ವಸುಂಧರೆ
ಕಛೇರಿಯ ಗೋಡೆಯ ಮೇಲಿದ್ದ ಗಡಿಯಾರದಲ್ಲಿ ೫:೩೦ ಕಳೆದಿದ್ದು, ರಾಜಾರಾಮರ ಅಂದಿನ ಕೆಲಸ ಮುಗಿದಿತ್ತು. ತಮ್ಮ ಕೈಚೀಲವನ್ನು ಅಡ್ಡವಾಗಿ ಏರಿಸಿಕೊಂಡು,ಸಹೋದ್ಯೋಗಿಗಳಿಗೆ ವಿದಾಯ ಹೇಳಿ ಬೈಸಿಕಲ್ ಹತ್ತಿ ಮೇಸ್ತ್ರಿಯನ್ನು ಕಾಣಲು ಹೊರಟರು. ಮೇಸ್ತ್ರಿಯೊಂದಿಗೆ ಮಾತನಾಡಿ ಮುಂದಿನ ಯೋಜನೆಯನ್ನು ಲೆಕ್ಕಹಾಕುತ್ತಾ ಮನೆ ಕಡೆ ಪಯಣ ಮುಂದುವರೆಸಿದರು. ರಾಜಾರಾಮರು ರಾಷ್ಟೀಯ ಬ್ಯಾಂಕ್ ಉದ್ಯೋಗಿ. ಹಲವು ಊರುಗಳಲ್ಲಿ ಸೇವೆ ಸಲ್ಲಿಸಿ ಇದೀಗ ಹುಟ್ಟೂರಾದ ರಾಜಪಟ್ಣಕ್ಕೆ ಬಂದು ನೆಲೆಸಿದ್ದಾರೆ. ಹೆಸರೇ ಹೇಳುವಂತೆ ರಾಜಪಟ್ಣ ರಾಜಧಾನಿಯಾಗಿ ಮೆರೆದ ಊರು. ಅದೇ ರೀತಿ ಬ್ರಿಟಿಷರಿಂದ ಪ್ರಭಾವಕ್ಕೆ ಒಳಗಾಗಿದೆ ಎಂಬುದು ಅಲ್ಲಿನ ಜನರ ಜೀವನ ಶೈಲಿಯಿಂದ ತಿಳಿಯುತ್ತದೆ. ರಾಜಾರಾಮರಿಗೆ ಇಲ್ಲಿ ಸ್ವಂತ ಮನೆ ಒಟ್ಟಿಗೆ ಐದು ಎಕರೆ ತೋಟ, ಹೊಲ ಗದ್ದೆ ,ಕೆಲಸಕ್ಕೆ ನಂಬಿಕಸ್ತ ಕುಟುಂಬ ಇರುವುದರಿಂದ ಬಹಳ ಅನುಕೂಲವಾದ ವ್ಯವಸ್ಥೆ ಏಕೆಂದರೆ ಹೆಚ್ಚಿನವರು ಇಲ್ಲಿ ಸ್ವಂತ ಮನೆ ಕಟ್ಟಿಕೊಂಡಿದ್ದರು ಅವರುಗಳ ತೋಟ,ಹೊಲ ಗದ್ದೆಗಳು ಏಳೆಂಟು ಮೈಲಿ ದೂರದಲ್ಲಿರುವ ಹಳ್ಳಿಗಳಲ್ಲಿ ಇರುತ್ತಿತ್ತು. ಮಳೆಗಾಲ ಅತ್ಯಂತ ಭೀಕರವಾಗಿತ್ತು ಆ ವರ್ಷ, ಪ್ರಕೃತಿ ವಿಕೋಪಕ್ಕೆ ಲೆಕ್ಕಕ್ಕೆ ಸಿಗದಷ್ಟು ಜನರು ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಮಕುಳ ತನ್ನ ಮನೆ ಮಡದಿ, ಅಲ್ಪ ಸಲ್ಪ ಬೆಲೆಬಾಳುವ ವಸ್ತುಗಳನ್ನು(ಅವನಿಗೆ) ಕಳೆದುಕೊಂಡ. ಉಳಿದದ್ದು ಅವನು ಮತ್ತು ಇಬ್ಬರು ಮಕ್ಕಳು ಮಾತ್ರ. ದಾರಿತೋಚದೆ ಮನೆ...