು ಭಾವಿಸಿ ತಾನು ಅವರಲ್ಲಿ ತನ್ನ ನ್ಯೂನತೆಗಳನ್ನು ಹೇಳಿಕೊಂಡು ಆದ ಫಜೀತು ಎಲ್ಲವನ್ನೂ ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದಳು!!

ವಿಷಯ ಏನೆಂದು ಅದಾಗಲೇ ಅರ್ಥವಾಗಿತ್ತು ಇವನಿಗೆ, ಆತ ಮನೆಯ ಮುಂದೆಯೇ ಇದ್ದ ಉದ್ಯಾನವನಕ್ಕೆ ಕರೆದುಕೊಂಡು ಹೋದ,ಆಕೆ ಅದೇ ಚಪ್ಪೆ ಮುಖ ಮಾಡಿಕೊಂಡು ಕೂತಳು.

ಉದ್ಯಾನವನ ಇಷ್ಟು ಚಂದ ಏಕಿದೆ ಅಂದರೆ ಅಲ್ಲಿ ಕಾಟು ಗಿಡಗಳಿಗೆ ಅವಕಾಶವೇ ಕೊಡಲ್ಲ ಮಾಲಿ, ಅವುಗಳನ್ನು ಬೇರು ಸಮೀತ ಕಿತ್ತು ಹಾಕುವರು.ಒಂದಕ್ಕಿಂದ ಒಂದು ಚಂದದ ಗುಲಾಬಿ, ದಾಸವಾಳ, ಸಂಪಿಗೆ ಬಣ್ಣ ಬಣ್ಣವಾದ ಹೂಗಳು; ಅದಕ್ಕೆ ನಾವು ಕೂಡ ಇಲ್ಲಿಗೆ ಬಂದು ಕೂರುತ್ತೇವೆ. ಹಾಗೆ ನಿನ್ನ ಮನಸ್ಸು ಕೂಡ, ಅಲ್ಲಿ ನೀನು ಯಾರದ್ದೋ ವಿಕಾರತೆ, ಕೊಂಕು, ಮೋಸ ಈವನ್ನೆ ತುಂಬಿಕೊಂಡರೆ ಅದು ಎಂದೂ ಸಮಾಧಾನ ಕೊಡದು. ಹಾಗಂತ ಅವರಲ್ಲಿ ಮಾತನಾಡಬೇಡ ಎಂದಲ್ಲ ಆದರೆ ಅವುಗಳು ನಿನ್ನ ಚಂದದ ಮನಸನ್ನು ಹಾಳು ಮಾಡುತ್ತಿದೆ ಅಂತ ಗೊತ್ತಾದ ಕೂಡಲೇ ಅವುಗಳನ್ನು ಕಿತ್ತು ಹಾಕಬೇಕು,ಅದನ್ನೇ ಯೋಚಿಸಿ ಯೋಚಿಸಿ ಅದು ಬೇರೂರಿ ಮರವಾಗಲು ಬಿಟ್ಟರೆ ?! ಕೆಲವೊಮ್ಮೆ ನೀನು ಕೂಡ ಅವರಂತೆ ವರ್ತಿಸಬೇಕಾಗುತ್ತದೆ. ನೀನು ನಿನ್ನ ತನವನ್ನು ಬಿಡಬೇಕೆಂದಲ್ಲ, ಆದರೆ ನಿನ್ನ ಆದರ್ಶಗಳಿಗೆ ಇಲ್ಲಿ ಬೆಲೆ ಸಿಗಬೇಕು ಎಂದು ಬಯಸುವುದು ತಪ್ಪು ಅಷ್ಟೆ! ಇಲ್ಲ ನನ್ನ ರೀತಿಯೇ ಹೀಗೆ ಎಂದು ಇರಬಹುದು, ಹಾಗೆ ಇದ್ದರೆ ವೃತ್ತಿಪರ ಬೆಳವಣಿಗೆ ಕಷ್ಟ! ಹಾಗೆಂದು ಹೊಗಳು ಭಟ್ಟರಂತೆ ಇರಬೇಕಾಗಿಲ್ಲ! ಆರಕ್ಕೆ ಏರದೆ ಮೂರಕ್ಕೆ ಇಳಿಯದೆ ಮುಂದೆ ಹೋಗಬೇಕು. ಮೊದ ಮೊದಲು ಕಷ್ಟ ಆದರೆ ಸಮಯ ಎಲ್ಲವನ್ನೂ ಕಲಿಸುತ್ತದೆ. ಕಛೇರಿಯಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ಮನೆಗೆ ತಂದು ಮನಃ ಶಾಂತಿ ಹಾಳು ಮಾಡಿಕೊಳ್ಳಬೇಡ ಅದನ್ನು ಅಲ್ಲಿಯೇ ಬಿಟ್ಟು ಬಿಡಬೇಕು ಎಂದೆಲ್ಲ ಸಮಾಧಾನ ಹೇಳಿದ.
