ಬಿತ್ತಿದ್ದು
ಗಡಿಯಾರದ ಗೂಡಿನಿಂದ ಹೊರಬಂದ ಜೋಡಿಹಕ್ಕಿಗಳು ೧೨ ಬಾರಿ ಕೂಗಿ ಒಳ ಹೋದವು. ಹಾಸಿಗೆಯಲ್ಲಿ ಹೋಣಕುತ್ತ ಇದ್ದ ಚಾಮಿ, ಹೊದಕೆ ತೆಗೆದು ಕಣ್ಣು ಮುಚ್ಚಿ - ಹಲ್ಲು ಕಚ್ಚಿ, ಒಡೆದ ಪಾದಗಳನ್ನು ಕೆಳಗೆ ಇರಿಸಿ ನಿಟ್ಟುಸಿರು ಬಿಟ್ಟು ಅಡುಗೆ ಮನೆಗೆ ನಡೆದ. ಎಂದಿನಂತೆ ಚಾ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು, ಹಾಲು ಚಾ ಹುಡಿ ಹಾಕಿದ. ತನ್ನ ಕೊರಳು ನೋವಿಗೆ ಮೂಲಾಮೊಂದನ್ನು ಹಚ್ಚಿ, ಕೈ ತೊಳೆದು ಚಾ ಒಂದೆರಡು ಬಾರಿ ಮೇಲೆ ಕೆಳಗೆ ಸುರಿದ, ಶುಂಠಿ- ಏಲಕ್ಕಿ ಗುದ್ದಿ ಕುದಿಯುವ ಚಾಯಕ್ಕೆ ಬೆರೆಸಿ ಲೋಟಕ್ಕೆ ಹಾಕುವಷ್ಟರಲ್ಲಿ ಹಿಂದಿನಿಂದ " ನಂಗೂ ಒಂದು ಲೋಟ ಚಾ ಸಿಗ್ಬೋದ ಅಜ್ಜ ?!"
ಚಾಮಿ : ಗಂಟೆ ೧೨ , ನಿದ್ದೆ ಬರ್ತ ಇಲ್ವಾ ಮಗು ? ಇಷ್ಟು ಹೊತ್ತಿಗೆ ಚಾ ಒಳ್ಳೇದು ಅಲ್ಲ ಆದ್ರೂ ಇವತ್ತು ಒಂದು ದಿನ ಕುಡಿ ತೊಂದ್ರೆ ಇಲ್ಲ.
ಮೊಮ್ಮಗಳು : (ಜೋರಾಗಿ ನಕ್ಕು ) ನೀನು ಪ್ರತಿ ದಿನ ಕುಡಿತ್ಯ ? ಒಳ್ಳೇದು ಅಲ್ಲ ಅಂತ ಗೊತ್ತಿದ್ರೂ ?! ಯಾಕೆ ಅಜ್ಜ
ಚಾಮಿ : ಏನ್ ಮಾಡ್ಲಿ ಚಿಂತೆ , ರಾತ್ರಿ ನಿದ್ರೆ ಬರೋಲ್ಲ ಕಣೆ!
ಮೊಮ್ಮಗಳು : (ಮತ್ತೊಮ್ಮೆ ಜೋರಾಗಿ ನಕ್ಕು) ಚಿಂತೆ? ಏನು ಚಿಂತೆ? ಚಿಂತೆ ಇಲ್ಲದೆ ಇರೋದೆ ಚಿಂತೆ ನಿಂಗೆ !!
ಚಾಮಿ : ಹೌದು ಕಣೆ , ನಿಂಗೆ ಎಲ್ಲಿ ಅರ್ಥ ಆಗುತ್ತೆ ಹೇಳು ನನ್ನ ಕಷ್ಟ ?! ನಿಂಗೆ ಎಲ್ಲಾ ತಮಾಷೆ ಅಲ್ವಾ?
