ವಸುಂಧರೆ

ಕಛೇರಿಯ ಗೋಡೆಯ ಮೇಲಿದ್ದ ಗಡಿಯಾರದಲ್ಲಿ ೫:೩೦ ಕಳೆದಿದ್ದು, ರಾಜಾರಾಮರ ಅಂದಿನ ಕೆಲಸ ಮುಗಿದಿತ್ತು. ತಮ್ಮ ಕೈಚೀಲವನ್ನು ಅಡ್ಡವಾಗಿ ಏರಿಸಿಕೊಂಡು,ಸಹೋದ್ಯೋಗಿಗಳಿಗೆ ವಿದಾಯ ಹೇಳಿ ಬೈಸಿಕಲ್ ಹತ್ತಿ ಮೇಸ್ತ್ರಿಯನ್ನು ಕಾಣಲು ಹೊರಟರು. ಮೇಸ್ತ್ರಿಯೊಂದಿಗೆ ಮಾತನಾಡಿ ಮುಂದಿನ ಯೋಜನೆಯನ್ನು ಲೆಕ್ಕಹಾಕುತ್ತಾ ಮನೆ ಕಡೆ ಪಯಣ ಮುಂದುವರೆಸಿದರು. ರಾಜಾರಾಮರು ರಾಷ್ಟೀಯ ಬ್ಯಾಂಕ್ ಉದ್ಯೋಗಿ. ಹಲವು ಊರುಗಳಲ್ಲಿ ಸೇವೆ ಸಲ್ಲಿಸಿ ಇದೀಗ ಹುಟ್ಟೂರಾದ ರಾಜಪಟ್ಣಕ್ಕೆ ಬಂದು ನೆಲೆಸಿದ್ದಾರೆ. ಹೆಸರೇ ಹೇಳುವಂತೆ ರಾಜಪಟ್ಣ ರಾಜಧಾನಿಯಾಗಿ ಮೆರೆದ ಊರು. ಅದೇ ರೀತಿ ಬ್ರಿಟಿಷರಿಂದ ಪ್ರಭಾವಕ್ಕೆ ಒಳಗಾಗಿದೆ ಎಂಬುದು ಅಲ್ಲಿನ ಜನರ ಜೀವನ ಶೈಲಿಯಿಂದ ತಿಳಿಯುತ್ತದೆ. ರಾಜಾರಾಮರಿಗೆ ಇಲ್ಲಿ ಸ್ವಂತ ಮನೆ ಒಟ್ಟಿಗೆ ಐದು ಎಕರೆ ತೋಟ, ಹೊಲ ಗದ್ದೆ ,ಕೆಲಸಕ್ಕೆ ನಂಬಿಕಸ್ತ ಕುಟುಂಬ ಇರುವುದರಿಂದ ಬಹಳ ಅನುಕೂಲವಾದ ವ್ಯವಸ್ಥೆ ಏಕೆಂದರೆ ಹೆಚ್ಚಿನವರು ಇಲ್ಲಿ ಸ್ವಂತ ಮನೆ ಕಟ್ಟಿಕೊಂಡಿದ್ದರು ಅವರುಗಳ ತೋಟ,ಹೊಲ ಗದ್ದೆಗಳು ಏಳೆಂಟು ಮೈಲಿ ದೂರದಲ್ಲಿರುವ ಹಳ್ಳಿಗಳಲ್ಲಿ ಇರುತ್ತಿತ್ತು.


ಮಳೆಗಾಲ ಅತ್ಯಂತ ಭೀಕರವಾಗಿತ್ತು ಆ ವರ್ಷ, ಪ್ರಕೃತಿ ವಿಕೋಪಕ್ಕೆ ಲೆಕ್ಕಕ್ಕೆ ಸಿಗದಷ್ಟು ಜನರು ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಮಕುಳ ತನ್ನ ಮನೆ ಮಡದಿ, ಅಲ್ಪ ಸಲ್ಪ ಬೆಲೆಬಾಳುವ ವಸ್ತುಗಳನ್ನು(ಅವನಿಗೆ) ಕಳೆದುಕೊಂಡ. ಉಳಿದದ್ದು ಅವನು ಮತ್ತು ಇಬ್ಬರು ಮಕ್ಕಳು ಮಾತ್ರ. ದಾರಿತೋಚದೆ ಮನೆ ಮನೆಗೆ ಕೆಲಸ ಕೇಳಿಕೊಂಡು ಹೋದ. ಎಲ್ಲರೂ ಒಂದಲ್ಲ ಒಂದು ರೀತಿ ಅದಾಗಲೇ ನಷ್ಟ ಅನುಭವಿಸಿದ್ದರಿಂದ ಇವನಿಗೆ ಸಹಾಯ ಮಾಡುವ ಮನಸ್ಥಿತಿ ಯಾರಿಗೂ ಇರಲಿಲ್ಲ.ಕೃಷ್ಣರಾಯರಿಗೆ ಇವನ ಕಣ್ಣಲ್ಲಿ ಅದೇನು ಹೊಳಪು ಕಂಡಿತೋ , ಗೊತ್ತು ಗುರಿ ಇಲ್ಲದ ಮಕುಳನಿಗೆ ಆಶ್ರಯ ಕೊಟ್ಟರು. ರಾಯರು ರಾಜಪಟ್ಣದ ಜೇನು ಸಂಘದಲ್ಲಿ ನೌಕರಿಯಲ್ಲಿದ್ದರು, ಪಿತ್ರಾರ್ಜಿತವಾಗಿ ಬಂದ ಆಸ್ತಿ ಇತ್ತಾದರೂ ಅದರಲ್ಲಿ ಹಣ್ಣುಗಳ ಕೆಲ ಮರಗಳಿದ್ದವು ಹೊರತು ಮತ್ತೇನೂ ಇರಲಿಲ್ಲ. ರಾಯರಿಗೆ ಒಳ್ಳೆಯ ಜೊತೆಗಾರ ಇಲ್ಲದ್ದ ಕಾರಣವೋ ಏನೋ ಅವರು ಕೂಡ ಅದರ ತಂಟೆಗೆ ಹೋಗಿರಲಿಲ್ಲ. ಒಂದೆರಡು ದಿನ ಕಳೆದು ಮಕುಳನೊಂದಿಗೆ ಮಾತು ಕಥೆ ನಡೆಸಿದ ಮತ್ತೆ ಅವರ ಕನಸೊಂದು ಚಿಗುರಿತ್ತು. ಮಕುಳ ರಾಯರ ಬಂಟನಾದ.ಅವನ ಹಿರಿಮಗ ಓದುವ ಆಸಕ್ತಿ ಇಲ್ಲದವನಾದರೂ ಅವನ ಅಪ್ಪನಂತೆ ಒಳ್ಳೆಯ ಕೆಲಸಗಾರ ಎನ್ನುವುದರಲ್ಲಿ ಸಂಶಯವಿರಲಿಲ್ಲ. ಕಿರಿಮಗನನ್ನು ರಾಯರು ಓದಿಸಿ, ಸಹಕಾರ ಸಂಘ ಒಂದರಲ್ಲಿ ಕೆಲಸ ಸೇರಿಕೊಳ್ಳಲು ಬಹಳ ಸಹಾಯ ಮಾಡಿದರು.ಒಂದು ರೀತಿಯಲ್ಲಿ ಅಲ್ಲಿ ಪರಸ್ಪರ ಸಹಕಾರವಿತ್ತು.ಮಕುಳ ರಾಯರ ಬಗ್ಗೆ ತುಂಬಾ ಅಭಿಮಾನ, ಗೌರವ ಎಲ್ಲವನ್ನೂ ಇಟ್ಟುಕೊಂಡಿದ್ದ ಅಲ್ಲದೆ ತನ್ನ ಮಕ್ಕಳಲ್ಲಿಯೂ ಅದನ್ನು ಬೆಳೆಸಿದ್ದ. ಅವರೆಲ್ಲರೂ ರಾಯರನ್ನು ತಮ್ಮ ಪಾಲಿನ ದೇವರೆಂದೆ ನಂಬಿದ್ದರು, ರಾಯರು ಅದನ್ನು ಉಳಿಸಿಕೊಂಡಿದ್ದರು ಕೂಡ.

