Simple ಆಧ್ಯಾತ್ಮ
ಗರ್ಭಗುಡಿಯ ಮುಂದೆ ನಿಂತು, ರಾಧೆ ಕೃಷ್ಣನ ನೋಡಿ, ಕೈ ಜೋಡಿಸಿ ಕಣ್ಣು ಮುಚ್ಚಿ ಮತ್ತೊಮ್ಮೆ ಆ ನೋಟವನ್ನು ಅಚ್ಚು ಒತ್ತಿಕೊಂಡದ್ದು, ನೆನೆದಾಗ ಆ ಚಿತ್ರ ಕಣ್ಣಮುಂದೆ ಬರಬೇಕು ಅನ್ನೋ ಆಸೆಯಿಂದ! ಅದೇನು ಅಲಂಕಾರ! ಹಾಗೆ ಒಂದೆರಡು ನಿಮಿಷ ಆ ಜೋಡಿ ಮೋಡಿ ಮಾಡಿದ ಹಾಗಿತ್ತು.
ಅದೇನೊ ಇದ್ದಕ್ಕಿದ್ದ ಹಾಗೆ ಸಂತೆಯಲ್ಲಿ ಇದ್ದ ಹಾಗೆ ಮಾತು ಕೇಳಲು ಶುರುವಾಯಿತು. "ನಾವು ಪುರಿ ಜಗನ್ನಾಥನಲ್ಲಿ ನೋಡಿದ ಹಾಗೆ ಇದೆ ಇಲ್ಲೂ, ಆಮೇಲೆ ಅಮೇರಿಕಕ್ಕೆ ಹೋಗಿ ಬಂದಿದ್ದು ಅದಕ್ಕೆ ನಿಂಗೆ ಮರೆತು ಹೋಗಿದೆ " ಅದಾಗಿ ಇದೆ ಮನುಷ್ಯ ಅಲ್ಲಿ ಒಂದು ನೃತ್ಯ ಭಂಗಿಯಲ್ಲಿ ನಿಂತು ಜೋರಾಗಿ "ಜೈ ಶ್ರೀಕೃಷ್ಣ" ಎಂದು ಕೂಗು ಹಾಕಿ ಸುತ್ತ ಎಲ್ಲರು ತನ್ನನ್ನು ಗಮನಿಸಿದರ ಖಾತರಿ ಪಡಿಸಿಕೊಂಡು ಮುಂದೆ ಮತ್ತಷ್ಟೇ ಜೋರು ಜೋರಾಗಿ ತನ್ನ ಇತರ ಸಾಹಸಗಳನ್ನು ಹೇಳುತ್ತಾ ಹೋದ.
ಈ ಪ್ರದರ್ಶನದ ಭಕ್ತಿ ನೋಡಿ, ಅದೊಂದು ನೆನಪು ಹಾಗೆ ಮನಸ್ಸಿಗೆ ಬಂತು,ಪ್ರಸಾದ ತಿಂದು, ತುಸು ಹೊತ್ತು ಅಲ್ಲೆ ಕೂತು ಅದನ್ನು ಮೆಲುಕು ಹಾಕಿದ್ದಾಯಿತು.
ಪ್ರತಿ ದಿನವೂ ಮುಂಜಾನೆ 6 ಗಂಟೆಗೆ ರಾಮಕೃಷ್ಣ ಆಶ್ರಮಕ್ಕೆ ಹೋಗಿ, ಕಾಲು ಗಂಟೆ ಅಲ್ಲೆ
ದಿವ್ಯತ್ರಯರ ಮುಂದೆ ಕೂತು ಬಂದರೆ ಒಂದು ಸಮಾಧಾನ. ಹಾಗೆ ಹೋದಾಗೆಲ್ಲ ಪಾರಿಜಾತದ ಮಾಲೆ ಅವರನ್ನು ಅಲಂಕರಿಸಿರುತಿತ್ತು. ನನಗೊಂದು ಕುತೂಹಲ ಯಾರು ಅದರ ಮಾಲೆ ಮಾಡುವವರು? ಯಾರಿಗೆ ಅಷ್ಟೂ ತಾಳ್ಮೆ ಇದೆ? ಅಷ್ಟು ಪ್ರೀತಿ? ಅಷ್ಟು ಮಮತೆ?
ಈ ಕುತೂಹಲ ದಿನೇ ದಿನೇ ಹೆಚ್ಚುತ್ತಿತ್ತು ಅದಕ್ಕೆ ಒಂದು ದಿನ 5:30ಗೆ ಹೋಗಿ ನೋಡಿದರೆ ಅದಾಗಲೇ ಮಾಲೆಗಳು ಅಲಂಕೃತಗೊಂಡಿದ್ದವು!
ಹಾಗಾದರೆ ಅಲ್ಲಿಯೇ ಇರುವ ಸನ್ಯಾಸಿ ಒಬ್ಬರ ಕೆಲಸ ಇದು ಎಂದು ಭಾವಿಸಿಕೊಂಡೆ.