ಮೊಮ್ಮಗಳು : ಮತ್ತೇನು ಸುಮ್ನೆ ಮಲ್ಕೊಳೋದು ಬಿಟ್ಟು ಮಧ್ಯರಾತ್ರಿ ಚಾ ಕುಡಿಯೋದು ಯಾವ ಚಿಂತೆ ಪರಿಹಾರಕ್ಕೆ?! ಇರ್ಲಿ ಬಾ ಚಂದ್ರಮ ದಲ್ಲಿ ಕೂತು ಮಾತಾಡಣ.
ಚಾಮಿ : ಬೇಡ ಮಗು ಹೋಗಿ ಮಲಗು. ನಾನು ಮಲಗುವವನೆ.
ಎರಡು ಲೋಟಗಳನ್ನು ಹಿಡಿದುಕೊಂಡು ಸೀದ ಚಾಮಿಯ ಖಾಯಂ ಜಾಗದ ಕಡೆಗೆ ನಡೆದಳು. ಚಾಮಿಯು ಹಿಂದೆ ನಡೆದ.
ಚಾಮಿಗೆ ಇಬ್ಬರು ಮಕ್ಕಳು,ಹಿರಿಮಗಳು ಮಹತ್ವಾಕಾಂಕ್ಷಿ , ಮಹಿಳಾ ಲೋಕದಲ್ಲಿ ಅವಳ ಹೆಸರು ಚಿರಪರಿಚಿತ. ಅಳಿಯ ಸರಕಾರಿ ಅಧಿಕಾರಿ , ಬರುವ ಸಂಬಳದಲ್ಲಿ ಮನಸಿಗೆ ತೃಪ್ತಿ ಆಗುವಷ್ಟು ದಾನ ಮಾಡಿ, ಅದು ಎಲ್ಲಿಯೂ ಗೊತ್ತಾಗದ ಹಾಗೆ ನೋಡಿಕೊಳ್ಳುತ್ತಿದ್ದ. ಸರಳ ಜೀವನವನ್ನು ಪ್ರೀತಿಸುವಾತ. ಒಂದು ಕಡೆ ಇನ್ನೂ ಬೇಕು ಇನ್ನೂ ಬೇಕು ಅನ್ನುವ ಆಸೆ. ಮತ್ತೊಂದು ಕಡೆ ಕಳೆದುಕೊಂಡು ಕೃತಾರ್ಥ!
ಇನ್ನು ಮಗ, ಭಾವಜೀವಿ, ಅವಿವಾಹಿತ ಮತ್ತೆ ಹಾಗೆ ಇರಲು ನಿರ್ಧರಿಸಿದವ. ಅಕ್ಕನ ಜೀವನ ನೋಡಿ ತಾನು ಹೀಗೆ ಇರಲು ಬಯಸಿದಂತೆ ಕಾಣುತ್ತದೆ.
ಮಗಳ ಮಗಳು , ಏಕೈಕ ಮೊಮ್ಮಗಳು ತಾಯಿಯ ದಿಟ್ಟತನ, ತಂದೆಯ ಸೇವಾ ಮನೋಭಾವ, ಮಾವನ ಪ್ರೀತಿಸುವ ಗುಣ ಇವನೆಲ್ಲ ಕ್ರೂಡಿಸಿ ಆದ ಒಂದು ಅದ್ಭುತ ವ್ಯಕ್ತಿತ್ವ.
