Simple ಆಧ್ಯಾತ್ಮ
ಗರ್ಭಗುಡಿಯ ಮುಂದೆ ನಿಂತು, ರಾಧೆ ಕೃಷ್ಣನ ನೋಡಿ, ಕೈ ಜೋಡಿಸಿ ಕಣ್ಣು ಮುಚ್ಚಿ ಮತ್ತೊಮ್ಮೆ ಆ ನೋಟವನ್ನು ಅಚ್ಚು ಒತ್ತಿಕೊಂಡದ್ದು, ನೆನೆದಾಗ ಆ ಚಿತ್ರ ಕಣ್ಣಮುಂದೆ ಬರಬೇಕು ಅನ್ನೋ ಆಸೆಯಿಂದ! ಅದೇನು ಅಲಂಕಾರ! ಹಾಗೆ ಒಂದೆರಡು ನಿಮಿಷ ಆ ಜೋಡಿ ಮೋಡಿ ಮಾಡಿದ ಹಾಗಿತ್ತು. ಅದೇನೊ ಇದ್ದಕ್ಕಿದ್ದ ಹಾಗೆ ಸಂತೆಯಲ್ಲಿ ಇದ್ದ ಹಾಗೆ ಮಾತು ಕೇಳಲು ಶುರುವಾಯಿತು. "ನಾವು ಪುರಿ ಜಗನ್ನಾಥನಲ್ಲಿ ನೋಡಿದ ಹಾಗೆ ಇದೆ ಇಲ್ಲೂ, ಆಮೇಲೆ ಅಮೇರಿಕಕ್ಕೆ ಹೋಗಿ ಬಂದಿದ್ದು ಅದಕ್ಕೆ ನಿಂಗೆ ಮರೆತು ಹೋಗಿದೆ " ಅದಾಗಿ ಇದೆ ಮನುಷ್ಯ ಅಲ್ಲಿ ಒಂದು ನೃತ್ಯ ಭಂಗಿಯಲ್ಲಿ ನಿಂತು ಜೋರಾಗಿ "ಜೈ ಶ್ರೀಕೃಷ್ಣ" ಎಂದು ಕೂಗು ಹಾಕಿ ಸುತ್ತ ಎಲ್ಲರು ತನ್ನನ್ನು ಗಮನಿಸಿದರ ಖಾತರಿ ಪಡಿಸಿಕೊಂಡು ಮುಂದೆ ಮತ್ತಷ್ಟೇ ಜೋರು ಜೋರಾಗಿ ತನ್ನ ಇತರ ಸಾಹಸಗಳನ್ನು ಹೇಳುತ್ತಾ ಹೋದ. ಈ ಪ್ರದರ್ಶನದ ಭಕ್ತಿ ನೋಡಿ, ಅದೊಂದು ನೆನಪು ಹಾಗೆ ಮನಸ್ಸಿಗೆ ಬಂತು,ಪ್ರಸಾದ ತಿಂದು, ತುಸು ಹೊತ್ತು ಅಲ್ಲೆ ಕೂತು ಅದನ್ನು ಮೆಲುಕು ಹಾಕಿದ್ದಾಯಿತು. ಪ್ರತಿ ದಿನವೂ ಮುಂಜಾನೆ 6 ಗಂಟೆಗೆ ರಾಮಕೃಷ್ಣ ಆಶ್ರಮಕ್ಕೆ ಹೋಗಿ, ಕಾಲು ಗಂಟೆ ಅಲ್ಲೆ ದಿವ್ಯತ್ರಯರ ಮುಂದೆ ಕೂತು ಬಂದರೆ ಒಂದು ಸಮಾಧಾನ. ಹಾಗೆ ಹೋದಾಗೆಲ್ಲ ಪಾರಿಜಾತದ ಮಾಲೆ ಅವರನ್ನು ಅಲಂಕರಿಸಿರುತಿತ್ತು. ನನಗೊಂದು ಕುತೂಹಲ ಯಾರು ಅದರ ಮಾಲೆ ಮಾಡುವವರು? ಯಾರಿಗೆ ಅಷ್ಟೂ ತಾಳ್ಮೆ ಇದೆ? ಅಷ್ಟು ಪ್ರೀತಿ? ಅಷ್ಟು ಮಮತೆ? ಈ ಕುತೂಹಲ ದಿನೇ ದಿನ...