ರಾಜಾರಾಮರು ಊರಿಂದ ಊರಿಗೆ ವರ್ಗವಾಗಿ ಹೋಗುತ್ತಿದ್ದರಾದರು, ಮನೆ ಹಾಗೂ ತೋಟದ ಚಿಂತೆ ಇರಲಿಲ್ಲ ಕಾರಣ ತ್ರಿಜಲ. ಮಕುಳನ ಹಿರಿಮಗ ,ತ್ರಿಜಲ ತಂದೆಯ ಹಾಗೆ ಆ ಮಣ್ಣಿನ ಕಣ ಕಣವನ್ನು ಕಣ್ಣಿಗೆ ಒತ್ತಿಕೊಂಡು ಅಲ್ಲಿನ ಒಂದು ಎಲೆಯು ಕೊಂಕದಂತೆ ನೋಡಿಕೊಂಡಿದ್ದ. ಕಾಫಿ ತೋಟ,ಕಾಳು ಮೆಣಸಿನ ಬಳ್ಳಿ, ಹಣ್ಣಿನ ಮರಗಳು,ಹೂ ಗಿಡಗಳು, ಔಷಧ ಗಿಡಗಳು, ಬತ್ತದ ಗದ್ದೆ, ಕೆರೆ, ಅಜ್ಜನ ಕಾಲದ ಬಾವಿ ಎಲ್ಲವನ್ನೂ


ಅದೆಷ್ಟು ಚಂದವಾಗಿ ಇಟ್ಟುಕೊಂಡಿದ್ದ ಅಂದರೆ ಪ್ರಾಯಶಃ ಸ್ವಂತ ತೋಟವನ್ನು ಯಾರು ಕೂಡ ಇಷ್ಟು ಚಂದವಾಗಿ ಇಟ್ಟುಕೊಳ್ಳಲಾಲರು. ರಾಮನ ಅನುಪಸ್ಥಿಯಲ್ಲಿ ಭರತ ರಾಜ್ಯದ ಯೋಗಕ್ಷೇಮ ನೋಡಿಕೊಂಡoತೆ ಇತ್ತು ತ್ರಿಜಲನ ಸ್ವಾಮಿ ನಿಷ್ಠೆ.ರಾಜಾರಾಮರ ತಂದೆ ಕೃಷ್ಟರಾಯರು ತೀರಿಹೋದಗ , ಮಕುಳ ಬಾವಿಗೆ ಹಾರಲು ಹೋಗಿದ್ದ. ರಾಜರಮರು ಅವನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಕಡೆ ಪಕ್ಷ ಅವನ ಕುಟುಂಬಕ್ಕೆ ಸದಾ ತಮ್ಮ ನೆರವು ಇರುವಂತೆ ನೋಡಿಕೊಳ್ಳಬೇಕು ಎಂದು ಅಂದೆ ನಿಶ್ಚಯ ಮಾಡಿಕೊಂಡಿದ್ದರು.ಆದರೆ ಅವರ ನೆರವಿನಿಂದ ಹೆಚ್ಚು ತ್ರಿಜಲನ ನೆರವೆ ಇವರ ಮೇಲಿದ್ದಂತೆ ಇತ್ತು. ಅಷ್ಟು ಮಾತ್ರವಲ್ಲದೆ ರಾಯರ ಪ್ರಕೃತಿ ಪ್ರೇಮವನ್ನು ಇವನು ಹಾಗೂ ಇವನ ಕುಟುಂಬದವರು ಪರಿಪಾಲಿಸುತ್ತಿದ್ದರು.ತೋಟಕ್ಕೆ ಸಾವಯವ ಗೊಬ್ಬರ, ಪಕ್ಷಿಗಳಿಗೆ ಕುಡಿಯುವ ನೀರಿನ ಪುಟ್ಟ ಪುಟ್ಟ ಕರಟದ ನೇಲು ಕುಂಡ, ನಾಯಿಗಳಿಗೆ ನೀರಿನ ತೊಟ್ಟಿ, ಪಶುಗಳಿಗೆ ಹುಲ್ಲುಗಾವಲು ಹೀಗೆ.ಒಮ್ಮೆ ರಾಜರಾಮರ ಹೆಂಡತಿ ಇದನ್ನು ದೊಡ್ಡ ರೆಸಾರ್ಟ್ ಮಾಡಿ ಒಳ್ಳೆಯ ಹಣ ಮಾಡಬಹುದು ಎಂದಾಗ ತ್ರಿಜಲ ನಯವಾಗಿ ಭಿನ್ನಯಿಸಿಕೊಂಡಿದ್ದ.ಅದರಿಂದ ಅವರಿಗೆ ಕೋಪ ಬಂದಿತ್ತಾದರೂ ಅದನ್ನು ಅದುಮಿಟ್ಟಕೊಂಡಿದ್ದರು.


