ಭ್ರಮನಿರಸನ
ವಿಶ್ವವಿದ್ಯಾನಲಯದ ಎದುರು ಇದ್ದ ಬಸ್ ನಿಲ್ದಾಣದಲ್ಲಿ ನಿಂತು ಸಮಯ ನೋಡಿಕೊಂಡಳು 4:30 ಕಳೆದಿತ್ತು. ಮರುದಿನ ಅವಳ ಗೆಳತಿಯ ಅಣ್ಣನ ಮದುವೆ, ಇವಳು ದಿನ ಮುಂಚಿತವಾಗಿ ಬರಲೇಬೇಕೆಂದು ಅವಳ ಗೆಳತಿ ಅದಾಗಲೇ ಒತ್ತಾಯ ಮಾಡಿದ್ದಳು.ಇವರಿಬ್ಬರೂ ಒಂದೇ ಕೋಣೆಯಲ್ಲಿ 3 ವರ್ಷದಿಂದ ಜೊತೆಯಲ್ಲೇ ಇದ್ದವರು. ಹಿಂದಿನ ದಿನವಷ್ಟೇ ಮದುವೆಗೆ ತೆಗೆದುಕೊಂಡು ಹೋಗಲಿರುವ ಒಳ್ಳೆಯ ಬಟ್ಟೆ, ಬಳೆ, ಬೊಟ್ಟು, ಹಣದ ಸಂಚಿ ಎಲ್ಲವನ್ನೂ ತಯಾರು ಮಾಡಿ ಇಟ್ಟಿದ್ದಳು. ಹೇಗೂ ಸಣ್ಣ ಪುಟ್ಟ ಖರೀದಿಗೆ ಗೆಳತಿಯ ಅಪ್ಪ ಅಮ್ಮ ಕಾರಿನಲ್ಲಿ ಬರುವವರಿದ್ದರು ಹಾಗಾಗಿ ಒತ್ತಾಯ ಮಾಡಿ ಈಕೆಯ ಕೈಚೀಲವನ್ನು ತೆಗೆದುಕೊಂಡು ಮತ್ತೆರಡು ದಿನದಲ್ಲಿ ಕಾಣುವ ಬಗ್ಗೆ ಮಾತನಾಡಿ ಗೆಳತಿ ಹೊರಟಿದ್ದಳು. ಇದೆಲ್ಲ ಯೋಚನೆ ಮಾಡುತ್ತಿರುವಾಗ ಬಸ್ ಬಂದಿತು. ಬಸ್ ಹತ್ತಿ ಕೂತಳು, ,ಕ್ಷಣ ಮಾತ್ರದಲ್ಲಿ ಬಸ್ ತುಂಬಿ ಹೋಗಿತ್ತು.ಮುಂದಿನ 3-4 ಸ್ಟಾಪಿನಲ್ಲಿ ಇಳಿಯುವವರ ಟಿಕೆಟ್ ಹಣ ಪಡೆದು, ಬಸ್ ಸ್ವಲ್ಪ ಖಾಲಿಯಾದ ಮತ್ತೆ ಕುಳಿತವರ ಟಿಕೆಟ್ ಹಣಕ್ಕೆ ಕಂಡಕ್ಟರ್ ಬಂದಾಗ ತನ್ನ ಗೆಳತಿ ಮೊದಲೇ ಹೇಳಿದಂತೆ 15 ರೂಪಾಯಿ ಕೊಟ್ಟು ಕಾಲೇಜಿನ ಗುರುತಿನ ಚೀಟಿ ತೋರಿಸಿದಳು, ಅವನು ಏನು ಮಾತನಾಡದೇ ಮುಂದೆ ಹೋದ. ನಾಳಿನ ಮದುವೆ , ಅಲ್ಲಿ ತನ್ನ ಗೆಳತಿ ಹಾಗೂ ತಾನು ಮಾಡಲಿರುವ ತಲೆಹರಟೆ ಕೆಲಸಗಳು, ಅಣ್ಣನನ್ನು ಹೇಗೆಲ್ಲಾ ಕಾಡಬೇಕು ಎಂದು ಹಾಕಿದ ಯೋಜನೆಗಳು ಹೀಗೆ ನೂರೆಂಟು ಯೋಚನೆ ಇವಳಿಗೆ.ಅರ...