ಮೊಮ್ಮಗಳು : (ಚಾ ಹೀರುತ್ತಾ) ಅಜ್ಜ , ನೀನು ಆಪ್ಪ - ಅಮ್ಮನ ಚಿಂತೆ ಯಾಕೆ ಮಾಡ್ತ್ಯ ? ಜೊತೆಗಿಲ್ಲದೆ ಇದ್ರು ಅವ್ರು ಚನಾಗೆ ಇದ್ದಾರೆ ಅಜ್ಜ!! ನಿಂಗೊತ್ತ? ಅಮ್ಮ ಎಷ್ಟೇ ಕಾಲು ಕೆರ್ಕೊಂಡು ಬಂದ್ರು ಅಪ್ಪ ಒಂದು ಚೂರೂ ತಾಳ್ಮೆ ಕಳ್ಕೊಳದೆ ಯಾವುದೇ ಜಗಳ ನನ್ನ ಮುಂದೆ ಆಡದ ಹಾಗೆ ನೋಡ್ಕೋತಾರೆ. ಇನ್ನು ಅಮ್ಮ , ಅವಳ ಬೇರೆಲ್ಲಾ ಸ್ನೇಹಿತೆಯರ ಗಂಡಂದಿರ ಹಾಗೆ ಅಪ್ಪ ಇಲ್ಲದೇ ಇದ್ರು ಅಪ್ಪನ ಅವರ ಮುಂದೆ ಬಿಟ್ಟುಕೊಡಲ್ಲ!
ಅಜ್ಜ ,ಜೊತೆಗಿದ್ದು ದಿನ ಸಾಯೋ ಬದ್ಲು ದೂರ ಇದ್ದು ನೆಮ್ಮದಿಲಿ ಇರೋದೆ ಒಳ್ಳೇದು ಅಂತ ಅವರಿಗೆ ಅನ್ಸಿದೆ! ವರ್ಷಕ್ಕೆ ಒಂದೆರಡು ಸಾರಿ ಹುಟ್ಟಿದ ಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ಸಿಕ್ತಾರೆ ಕಾಲ ಕಳಿತಾರೆ ಸಾಕು ಬಿಡು. ಬೇರೆ ಆದ್ರೆ ಅದರಿಂದ ನನ್ನ ಜೀವನ ಕಷ್ಟ ಆಗ್ಬೋದು ಅಂತ ಅಪ್ಪ , ಅಮ್ಮನ ಕೆಲವು ಷರತ್ತಿಗೆ ಒಪ್ಪಿದ್ದಾರೆ.
ಅಪ್ಪ ಬೇರೆ ಬೇರೆ ಊರಿಗೆ ವರ್ಗ ಆಗಿ ಹೋದ್ರು ಒಂದು ದಿನ ಹೋಗ್ಲಿ ಒಂದು ಕ್ಷಣ ನಂಗೆ ಯಾರು ಇಲ್ಲ ಅಂತ ಅನ್ಸದ ಹಾಗೆ ನೋಡ್ಕೊಂಡಿದ್ದಾರೆ. ಅಮ್ಮ ತಾನು ಏನು ಕಮ್ಮಿ ಇಲ್ಲ ಅಂತ ಅವಳ ಧೈರ್ಯ, ಆತ್ಮವಿಶ್ವಾಸ ಎಲ್ಲವನ್ನೂ ಕಲಿಸಿದ್ದಾಳೆ.
ಮಾವನ ಚಿಂತೆ ಅಲ್ವ ನಿಂಗೆ? ಮಗಳಿಂದ ಮಗನ ಜೀವನವೂ ಹಾಳಯ್ತು ಅಂತ. ಅಜ್ಜ ನಂಗೆ ಮಾವ ಒಳ್ಳೆಯ ಸ್ನೇಹಿತ. ಅಪ್ಪ-ಮಾವ ಇನ್ನೂ ಒಳ್ಳೆಯ ಸ್ನೇಹಿತರು. ಅಪ್ಪ ವರ್ಗವಾಗಿ ಹೋದ ಊರುಗಳಿಗೆ ಮಾವ ನನ್ನ ಕರ್ಕೊಂಡು ಹೋಗಿ ಅಪ್ಪಂಗೆ ಅಚ್ಚರಿ ಮೂಡಿಸಿದ ದಿನಗಳಿಗೆ ಲೆಕ್ಕಾನೆ ಇಲ್ಲ, ಆಮೇಲೆ ನಾವು ಮೂರು ಜನ ಸೇರಿಕೊಂಡು ಊರೂರು ತಿರುಗಿದ್ದು!! ಒಂದೊಳ್ಳೆ ಪ್ರವಾಸ ಕಥನ ಬರಿಬೋದು.