ಹೇಗೂ ಇನ್ನೂ ಇಲ್ಲಿಯೇ ಇರುವುದ್ದಾದ್ದರಿಂದ ತ್ರಿಜಲ ಹಾಗೂ ಅವನ ಕುಟುಂಬದವರಿಗೆ ಒಂದು ಒಳ್ಳೆಯ ಮನೆಯನ್ನು ಕಟ್ಟಿ, ಎರಡು ಹಸುಗಳನ್ನು ಕೊಡಬೇಕು ಅಂದುಕೊಂಡಿದ್ದ.ಅಲ್ಲದೆ ಇದನ್ನು ಅವನಲ್ಲಿ ಹೇಳಿದ್ದರು ಕೂಡ, ತ್ರಿಜಲ ಅವೆಲ್ಲ ಬೇಡ ಎಂದು ಹೇಳಿದ್ದ. ಆದರೆ ರಾಜಾರಾಮರಿಗೆ ಅಷ್ಟಾದರೂ ಮಾಡಲೇಬೇಕು ಎಂದಿತ್ತು.

ಪೀರಿ ಒಗೆದ ಬಟ್ಟೆಗಳನ್ನು ಆರಿಸುತ್ತಿದ್ದಾಗ, ಒಡತಿ ಫೋನಿನಲ್ಲಿ ಮಾತನಾಡುವುದು ಇವಳ ಕಿವಿಗೆ ಬಿದ್ದಿತು. ಹೇಗೆ ತನ್ನ ಪತಿ ಹೊಸ ಮನೆ ಹಾಗೂ ಹಸುಗಳನ್ನು ಕೊಡುವ ನಾಟಕವಾಡಿ ತ್ರಿಜಲನ ಕುಟುಂಬದ ಅವನತಿ, ಅವರಿಗೆ ಗೊತ್ತಿಲ್ಲದಂತೆ ಮಾಡುತ್ತಿದ್ದಾರೆ , ಅವನ ಇಬ್ಬರು ಮಕ್ಕಳು ಕಲಿಕೆಯಲ್ಲಿ ಮುಂದಿದ್ದರೂ ಹೇಗಾದರೂ ಮಾಡಿ ಅದನ್ನು ನಿಲ್ಲಿಸದಿದ್ದರೆ ಅವರ ತೋಟದ ಕೆಲಸಕ್ಕೆ ಜನ ಸಿಗದಂತೆ ಆಗುತ್ತದೆ ಅದಕ್ಕೆ ಮಾಡಿರುವ ಯೋಜನೆ ಎಂದೆಲ್ಲ ಮಾತನಾಡುತ್ತಾ ಇದ್ದರು. ಪೀರಿಗೆ ನಿಂತ ನೆಲ ಕುಸಿದಂತೆ ಭಾಸವಾಯಿತು. ಅವರ ಮಾತು ಮುಗಿದ ನಂತರ ಒಡತಿಯಲ್ಲಿ ಹೋಗಿ ವಿಚಾರಿಸಿದಾಗ,ಅದು ನಿಜವೆಂದು, ಆ ವಿಷಯವಾಗಿ ಬಹಳ ಅನುಕಂಪವಿರುವಂತೆ ನಾಟಕವಾಡಿ ಆದಷ್ಟು ಬೇಗ ಇಲ್ಲಿಂದ ಜಾಗ ಕಾಲಿ ಮಾಡಿ ಪಕ್ಕದ ಊರಿನಲ್ಲಿರುವ ದೊಡ್ಡ ಕಾಫಿ ಕಂಪನಿಯ ತೋಟದ ಕೆಲಕ್ಕೆ ಸೇರುವಂತೆ ಸಲಹೆ ಕೊಟ್ಟರು. ಮಾತ್ರವಲ್ಲದೆ ಅಲ್ಲಿಯ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ಇರುವ ಅನುಕೂಲ ಎಲ್ಲವನ್ನೂ ಬಣ್ಣ ಬಣ್ಣವಾಗಿ ವಿವರಿಸಿ ಹೇಳಿದರು. ಪೀರಿಯ ಕಿವಿ ನೆಟ್ಟಗೆ ಆಯಿತು. ಒಂದೇ ವಾರದಲ್ಲಿ ಒಕ್ಕಲು ಎದ್ದಿತು.