ಅದೊಂದು ದಿನ ಆಶ್ರಮದಲ್ಲಿ ಕಾರ್ಯಕ್ರಮ,ರಜೆ ಇದ್ದದ್ದು ಬಹಳ ಖುಷಿ ಆಯ್ತು, ನಾನು ಹೋಗಲು ಸಾಧ್ಯವಾಯಿತು. ಒಂದಕ್ಕಿಂತ ಒಂದು ಅದ್ಭುತವಾದ ಕಾರ್ಯಕ್ರಮಗಳು, ಊಟವಂತೂ! ಸರಿ ಎಲ್ಲವೂ ಸಾಂಗವಾಗಿ ಮುಗಿಯಿತು. ಎಲ್ಲರೂ ಸೇರಿದೆವು, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರ ಹೆಸರು ಹೇಳಿ ಸ್ವಾಮಿಗಳು ಅಭಿನಂನಂದಿಸಿದರು. ಹಾಗೆ ಹೇಳುತ್ತಾ ಪಾರಿಜಾತ ಹೂವಿನ ಹಾರದ ವಿಷಯ ಹೇಳಿ ಹೆಸರು ಹೇಳಿದರು, ತಕ್ಷಣ ತಿರುಗಿ ನೋಡಿದೆ,ಯಾರೂ ಅಂತ ಗೊತ್ತಾಗಲೆ ಇಲ್ಲ!
ಸನ್ಯಾಸಿಯಲ್ಲ ಎಂಬುದು ಖಾತ್ರಿಯಾಯಿತು ಮತ್ತದೇ ಯಾರಿರಬಹುದು ಎಂಬ ಪ್ರಶ್ನೆ.
ಕಾರ್ಯಕ್ರಮವಲ್ಲದೇ ಬೇರೆ ದಿನವೂ ಹಾರ ಹಾಕುತ್ತಿದ್ದ ಈಕೆ ಯಾರಿರಬಹುದು ಎಂಬ ಕುತೂಹಲ ಮತ್ತಷ್ಟು ಹೆಚ್ಚಿತು.ಹೀಗೊಂದು ಉಪಾಯ ಮಾಡಿದೆ, ಸಂಶಯವಿರುವವರ ಹತ್ತಿರ ಹೋಗಿ ಸುಮ್ಮನೆ ಹಾರದ ಬಗ್ಗೆ ಹೇಳಿದೆ. ಒಬ್ಬರು " ಪುರುಸೊತ್ತು ಇರುವವರು ಮಾಡುತ್ತಾರೆ, ನಮ್ಮ ಹಾಗೆ ಬಿಸಿ ಇರುವವರು ಹೇಗೆ.." ಮತ್ತೊಬ್ಬರು," ಮಾಡಬಹುದು.." ಹೀಗೆ ಕೆಲವು ಉತ್ತರಗಳು ಬಂದವು ಇವರುಗಳು ಅಲ್ಲ ಎಂದು ಅನಿಸಿತು. ಅದೇ ಹೆಸರಿನವರು ಇನ್ನು ಒಬ್ಬರಿದ್ದರು, ಸರಿ ಅವರನ್ನು ಕೇಳಿದೆ, ಆಕೆ ಹೊಳೆಯುವ ಕಣ್ಣಿನಲ್ಲಿ, " ಚೆನ್ನಾಗಿ ಮಾಡಿದರ ಮಗ?!" ಅಂತ ಕೇಳಿ ಉತ್ತರ ಕೊಡುವ ಮುನ್ನ "ದಿವ್ಯತ್ರಯರ ಮೇಲೆ ಈ ಹಾರ ನೋಡುವುದೇ ಒಂದು ತೃಪ್ತಿ, ಸಮಾಧಾನ ಕೊಡುತ್ತೆ ಅಲ್ವ ಮಗ" ಎಂದು ಹೇಳಿದರು.ಅಷ್ಟಾಗಿಯು ಆಕೆ ತಾನು ಮಾಡಿದ್ದು ಎಂದು ಹೇಳಲಿಲ್ಲ.
ಕಡೆಗೂ ಆಕೆ ಯಾರೆಂದು ಪತ್ತೆ ಹಚ್ಚಿದ ಖುಷಿ ಒಂದು ಕಡೆಯಾದರೆ ,ಯಾವುದೇ ಹೆಸರಿನ ಅಪೇಕ್ಷೆ ಇಲ್ಲದೆ, ಕೇವಲ ಅವರ ಮನಸಿನ ಸಮಾಧಾನಕ್ಕೆ ಹಾರಗಳನ್ನು ಮಾಡುವ ಈಕೆಯನ್ನು ನೋಡಿದ್ದು ಮತ್ತಷ್ಟು ಖುಷಿಯಾಗಿತ್ತು !!!
ಆಧ್ಯಾತ್ಮಿಕ ಚಿಂತನೆ ಎಂದು ಅರ್ಥವಾಗದ, ಸ್ಮೃತಿಗೆ ನಿಲುಕದ ಯಾವುದೋ ವಿಷಯದ ಬಗ್ಗೆ ಚರ್ಚಿಸುವ ಬದಲು,ಈ ರೀತಿಯ ವ್ಯಕ್ತಿ ಅಥಾವ ವ್ಯಕ್ತಿತ್ವದ ಬಗ್ಗೆ ತುಸು ಮಾತನಾಡುವುದು ಚಂದ ಅನಿಸಿಬಿಡುತ್ತದೆ.
Comments
Post a Comment