ಆಕೆ ಕೇಳಿದಳು ಏಕೆ ಅವರು ಹೀಗೆ ಮಾಡುವರು , ಒಂದು ರೀತಿಯ ಅನಾರೋಗ್ಯಕರವಾದ ಪೈಪೋಟಿ. ಆತ ಮತ್ತದೇ ಸ್ಮಿತವದನದಲ್ಲಿ ಮಾತು ಮುಂದುವರೆಸಿದ ಕೆಲವರಿಗೆ ತೋಟದಲ್ಲಿ  ಹರಿಯುವ ತೋಡಿನ ಶಬ್ಧ ಮನಸಿಗೆ ಹಾಯ್ ಅನ್ನಿಸಿದರೆ ಕೆಲವರಿಗೆ ನಾಲ್ಕು ಜನರಲ್ಲಿ ಒಳ್ಳೆಯ ಮಾತನಾಡುವುದರಲ್ಲಿ, ದೇವರಿಗೆ ಅಲಂಕಾರ ಮಾಡುವುದರಲ್ಲಿ, ಬೇರೆ ಬೇರೆ ತಾಣಗಳಿಗೆ ಹೋಗುವುದರಲ್ಲಿ, ಹೊಸತೊಂದು ರುಚಿ ಮಾಡುವುದರಲ್ಲಿ, ಆಸನಗಳನ್ನು ಕಲಿಯುದರಲ್ಲಿ, ಕಸೂತಿ, ಹೂವಿನ ಗಿಡಗಳನ್ನು ನೆಟ್ಟು ಪೋಷಿಸುವುದರಲ್ಲಿ, ಒಳ್ಳೆಯ ಪುಸ್ತಕ ಓದುವುದರಲ್ಲಿ ಹೀಗೆ ಮತ್ತೊಂದಿಷ್ಟು ಕೆಲವರಿಗೆ ಮತ್ತೊಬ್ಬರಿಗೆ ತೊಂದರೆ ಕೊಡುವುದು, ಬಡಾಯಿ ಕೊಚ್ಚಿಕೊಳ್ಳುವುದರಲ್ಲಿ, ಸಲ್ಲದ ಪ್ರಶ್ನೆಗಳನ್ನು ಕೇಳುವುದರಲ್ಲಿ ಅದು ಅವರವರ ಭಾವಕ್ಕೆ ತಕ್ಕಂತೆ. ಲೋಕೊ ಭಿನ್ನ ರುಚಿಃ ಅದನ್ನು ನಮ್ಮ ಮೂಗಿನ ನೇರಕ್ಕೆ ನೋಡುವುದು ಸರಿಯಲ್ಲ. ಬೇಕಾದನ್ನು ಮಾತ್ರ ತೆಗೆದುಕೊಂಡು ಬೇಡದನ್ನು ಅಲ್ಲಿಯೇ ಬಿಟ್ಟು ಮುಂದೆ ಹೋಗಬೇಕು.ಆಕೆ ನಿಟ್ಟುಸಿರು ಬಿಟ್ಟಳು,ಸಣ್ಣದೊಂದು ನಗು ಮೂಡಿತು.
ಅಂದು ಸಂಜೆ ಪೂರ್ಣಿಮೆಯ ಬೆಳಕಲ್ಲಿ ತುಸು ಹೊತ್ತು ಧ್ಯಾನ ಮಾಡಿ, ಮೌನವಾಗಿ ಕಳೆದ ಕೆಲವು ಗಂಟೆಗಳು ತಿಳಿಯದಂತೆ ಒಂದು ಹೊಸ ಆಯಾಮವನ್ನು , ಮನೋಬಲವನ್ನು  ನೀಡಿತ್ತು.ಆಕಾಶ ತುಂಬಾ ಮಿನುಗುವ ನಕ್ಷತ್ರಗಳು ಮನಸ್ಸು ಅತ್ಯಂತ ಸಂತೋಷದಿಂದ ತುಂಬಿಕೊಂಡಿತು.ಮತ್ತೊಂದು ಅಂತಸ್ತು ಮೇಲೆ ಕೋರೋಣ ಅನ್ನಿಸಿ ಅವನನ್ನು ಕರೆದುಕೊಂಡು ಹೋದಳು.ಜೋರಾಗಿ ಬೀಸುತ್ತಿದ್ದ ಗಾಳಿಯನ್ನು ಅನುಭವಿಸುತ್ತಾ  ಸುತ್ತ ನೋಡುತ್ತಾ ಕೂತರು ಕೆಲ ಚಾವಡಿಯಲ್ಲಿ ಬರಿ ಗೂಡಿನ ದೀಪ ತೂಗುತ್ತಿತ್ತು, ಮತ್ತೊಂದರಲ್ಲಿ ಪ್ರಪಂಚವನ್ನೇ ಮರೆತು ಕೇಕೆ ಹಾಕುತ್ತಿದ್ದ ಗದ್ದಲ, ಫೋನಿನಲ್ಲಿ ಆಡುತ್ತಿದ್ದ ಪಿಸುಮಾತುಗಳು, ಆರಾಮ ಕುರ್ಚಿಯಲ್ಲಿ ಕೂತುಕೊಂಡು ಆಲೋಚನಾ ಮಗ್ನರಾಗಿದ್ದ ಮುದಿ ಜೀವ ಹೀಗೆ ಅನೇಕ ದೃಶ್ಯಗಳು. ಆಕೆ ಅಂದಳು ಲೋಕೊ ಭಿನ್ನ ರುಚಿಃ.



Comments

Popular posts from this blog

Sarees and Secrets

Emotional Rollercoaster: Riding the Waves of Dysphoria and Euphoria

Error is Human?