ಮಕುಳ ನೆಟ್ಟ ಮಾವಿನ ಮರದ ಕೆಳಗೆ ಕೂತು ರಾಜಾರಾಮರು, ತ್ರಿಜಲ ಈ ರೀತಿ ಮಾಡಲು ಕಾರಣವೇನೆಂದು ಯೋಚಿಸುತ್ತಾ ಇದ್ದರು. ತಮ್ಮ ಮಡದಿ ಹೇಳಿದಂತೆ ಪೀರಿಗೆ ಆಸೆ ಹೆಚ್ಚು ಆಯಿತೆ? ತನ್ನ ಮೇಲೆ ಅಪನಂಬಿಕೆಯೇ? ಅಥವಾ ಬೇರೆ ಯಾರೋ ತಲೆ ತಿರುಗಿಸಿದರೆ? ಹೀಗೆ ಹತ್ತು ಹಲವು ಕಾರಣಗಳು ಬಂದು ಹೋದವು. ಇದಕ್ಕೆ ಕಾರಣ ತಮ್ಮ ಮಡದಿ ಎಂದು ಮನಸ್ಸಿನ ಮೂಲೆಯಲ್ಲಿ ಇತ್ತಾದರೂ ಅದನ್ನು ಒಪ್ಪಿಕೊಂಡು ಮತ್ತಷ್ಟು ಕಿನ್ನಾರಾಗುವ ಬದಲು ಸುಳ್ಳನ್ನೇ ಸತ್ಯವೆಂದು ಹೇಳಿಕೊಂಡು ಅಲ್ಲಿಂದ ಮನೆಗೆ ನಡೆದರು. ಮಡದಿ ಅದಾಗಲೇ ರೆಸಾರ್ಟ್ ಮಾಡಲು ಬೇಕಾದ ತಯಾರಿಗಳನ್ನು , ಸಂಬಂಧ ಪಟ್ಟವರ ಜಂಗಮವಾಣಿ ಸಂಖ್ಯೆಗಳನ್ನು ಕಲೆಹಾಕಿ ಬಹಳ ಉಮೇದಿನ್ನಲಿದ್ದರು. ರಾಜಾರಾಮರ ಬೇಸರವಾಗಲೀ , ನೋವಾಗಲೀ ಆಕೆಯನ್ನು ಬಾದಿಸಲೆ ಇಲ್ಲ. ಅವರ ಮಡದಿಯ ಸಣ್ಣತನಗಳು - ವಿಕಾರತೆಗಳು ತಿಳಿದಿತ್ತಾದರು ಅದು ಇಲ್ಲಿಗೆ ಬಂದು ಮುಟ್ಟುತ್ತದೆ ಎಂದು ಅವರು ಭಾವಿಸಿರಲಿಲ್ಲ. ಇಷ್ಟು ವರ್ಷ ನಿಯತ್ತಿನ ನಾಯಿಯಂತೆ ಜೀವ ತೇಯ್ದ ತ್ರಿಜಲನಿಗೆ ತಾವು ಮಾಡುವ ಸಹಾಯ ಸಹಿಸಲಾಗದೆ ಈ ರೀತಿ ಮಾಡಿದ್ದು ಅವರ ಅರಿವಿಗೆ ತಿಳಿದಿತ್ತು.

ಅಂದು ಸಂತೆ ರಾಜಾರಾಮರಿಗೆ ರಜೆ ಬೇರೆ ಇತ್ತು. ಅವರು ತಮ್ಮ ಬೈಸೈಕಲ್ ಏರಿ ಸಂತೆಗೆ ಹೊರಟರು. ಅಲ್ಲಿ ತ್ರಿಜಲ ಮತ್ತು ಅವನ ಕುಟುಂಬ ತರಕಾರಿ ಕೊಳ್ಳುತ್ತಿದ್ದರು , ಇವರನ್ನು ಕಂಡ ಕೂಡಲೇ ಸಾಷ್ಟಾಂಗ ನಮಸ್ಕಾರ ಹಾಕಿದ ತ್ರಿಜಲ, ಅವನ ಪತ್ನಿ ಕೈ ಮುಗಿದು ನಿಂತಳು. ಅದೇ ಸಂತೆಗೆ ಕಾರಿನಲ್ಲಿ ಬಂದಿದ್ದ ಅವರ ಮಡದಿ ಇವರನ್ನು ಸಂತೆಯಲ್ಲಿ ಕಂಡು ಆಶ್ಚರ್ಯದಿಂದ ಕಾರು ಚಾಲಕನನ್ನು ವಿಚಾರಿಸಿದಳು. ಆತ ಪ್ರತಿತಿಂಗಳ ಕೊನೆಯ ಸಂತೆ ದಿನ ಯಜಮಾನರು ತ್ರಿಜಲನನ್ನು ಕಾಣುತ್ತಾರೆ ಎಂದದನ್ನು ಕೇಳಿ ನಂಬಲು ಸಾಧ್ಯವಾಗಲಿಲ್ಲ. ತಾನು ಗ್ರಹಿಸದ ಯಾವುದೋ ಸಂಗತಿ ಇರುವುದನ್ನು ತಿಳಿದು , ರಾಜಾರಾಮರು ಬಂದ ಕೂಡಲೇ ಈ ವಿಷಯದ ಚರ್ಚೆ ಮಾಡಿದಳು. ರಾಜರಾಮರು ವಿಷೇಶ ಗಮನ ಕೊಡದೆ , ಹೌದೆಂಬಂತೆ ತಲೆ ಅಲ್ಲಾಡಿಸಿ ತೋಟದ ಕಡೆಗೆ ನಡೆದರು. ತ್ರಿಜಲ ಬಿಟ್ಟು ಹೋದ ಮತ್ತೆ ಖಾಯಂ ಕೆಲಸದವರು ಯಾರು ಇರುತ್ತಿರಲಿಲ್ಲ ಬದಲಾಗಿ ಬೆಳಿಗ್ಗಿನಿಂದ ಸಂಜೆಯ ವರೆಗೆ ಕೆಲಸ ಮಾಡಿ ಹೋಗುತ್ತಿದ್ದ ಒಂದು ಕುಟುಂಬವಿತ್ತು. ಅವರು ಒಳ್ಳೆಯ ಕೆಲಸಗಾರರೆ ಆದರೆ ತ್ರಿಜಲ ಇದ್ದಾಗ ಇರುತ್ತಿದ್ದ ಲವಲವಿಕೆ ರಾಜಾರಾಮರಲ್ಲಿ ಕಾಣುತ್ತಿರಲಿಲ್ಲ.ಅವರ ಮಡದಿಗೆ ಒಂದೇ ಚಿಂತೆ ಎಲ್ಲಿ ಇವರು ಮತ್ತೆ ತ್ರಿಜಲನ ಉದ್ಧಾರಕ್ಕೆ ಟೊಂಕಕಟ್ಟಿ ನಿಲ್ಲುವರೋ ಅನ್ನುವುದು. ವರ್ಷಗಟ್ಟಲೆ ಆ ಊರು ಈ ಊರು ಎಂದು ತಿರುಗುತ್ತಿದ್ದಾಗ ಒಂದು ರೂಪಾಯಿಯು ಮೋಸ ಮಾಡದೆ, ತೋಟವನ್ನು ಬೆಳೆಸಿ, ಸಮೃದ್ಧಿ ಮಾಡಿದ ತ್ರಿಜಲನ ಬಗ್ಗೆ ಒಂದು ಚೂರೂ ಕೂಡ ಕರುಣೆ ಇರಲಿಲ್ಲ ಈಕೆಗೆ, ಪ್ರತಿನಿತ್ಯ ತಲೆಯಲ್ಲಿ ಓಡುತ್ತಿರುವುದು ಒಂದೇ ವಿಷಯ ಅದು ಹಣ!ಹಣ ಮತ್ತು ಹಣ ಮಾತ್ರ. ಹಾಗಾಗಿ ಎಲ್ಲಿ ತನಗೆ ಸೇರಬೇಕಾದ ಹಣದಲ್ಲಿ ಸಣ್ಣ ಪಾಲೊಂದನ್ನು ಈ ತ್ರಿಜಲ ಹೊಡೆದುಕೊಂಡು ಬಿಡುತ್ತಾನೆ ಅನ್ನುವ ಭಯ ಅವರನ್ನು ಸದಾ ಕಾಡುತ್ತಲೇ ಇತ್ತು.