ಮಾವ ಹತ್ತು ದೇಶ ತಿರುಗಿ ಬಂದವರು, ಸಾವಿರಾರು ಜನರಿಗೆ ಹಲವು ತರಬೇತಿ ನೀಡುವವರು, ಸ್ವಂತ ಸಂಸ್ಥೆ ನಡೆಸುವವರು, ಈ ಒಂದು ಕಾರಣದಿಂದ ಪೂರ್ತಾ ಜೀವನ ಮದುವೆ ಆಗದೆ ಇರುವರ ? ಅದಕ್ಕೆ ಬೇರೆ ಏನೂ ಕಾರಣ ಇದ್ದೆ ಇರುತ್ತೆ ಅಲ್ವಾ? ನನ್ನ ಮೇಲೆ ಬಹಳ ಮಮಕಾರ ಇದೆ ಆ ಕಾರಣದಿಂದಲೇ ಅವರು ಮದುವೆ ಆಗದೆ ಇದ್ದಾರ ಅನ್ನೋದು ಮತ್ತೊಂದು ಚಿಂತೆ. ಅಜ್ಜ, ಮದುವೆ ಆಗದೆ ಇರೋಕೆ ಬೇರೆ ಯಾವುದೋ ಬಲವಾದ ಕಾರಣ ಇರೋದ್ರಿಂದ ನನ್ನ ಮೇಲೆ ಈ ಮಮಕಾರ ಇರಲುಬಹುದು ಅಲ್ವ?
ನಾನು ನಿನ್ನ ಹಾಗೆ ಇಲ್ಲ ಸಲ್ಲದ ಜಿಜ್ಞಾಸೆ ಹೊತ್ತುಕೊಂಡು ನನ್ನ ಮನಸ್ಸು ಹಾಗೂ ಪ್ರತಿಗಳಿಗೆಯನ್ನು ಹಾಳು ಮಾಡಿಕೊಳೋಕೆ ಇಷ್ಟ ಇಲ್ಲ.
ನಂಗೆ ಮೂವತ್ತು ಆಗ್ತಾ ಬಂತು ಮದುವೆ ಆಗಿಲ್ಲ, ಆದ್ರೆ ಅದರಿಂದ ಏನು ತೊಂದರೆ ಆಗಿಲ್ಲ, ನಾನು ನಂಗೆ ಇಷ್ಟ ಆಗುವವರು ಸಿಕ್ಕಿದ್ರೆ ಮದುವೆ ಆಗ್ತೀನಿ. ಅಪ್ಪನ ಅಧಿಕಾರ ವ್ಯಾಪ್ತಿ- ಅಮ್ಮನ ಹೆಸರು, ಮಾವನ ಹಣ ನೋಡಿ ನನ್ನ ಮದುವೆ ಆಗೋ ಹುಡುಗ ನಂಗೆ ಬೇಡ. ಈಗ ಎಲ್ಲವೂ ಚೆನ್ನಾಗೆ ಹೋಗ್ತಾ ಇದೆ. ಅಪ್ಪ ನಿವೃತ್ತಿಯಾಗಿ ಇಲ್ಲಿಯೇ ಪುಟ್ಟ ಬಿಡಾರ ಮಾಡಿಕೊಂಡು, ತಮ್ಮ ಇಷ್ಟದಂತೆ ಸೇವೆ, ಉಚಿತ ಯೋಗ ತರಬೇತಿ ಅಂತೆಲ್ಲ ಸದಾ ಕಾಲ ಚಟುವಟಿಕೆಯಿಂದ ಕೂಡಿರ್ತಾರೆ. ನನ್ನ ಬಗ್ಗೆ ಕಾಳಜಿ ವಹಿಸ್ತಾರೆ, ವಿಶೇಷ ಅಡುಗೆ ಮಾಡಿ ಊಟ ಮಾಡಿಸ್ತಾರೆ. ಮಾವ ವಿದೇಶ ಪ್ರಯಾಣಕ್ಕೆ ಹೋದಾಗ ನನ್ನನ್ನು ಕರೆದುಕೊಂಡು ಹೋಗ್ತಾರೆ. ಅಮ್ಮ ತನ್ನೆಲ್ಲ ಆಕಾಂಕ್ಷೆಗಳನ್ನು ಪೂರೈಸಿ, ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೇರಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾಳೆ. ಆದ್ರೆ ನೀನು ಮಾತ್ರ ಏನೋ ಆದ ಹಾಗೆ ಮಧ್ಯರಾತ್ರಿ ಚಾ ಮಾಡಿಕೊಂಡು ಕೂತಿದ್ಯ !! ಮತ್ತೆ ಜೋರಾಗಿ ನಗುತ್ತಾಳೆ.