ಅಂದು ಪೀರಿ ಬಂದು ಅಳುತ್ತಾ ನಡೆದ ಸಂಗತಿಯನ್ನು ಹೇಳಿದಾಗ, ತ್ರಿಜಲ ತನ್ನ ಈ ನೆಲದ ಋಣ ಮುಗಿಯಿತೆಂದು ತೀರ್ಮಾನ ಮಾಡಿಕೊಂಡು, ಹೆಂಡತಿಯ ಹತ್ತಿರ ಇಷ್ಟು ದಿನ ಬಚ್ಚಿಟ್ಟ ಒಂದು ಸತ್ಯವನ್ನು ಹೇಳಿದ. ತನ್ನ ತಮ್ಮ ಮಹಾ ಸಹಕಾರ ಸಂಘದಲ್ಲಿದ್ದಾಗ ಒಬ್ಬರು ದೊಡ್ಡ ಕಾಫಿ ತೋಟದ ಮಾಲೀಕರ ಪರಿಚಯಯಾಗಿ ,ಅವರ ಒಡನಾಟದಿಂದ ಅನೇಕ ಬೇರೆ ಸ್ನೇಹಗಳು ಬೆಳೆದು, ಅವರು ಇವನ ಕಾರ್ಯಪ್ರವೃತ್ತಿಗೆ,ನಿಷ್ಠೆ, ಸೌಮ್ಯ ನಡತೆಗೆ ಮನಸೋತು ಇನ್ನೂ ಉತ್ತಮ ಕೆಲಸ ಕೊಟ್ಟರು,ಮಹಾ ಹೆಸರಿಗೆ ತಕ್ಕಂತೆ ದೊಡ್ಡ ಮನುಷ್ಯನಾಗಿ ಬೆಳೆದಿದ್ದ.ಆ ಪಕ್ಕದೂರಿನ ಕಾಫಿ ತೋಟದ ಮಾಲಿಕ ಅವನು. ನಿರಾಶ್ರಿತರಿಗೆ ಮನೆ, ಕೆಲಸ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಎಲ್ಲವನ್ನೂ ಮಾಡಿಕೊಟ್ಟಿದ್ದಾನೆ. ತನ್ನನ್ನು ಅಲ್ಲಿಗೆ ಕರೆದಿದ್ದ ಆದರೆ ಈ ನೆಲದ ಋಣ ಇನ್ನೂ ಇದ್ದ ಕಾರಣ ತಾನು ಹೋಗಿರಲಿಲ್ಲ ಎಂದು ಹೇಳಿದ. ಪೀರಿ ಬಿಟ್ಟ ಕಣ್ಣು ಹಾಗೆ ಬಿಟ್ಟು ಕನಸೋ ನನಸೋ ಎಂಬoತೆ ತ್ರಿಜಲನನ್ನೆ ನೋಡುತ್ತಿದ್ದಳು. ಅದಲ್ಲದೇ ರಾಜರಾಮರು ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಾಯೋಜಕರ ಮಾಡಿಕೊಟ್ಟದ್ದು, ಮಡದಿಗೆ ತಿಳಿಯದಂತೆ ಮಾಡಿದ ಸಹಾಯಗಳ ಪಟ್ಟಿಯನ್ನೇ ಹೇಳಿದ.ಇದೆಲ್ಲ ಒಡತಿಯ ಹುನ್ನಾರ ಆದರೆ ಅದನ್ನು ಪ್ರಶ್ನಿಸದೆ ಇಲ್ಲಿಂದ ಹೊರಟು ಹೋದರೆ ಎಲ್ಲರಿಗೂ ನೆಮ್ಮದಿ ಅನ್ನುವುದನ್ನು ಪೀರಿಗೆ ಮನಗಾಣಿಸಿದ. ಸಮಯ ಸಂದರ್ಭ ನೋಡಿಕೊಂಡು ಒಡೆಯನಿಗೂ ಹೇಳಿದ. ಅಷ್ಟು ಮಾತ್ರವಲ್ಲದೆ ತೋಟದ ಕೆಲಸಕ್ಕೆ  ಧಕ್ಕೆ ಬಾರದಂತೆ ತಮ್ಮ ಮಹಾ ಮಾಡಿದ ವ್ಯವಸ್ಥೆಯನ್ನೂ ಹೇಳಿದ.ಮಣ್ಣಿನ ಋಣ ತೀರಿಸಲು ತ್ರಿಜಲ - ಮಹಾ ಮಾಡುತ್ತಿರುವ ಉಪಕಾರವನ್ನು ನೋಡಿ ರಾಜಾರಾಮರ ಕಣ್ಣು ತುಂಬಿ ಬಂದಿತ್ತು."ಸ್ವಾಮಿ , ಈ ಭೂಮಿತಾಯಿ ನನ್ನ ಸ್ವಂತ ತಾಯಿ, ನಮ್ಗೆ ಇನ್ನೊಂದು ಜನ್ಮ ಕೊಟ್ಟಿದ್ದು ಇದೆ ಮಣ್ಣು( ಮಣ್ಣಿನ ಕಣವನ್ನು ಕಣ್ಣಿಗೆ ಒತ್ತಿಕೊಂಡು) , ಈಕೆ ಸಮೃದ್ಧಿಯಾಗಿ, ಹಸಿರಾಗಿ, ಪಶು ಪಕ್ಷಿಗಳಿಂದ ಕೂಡಿ ಇದ್ದರ ಅದು ಪಸಂದ". ಎಂದು ಕೈಮುಗಿದು , ಕಾಲು ಮುಟ್ಟಿ ಮುಂದೆ ನಡೆದ.


ಪಂಚವಟಿ ಈಗ ಬರಿಯ ಪಂಚವಟಿ ಕಾಫಿ ತೋಟವಾಗಿ ಅಲ್ಲ ಬದಲಾಗಿ ಪಂಚವಟಿ ರೆಸಾರ್ಟ್ ಆಗಿ ಬದಲಾಗಿತ್ತು. ಮಡದಿಯ ಅಟ್ಟಹಾಸ ಮುಂದುವರೆದಿತ್ತು. ರಾಜಾರಾಮರು ಕಣ್ಣ ಮುಂದೆಯೇ ತಂದೆಯ ಆಸ್ತಿಯನ್ನು ಬೇಕ ಬಿಟ್ಟಿ ಹಾಳು ಮಾಡುತ್ತಿದ್ದರು ಏನು ಮಾಡುವಂತಿರಲಿಲ್ಲ. ಅವರಿಗೆ ಈ ಜಾಗದ ಮೇಲೆ ಒಂದು ವ್ಯಾಮೋಹ ಅದನ್ನು ರೆಸಾರ್ಟ್ ಮಾಡಲು ಸುತಾರಾಂ ಇಷ್ಟ ಇರಲಿಲ್ಲ, ಕೇಳುವವರು ಯಾರು? ಗದ್ದೆ ,ದನದ ಕೊಟ್ಟಿಗೆ, ಸಾಲು ಮನೆಗಳು ಎಲ್ಲ ನೆಲಸಮವಾಗಿತ್ತು. ಮಡದಿಯ ಕಾರುಬಾರಿನಲ್ಲಿ ರೆಸಾರ್ಟ್ ಐಷಾರಾಮಿ ಪ್ರವಾಸಿಗರನ್ನು ಕೈಬೀಸಿ ಕರೆದಿತ್ತು. ದಿನಗಳು ಕಳೆದವು. ರೆಸಾರ್ಟ್ ಬೇಡಿಕೆ ಹೆಚ್ಚುತ್ತಲೇ ಇತ್ತು. ನೆಲಸಮವಾಗಿದ್ದ ಗದ್ದೆಗಳಲ್ಲಿಯೂ ಮತ್ತಷ್ಟು ಕಟ್ಟಡಗಳು ಎದ್ದವು. ಆಗೋ ಮಳೆಗಾಲ , ಪ್ರವಾಸಿಗರ ದಂಡು, ಇಲ್ಲಿಯ ಪ್ರಕೃತಿ ಸೌಂದರ್ಯ ಸವಿಯಲು ಬಂದಿತ್ತು. ಆದರೆ ಮಳೆಯ ಭೀಕರತೆ ಯಾರು ಊಹಿಸಿರಲಿಲ್ಲ.ಗದ್ದೆಯಲ್ಲಿ ಕಟ್ಟಿದ ಐಷಾರಾಮಿ ಕಟ್ಟಡಗಳಲ್ಲಿ ನೀರು ತುಂಬಿಕೊಂಡವು, ಎಲ್ಲ ಕೊಳಕು ನೀರು ಮೇಲೆದ್ದು, ತೇಲಿ ಕೆಳ ಅಂತಸ್ತಿನಲ್ಲಿದ್ದ ಕೋಣೆಗಳನ್ನು ತುಂಬಿಕೊಂಡಿತು. ಅಲ್ಲಿಗೆ ರೆಸಾರ್ಟ್ ನೆಲಕಚ್ಚಿತ್ತು, ಭಾರಿ ನಷ್ಟವೂ ಆಯಿತು. ಮಡದಿ ಅದನ್ನು ಅಲ್ಲಿಗೆ ಬಿಟ್ಟು ಕೈತೊಳೆದುಕೊಂಡರು. ಒಂದು ಕಡೆ ಹೂಡಿಕೆ ಇನ್ನೊಂದು ಕಡೆ ಕಷ್ಟ ಪಟ್ಟು ಮಾಡಿದ ಹೊಲಗದ್ದೆ ಎಲ್ಲವೂ ಕೊಚ್ಚಿಕೊಂಡು ಹೋಗಿತ್ತು.