ಚಾಮಿ : ಅಷ್ಟೇ ಅಂತ್ಯ, ಮತ್ತೆ ನಾನು ಅನ್ಕೊಂಡಿದ್ದು ಹೀಗಲ್ಲ !
ಮೊಮ್ಮಗಳು : ಅಜ್ಜ, ನೀವು ಬೆಳಿಗ್ಗೆ ಬೆಳಿಗ್ಗೆ ನಿಮ್ಮ ಸ್ನೇಹಿತನ ಜೊತೆ ನಡಿಗೆ ಅಂತ ಹೋಗ್ತೀರ, ಅವ್ರೋ ಒಂಚೂರು ಸಂತೋಷವಾಗಿ ಇರೋ ಜಾಯಮಾನನೇ ಅಲ್ಲ, ಅವ್ರ ಮಗಂಗೆ ಎಲ್ಲ ಚಟಗಳು ಇದೆ, ಮಗಳು ಮೂರು ಮದುವೆ ಆಗಿ ಅದು ಸರಿ ಹೋಗಿಲ್ಲ ಅಂತ ಬಿಟ್ಟು ಬಂದಿದ್ದಾಳೆ. ಸ್ವಂತ ಮನೆ ಮಾರಾಟ ಆಗಿ ಯಾವ ಆಸ್ತಿನೂ ಉಳ್ದಿಲ್ಲ! ಅದೇ ನಿಂಗೆ ಕೋಟಿ ರೂಪಾಯಿ ಬೆಲೆ ಬಾಳುವ ಮನೆ , ಅದು ನಿನ್ನ ಹೆಸರಲ್ಲೇ, ಆಗೊಮ್ಮೆ ಈಗೊಮ್ಮೆ ಅಲ್ಲಿ ಇಲ್ಲಿ ತಿರ್ಗಾಡಿಸುವ ನಿನ್ನ ಮಗ, ದಾನ ಧರ್ಮಕ್ಕೆ ಕರ್ಕೊಂಡು ಹೋಗೋ ಅಳಿಯ, ಊಟ ತಿಂಡಿ ಎಲ್ಲ ವಿಚಾರಿಸೋಕೆ ನಾನು, ಸರ್ಕಾರ ಕೆಲಸಕ್ಕೆ ಸಹಾಯಕ್ಕೆ ಅಮ್ಮ!
ಚಾಮಿ : ಅಲ್ವ ಅದು ನಿಜನೆ, ನಂಗೆ ಈ ದೃಷ್ಟಿಕೋನ ಇರಲೇ ಇಲ್ಲ ಕಣೆ.
ಮೊಮ್ಮಗಳು : ಅಜ್ಜ , ಅದು ಹೆಚ್ಚಿನವರ ಮನೋಭಾವ ,ಅವರು ನೆಮ್ಮದಿಲಿ ಇರಲ್ಲ ಬೇರೆಯವರು ನೆಮ್ಮದಿಲಿ ಇರೋಕೆ ಬಿಡಲ್ಲ!