ಚಿತ್ರಕೂಟ ಪಕ್ಕದ ಊರಿನಲ್ಲಿರುವ ಕಾಫಿ ತೋಟ. ಅಲ್ಲಿಗೆ ಪ್ರವಾಸಿಗರು ಬರುತ್ತಿದ್ದರು. ಮನಸೂರೆಗೊಳ್ಳುವ ಕಾಫಿ ತೋಟ, ಕಾಫಿ ಕುಯ್ಯುವುದು, ಒಣಗಿದ ಬೇಳೆ ಪರಿಷ್ಕರಣೆ ಹೀಗೆ ಇವನ್ನೆಲ್ಲ ನೋಡಿ ಕಾಫಿ ಪುಡಿ ಕರಿದು ಮಾಡಿಕೊಂಡು ಹೋಗುತ್ತಿದ್ದರು. ತ್ರಿಜಲ - ಮಹಾ ಅಲ್ಲಿನ ಪರಿಸರವನ್ನು ಸ್ವರ್ಗವೇ ಇಳಿದಂತೆ ಭಾಸವಾಗುವ ಹಾಗೆ ಪೋಷಿಸಿದ್ದರು. ಅಲ್ಲಿ ಎಲ್ಲರೂ ಮಾಲಿನ್ಯ ರಹಿತ ಗಾಡಿಯಲ್ಲಿಯೆ ಓಡಾಡುತ್ತಾರೆ, ಪ್ಲಾಸ್ಟಿಕ್ ಬಳಸುವುದಿಲ್ಲ, ರಾಸಾಯನಿಕ ಗೊಬ್ಬರವಿಲ್ಲ. ಒಟ್ಟಿನಲ್ಲಿ ವಸುಧೆ ಅತ್ಯಂತ ವಿಜೃಭಣೆಯಿಂದ ವಾಸಿಸುತ್ತಿದ್ದಾಳೆ ಮಾತ್ರವಲ್ಲದೆ ಮನಸಿನ ಮಾಲಿನ್ಯ ತಡೆಯಲು ಆಗಿಂದ್ದಾಗೆ ಸತ್ಸಂಗ, ಸಂಗೀತ, ವಾದ್ಯ ಗೋಷ್ಠಿ ಗಳು ನಡೆಯುತ್ತಿದ್ದವು. ಎಲ್ಲಿ ನೋಡಿದರೂ ಮರಗಳು , ಎಷ್ಟೇ ನಡೆದರು ಸುಸ್ತು ಆಗುತ್ತಿರಲಿಲ್ಲ. ಇಲ್ಲಿಗೆ ಧ್ಯಾನ ಮಾಡಲು ಕೂಡ ಬರುವವರ ಸಂಖ್ಯೆ ಹೆಚ್ಚಾಗಿತ್ತು. ಮೆಲ್ಲ ಮೆಲ್ಲಗೆ ಇದರ ಹೆಸರು ಚಿರಪರಿಚಿತವಾಯಿತು, ಆದರೆ ಇದರ ಹಿಂದೆ ಇದ್ದ ತ್ರಿಜಲ ಮತ್ತು ಮಹಾರ ಹೆಸರು ಎಲ್ಲಿಯೂ ಗೊತ್ತಾಗದಂತೆ, ಯಾವುದೇ ಪ್ರಚಾರದ ಆಸೆ ಪಡದೆ, ನೈಜ ಕಾಳಜಿಯಿಂದ ತಮ್ಮ ಕೆಲಸ ಮುಂದುವರೆಸಿದ್ದರು.ಕಾರಿನ ಚಾಲಕನಿoದ ಇದನ್ನು ತಿಳಿದ ಒಡತಿಗೆ ಸಹಿಸಲಾಗಲೆ ಇಲ್ಲ. ಮರುದಿನವೇ ಪತ್ರಿಕೆಗೆ ಒಂದು ಸಂದರ್ಶನ ನೀಡಿ, ಈಕೆ ಇಂದಲೇ ಚಿತ್ರಕೂಟ ಇಷ್ಟು ಬೆಳೆದದ್ದು , ತ್ರಿಜಲ ತಮ್ಮ ಕೈಕೆಳಗೆ ಪಳಗಿದವ, ತಾವೇ ಕಾಳಜಿವಹಿಸಿ ಅವನಿಗೆ ಇಂತಹ ಜನಸೇವೆ ಮಾಡಲು ಪ್ರೇರೇಪಿಸಿದ್ದು ಎಂಬೆಲ್ಲ ಮಸಾಲೆ ಸೇರಿಸಿ ಹೇಳಿದರು. ಅದು ದಿನಪತ್ರಿಕೆಯಲ್ಲಿ ಪ್ರಕಟವಾಯಿತು ಕೂಡ. ರಾಜಾರಾಮರ ಕೋಪ ನೆತ್ತಿಗೆ ಏರಿತ್ತಾದರು ಏನು ಮಾಡುವಂತಿರಲಿಲ್ಲ. ಮಹಿಳಾ ಸಂಘದಿಂದ ಒಂದೆರಡು ಸನ್ಮಾನ , ಬಿಟ್ಟಿ ಪ್ರಚಾರ ಪಡೆದುಕೊಂಡು ಪರಿಸರ ಪ್ರೇಮಿಯ ಮುಖವಾಡ ಧರಿಸಿ ಒಡತಿ ಬೀಗುತ್ತಿದ್ದದ್ದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿತ್ತು.