ಅಜ್ಜ ನೀನು ಅಂದುಕೊಂಡಂಗೆ ನಾವ್ಯರು ಬೇಜಾರಲ್ಲಿ ಇಲ್ಲ, ನಿಂಗೆ ನಿದ್ದೆ ಬರ್ತಾ ಇಲ್ಲ ಅಂದ್ರೆ ಒಂದು ಸುತ್ತು ಹಾಕೊಂಡು ಬರಣ ಬಾ.
ಚಾಮಿಯ ಮುಖದಲ್ಲಿ ಹೊಸ ಕಳೆ ಇತ್ತು, ಮಗ ಕೊಟ್ಟ ಹೊಸ ಅಂಗಿಯನ್ನು ಹಾಕಿ, ತಲೆ ಬಾಚಿ ಹೊರಟ ಮೊಮ್ಮಗಳ ಕಾರಲ್ಲಿ ಕೂತು,"ಹೋಗೋಣ" ಅಂತ ಹೇಳಿದ ಮಾತಲ್ಲಿ ಇದ್ದ ಗೆಲುವು ನೋಡಿ ಮೊಮ್ಮಗಳ ಕಾರು ಇನ್ನೂ ವೇಗವಾಗಿ ಹೊರಟ್ಟಿತ್ತು.
ಇಬ್ಬರು ವಿಮಾನ ನಿಲ್ದಾಣ ತಲುಪಿದರು, ಗಂಟೆ ಎರಡುವರೆ ಕಳೆದಿತ್ತು, ಚಾಮಿಯ ಕಣ್ಣು ಹೊಳೆಯುತ್ತಿತ್ತು. ಅಲ್ಲಿನ ಜಗ ಮಗ ಬೆಳಕು, ವಿಮಾನಗಳ ಹಾರಾಟ, ಜನರು, ಎಲ್ಲವನ್ನೂ ಎತ್ತರದ ಕೆಫೆ ಒಂದರಲ್ಲಿ ಕೂತು ಮೊಮ್ಮಗಳೊಂದಿಗೆ ನೋಡುತ್ತಿದ್ದ. ಹಿಂದಿನಿಂದ ಯಾರೋ ಬಂದು ಕಣ್ಣು ಮುಚ್ಚಿದರು. ಕಣ್ಣು ಬಿಡಿಸುವಷ್ಟರಲ್ಲಿ ಮಗ,ಮಗಳು, ಅಳಿಯ ಎಲ್ಲರೂ ಹುಟ್ಟಿದ ಹಬ್ಬದ ಶುಭಾಶಯ ಕೋರುತ್ತಾ ನಿಂತಿದ್ದರು.
ಅಂದು ಮನೆ ತಲುಪಿದ್ದು ನಾಲ್ಕು ಗಂಟೆಗೆ , ಸೊಗಸಾದ ನಿದ್ದೆ ಬಂದಿತ್ತು. ಮರುದಿನ ಕೈಗಳನ್ನು ಉಜ್ಜಿಕೊಂಡು, ಕಣ್ಣಿಗೆ ಒತ್ತಿಕೊಂಡು, ಕಣ್ಣು ಬಿಟ್ಟಾಗ, ಸೂರ್ಯ ರಶ್ಮಿಗೆ ತಾನು ಬಿತ್ತು ಹಾಕಿ ಸಸಿ ಮಾಡಿದ್ದ ಪನ್ನೇರಳೆ ಮರದಲ್ಲಿ ಹಣ್ಣುಗಳು ಹೊಳಿಯುತ್ತಿದ್ದವು."ಬಿತ್ತಿದ್ದು" ಎಂದು ಮನಸಿನಲ್ಲಿ ಬಂದ ಭಾವ ಅದೇ ಸಮಯಕ್ಕೆ ಮೊಮ್ಮಗಳು ಒಳ ಇಣುಕಿ ನಗುವೊಂದನ್ನು ಚೆಲ್ಲಿ ಹೋದಳು. ಇದು ಅದೇ...
beautiful dear
ReplyDeleteThank you mam❤️
Delete