ಸಿಂಗಾಪುರದ ಮಗನ ಮನೆಗೆ ಹೋಗಿ ಏನೋ ಬಹಳ ಸಹಾಯ ಮಾಡುತ್ತಿದೇನೆ ಎಂಬ ಹೆಗ್ಗಳಿಕೆಗೆ ಒಡತಿಯ ಸವಾರಿ ಅಲ್ಲಿಗೆ ತಲುಪಿತ್ತು. ಇನ್ನು ಮೂರು ತಿಂಗಳು ರಾಜಾರಾಮರಿಗೆ ನೆಮ್ಮದಿ, ಆ ಸಮಯದಲ್ಲಿ ಒಂದೆರಡು ವಾರ ಚಿತ್ರಕೂಟಕ್ಕೆ ಹೋಗಿ ಕಾಲ ಕಳೆಯುವ ನಿರ್ಧಾರ ಮಾಡಿದ್ದರು. ತಮ್ಮ ತೋಟವನ್ನು ಮೊದಲಿನಂತೆ ಆಗದಿದ್ದರು ಸ್ವಲ್ಪ ಮಟ್ಟಿಗೆಯಾದರು ಸರಿ ಮಾಡಬೇಕೆಂಬ ಆಸೆಯೂ ಇತ್ತು. ಮಹಾ - ತ್ರಿಜಲರು ಅತ್ಯಂತ ಆತ್ಮೀಯತೆಯಿಂದ ಬರಮಾಡಿಕೊಂಡರು. ಒಡತಿಯ ಕ್ರಿಯೆಗಳಿಗೆ ಏನು ನೋವು ಪಟ್ಟುಕೊಳ್ಳದೆ, ಅದನ್ನೆಲ್ಲ ಮರೆಯುವಂತೆ ಸಲಹೆ ಇಟ್ಟರು. ತೋಟವನ್ನು ತಮ್ಮ ಶಕ್ತಿ ಮೀರಿ ಕೆಲಸ ಮಾಡಿ ಒಂದು ರೂಪಕ್ಕೆ ಬರುವಂತೆ ಮಾಡಿದರು. ಮೂರು ತಿಂಗಳು ಕಳೆದದ್ದೇ ಗೊತ್ತಾಗಲಿಲ್ಲ ರಾಜರಾಮರಿಗೆ, ಮಡದಿಯ ಕರೆ ಬಂದಿತ್ತು ವಿಮಾನ ನಿಲ್ದಾಣಕ್ಕೆ ಕಾರು ಕಳಿಸಲು. ಮನೆಗೆ ಬಂದದ್ದೇ ಸಿಡಿ - ಸಿಡಿ ಎನ್ನುತ್ತಿದ್ದದ್ದನ್ನು ನೋಡಿ ಮರುದಿನ ಮಗನಿಗೆ ಕರೆ ಮಾಡಿದರು. ಮಗ ಹೇಗೆ ಈಕೆ ಕಿರಿ ಕಿರಿ ಉಂಟು ಮಾಡಿ , ಮನೆಯ ನೆಮ್ಮದಿ ಹಾಳು ಮಾಡಿ , ದಾರಿ ಕಾಣದೆ ಬೇರೆ ಮನೆಯ ವ್ಯವಸ್ಥೆ ಮಾಡಿ ನಿಲ್ಲಿಸಬೇಕಾಯಿುತು ಎಂದು ಹೇಳಿದ ಮಾತು ಕೇಳಿ ಮತ್ತೊಮ್ಮೆ ಚಿಂತೆಗೆ ಒಳಗಾದರು. ಬಹಳ ಹೊತ್ತು ಯೋಚಿಸಿ ಕೊನೆಗೆ ಇದಕ್ಕೆ ಮದ್ದು ಇಲ್ಲವೆಂದು ತಿಳಿದ ನಂತರ ಸುಮ್ಮನೆ ಬೇರೆ ಕೆಲಸ ಮಾಡುತ್ತಾ ತಮ್ಮ ಆರೋಗ್ಯ ನೋಡಿಕೊಳ್ಳುವುದೇ ಉತ್ತಮವೆಂದು ಅಂದುಕೊಂಡರೂ.

ಪನ್ನೇರಳೆ ಮರ ಹಣ್ಣಿನಿಂದ ತುಂಬಿದ್ದರೆ, ಒಂದು ಕಡೆ ಪಾರಿಜಾತದ ಪರಿಮಳ, ದುಂಬಿಯ ಜೇಂಕಾರ ರಾಜರಾಮರು ವಸುಂಧರೆಯ ಮಡಿಲಲ್ಲಿ ತಮ್ಮೆಲ್ಲ ಚಿಂತೆಯನ್ನು ಮರೆತು, ಅವಳ ಸೌಂದರ್ಯ, ಪ್ರೀತಿಯಲ್ಲಿ ನೆಮ್ಮದಿ ಕಂಡುಕೊಂಡರು. ಮಡದಿ ತನ್ನ ನೆಮ್ಮದಿಯನ್ನು ಹಳೆ ಚಾಳಿ ಮುಂದುವರೆಸುತ್ತಾ ಕಂಡುಕೊಂಡಿದ್ದರು. ತ್ರಿಜಲ- ಮಹಾರು ಮಣ್ಣಿನ ಋಣ ತೀರಿಸುವಲ್ಲಿ ತಮ್ಮ ನೆಮ್ಮದಿ ಕಂಡುಕೊಂಡಿದ್ದರು.
ವಸುಂಧರೆ ಮಾತ್ರ ಎಲ್ಲರನ್ನೂ ತನ್ನ ಬಸಿರಿನಲ್ಲಿ ಹೊತ್ತು ಪೊರೆಯುತ್ತಿದ್ದಾಳೆ.


Comments

  1. Superb dear, great effort.......
    Though you are not into farming completely but still you felt it awesome.

    ReplyDelete

Post a Comment

Popular posts from this blog

Sarees and Secrets

Emotional Rollercoaster: Riding the Waves of Dysphoria and Euphoria

Error is Human?